ಮಗ ಅನೈತಿಕ ಸಂಬಂಧ ಹೊಂದಿದ್ದಾನೆಂಬ ಕಾರಣಕ್ಕೆ ತಾಯಿಗೆ ಸಾಮಾಜಿಕ ಬಹಿಷ್ಕಾರ ಹಾಕಿದ್ದರಿಂದ ನೊಂದು ಆಕೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಯಾದಗಿರಿಯಲ್ಲಿ ವಡಗೇರ ತಾಲೂಕಿನ ಜೋಳದಡಗಿ ಬ್ರಿಡ್ಜ್–ಕಂ–ಬ್ಯಾರೇಜ್ ಬಳಿ ನಡೆದಿದೆ.
ಯಾದಗಿರಿ ನಗರದ ಹೊರವಲಯದ ಗಿರಿನಗರ ನಿವಾಸಿ ಕಮಲಮ್ಮ (42) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಕಮಲಮ್ಮ ಸಿಳ್ಳೆ ಕ್ಯಾತ ಸಮುದಾಯಕ್ಕೆ ಸೇರಿದವರಾಗಿದ್ದು, ಅವರ ಮಗ ಎರ್ರಿಸ್ವಾಮಿ ವಿರುದ್ಧ ಅನೈತಿಕ ಸಂಬಂಧದ ಆರೋಪ ಕೇಳಿಬಂದಿದೆ. ಹೀಗಾಗಿ ಸಮುದಾಯದ ಮುಖಂಡರು ಇಡೀ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ವಿಧಿಸಿದ್ದಾರೆ ಎನ್ನಲಾಗಿದೆ.
ಮೀನುಗಾರಿಕೆ ನಡೆಸಲು ಮತ್ತು ಮೀನು ಮಾರಾಟ ಮಾಡಲು ಕೂಡ ಅವಕಾಶ ನೀಡದೆ ಮುಖಂಡರು ನಿರ್ಬಂಧ ಹೇರಿದ್ದರು. ಇದರಿಂದ ನೊಂದು ಕಮಲಮ್ಮ ಮಗಳ ಊರಾದ ಜೋಳದಡಗಿ ಗ್ರಾಮಕ್ಕೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆಗೆ ಮೊದಲು ಕಮಲಮ್ಮ ಬ್ಯಾರೇಜ್ ಮೇಲೆ ಮಾಂಗಲ್ಯ ಸರ ತೆಗೆದಿಟ್ಟಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ನೀರಿನಿಂದ ಹೊರತೆಗೆದಿದ್ದಾರೆ. ವಡಗೇರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ಡಿಸೆಂಬರ್‌ನಲ್ಲಿ ಯಾವುದೇ ವ್ಯಕ್ತಿ, ಕುಟುಂಬ, ಕುಟುಂಬದ ಸದಸ್ಯರನ್ನು ಸಾಮಾಜಿಕವಾಗಿ ಬಹಿಷ್ಕರಿಸಿದರೆ 1 ಲಕ್ಷ ರೂಪಾಯಿವರೆಗೂ ದಂಡ ಹಾಗೂ ಮೂರು ವರ್ಷದವರೆಗೆ ಜೈಲು ಶಿಕ್ಷೆ ಅಥವಾ ಎರಡನ್ನೂ ವಿಧಿಸಲು ಹಾಗೂ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಲು ಅವಕಾಶವಿರುವ ಮಸೂದೆಗೆ ವಿಧಾನಸಭೆ ಸರ್ವಾನುಮತದಿಂದ ಅನುಮೋದನೆ ನೀಡಿದೆ.
ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷವಾದರೂ ಸಾಮಾಜಿಕವಾಗಿ ಬಹಿಷ್ಕಾರ ಹಾಕುವುದು ನಡೆದಿದೆ. ಇದು ಮಾನವ ಹಕ್ಕುಗಳ, ನಾಗರಿಕ ಹಕ್ಕುಗಳ ಉಲ್ಲಂಘನೆ, ಇದನ್ನು ನಿಷೇಧಿಸಲು ಐತಿಹಾಸಿಕ ಮಸೂದೆಯನ್ನು ರೂಪಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಎಚ್. ಸಿ. ಮಹಾದೇವಪ್ಪ ಹೇಳಿದ್ದರು.


