ಹೆಲ್ಮೆಟ್ ಧರಿಸದೆ ಒನ್ ವೇ ರೈಡಿಂಗ್ ಹಾಗೂ ಡ್ರಿಂಕ್ ಅಂಡ್ ಡ್ರೈವ್ ಮಾಡಿದ ಆರೋಪಿಗೆ ಚಿಕ್ಕಮಗಳೂರು ನ್ಯಾಯಾಲಯವು ಬೋರ್ಡ್ ಹಿಡಿದು ಇಡೀ ದಿನ ರಸ್ತೆ ಮಧ್ಯೆ ನಿಲ್ಲುವ ಶಿಕ್ಷೆ ವಿಧಿಸಿದೆ.
ಕಡೂರು ಪಟ್ಟಣದ ಬಿಸಿಲೇಹಳ್ಳಿ ಗ್ರಾಮದ ರಂಜಿತ್ ನು ಸಾಕಷ್ಟು ಸಲ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದ್ದ. ಪೊಲೀಸರು ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯದಲ್ಲಿ ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಕ್ಕೆ ಕೋರ್ಟ್ ಹೀಗೆ ಕಮ್ಯುನಿಟಿ ಸರ್ವಿಸ್‌ನ ವಿಭಿನ್ನ ಶಿಕ್ಷೆ ನೀಡಿದೆ.
ಮಾ.17ರಂದು ಮಂಗಳವಾರ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಕಡೂರು ಪಟ್ಟಣದ ಮಲ್ಲೇಶ್ವರ ಸರ್ಕಲ್‌ನಲ್ಲಿ ರಸ್ತೆ ಮಧ್ಯೆ ಬೋರ್ಡ್ ಹಿಡಿದು ನಿಲ್ಲುವಂತೆ ಕೋರ್ಟ್ ಆದೇಶಿಸಿದೆ. ಕೋರ್ಟ್ ಆದೇಶದಂತೆ ಕೈಯಲ್ಲಿ ಬೋರ್ಡ್ ಹಿಡಿದು ತಪ್ಪಿತಸ್ಥನ್ನು ನಿಲ್ಲುತ್ತಾನೋ ಇಲ್ಲವೋ ಎಂದು ಗಮನಿಸಲು ಪೊಲೀಸ್ ಸಿಬ್ಬಂದಿಯನ್ನು ನೇಮಿಸುವಂತೆ ನ್ಯಾಯಾಲಯ ಸೂಚಿಸಿತ್ತು.
ಶಿಕ್ಷೆ ಪೂರ್ಣಗೊಂಡ ನಂತರ ಪೊಲೀಸರು ವರದಿ ಸಲ್ಲಿಸುವಂತೆ ಕೋರ್ಟ್ ಆದೇಶದಲ್ಲಿ ತಿಳಿಸಿದೆ. ಈ ಮೂಲಕ ನ್ಯಾಯಾಲಯ ಟ್ರಾಫಿಕ್ ನಿಯಮಗಳ ಪಾಲನೆ ಮಾಡುವಂತೆ ಸಾರ್ವಜನಿಕರಿಗೆ ಎಚ್ಚರಿಕೆಯ ಸಂದೇಶ ನೀಡಿದೆ. ಸಾರ್ವಜನಿಕರು ಈ ಶಿಕ್ಷೆಯನ್ನು ಸ್ವಾಗತಿಸಿ ಮೆಚ್ಚುಗೆ ಸೂಚಿಸಿದ್ದಾರೆ.


