ಗ್ಯಾಸ್ ಪೂರೈಕೆಯಲ್ಲಿ ಉಂಟಾಗಿರುವ ಸಮಸ್ಯೆಯನ್ನು ಸರ್ಕಾರಗಳು ಜನತೆಗೆ ಸರಿಯಾದ ರೀತಿಯಲ್ಲಿ ವಿವರಿಸಿ ಆತಂಕ ದೂರ ಮಾಡಬೇಕಿದೆ. ಯುದ್ದದ ಯಾವುದೇ ಸಂಕಷ್ಟವನ್ನು ಎದುರಿಸಲು ದೇಶದ ಜನತೆ ಇಂದು ಸರ್ವಸಿದ್ಧವಾಗಬೇಕಿದೆ . ಈ ದಿಶೆಯಲ್ಲಿ ಜನತೆ ಕಾನೂನು ಕೈಗೆತ್ತಿಕೊಂಡು ಮರಗಳಿಗೆ ಕೊಡಲಿ ಹಾಕುವ ಪ್ರವೃತ್ತಿ ಸಲ್ಲದು.
ಜಾಗತಿಕ ಬೆಳವಣಿಗೆ ಮತ್ತು ಹಸಿರು ಸಂರಕ್ಷಣೆ – ಇವೆರೆಡೂ ಪ್ರಪಂಚಕ್ಕೆ ಒಂದು ಸವಾಲು ಹೌದು. ಭಾರತ ಬೃಹತ್ ಭೌಗೋಳಿಕ ಪ್ರದೇಶ ಮತ್ತು ಜನಸಂಖ್ಯೆಯನ್ನು ಹೊಂದಿರುವ ದೇಶ. ಇಲ್ಲಿ ಮೇಲೆ ಹೇಳಿರುವ ಎಲ್ಲ ಪ್ರಮುಖ ಸಂಗತಿಗಳ ಆಶಯಗಳು ನೆರವೇರುವುದು ಸುಲಭದ ಮಾತಲ್ಲ.
ದೇಶದಲ್ಲಿಂದು ಗ್ರಾಮಗಳಿಗೂ ಗ್ಯಾಸ್ ಇಂಧನದ ಪೂರೈಕೆ ಇದೆ. ಇದು ಬೆಳವಣಿಗೆಯ ಪ್ರತೀಕ. ಸೌದೆ, ಇದ್ದಿಲು ಮತ್ತು ಸೀಮೆಎಣ್ಣೆ ಬಳಸಿ ಅಡುಗೆ ಮಾಡುವ ಸಂಪ್ರದಾಯಿಕ ಪದ್ದತಿ ಗಣನೀಯ ಪ್ರಮಾಣದಲ್ಲಿ ಬದಲಾಗಿದೆ. ಜಾಗತಿಕ ವ್ಯಾಪಾರಿಕ ದೃಷ್ಟಿಯಲ್ಲಿ ಇದು ತೈಲ ಪೂರೈಕೆ ದೇಶಗಳಿಗೆ ವರದಾನ . ಇದೇ ವೇಳೆ ದೇಶದ ಮಹಿಳೆಯರ ಆರೋಗ್ಯಕ್ಕೂ ಇದು ನೇರ ಸಂಬಂಧವನ್ನು ಹೊಂದಿರುವಂತಹದು.
ಕೊಲ್ಲಿ ದೇಶಗಳು ಮತ್ತು ಮಧ್ಯಪ್ರಾಚ್ಯದಲ್ಲಿ ಯುದ್ಧ ತಲೆದೋರಿರುವ ದಿಶೆಯಲ್ಲಿ ಭಾರತಕ್ಕೆ ಪೂರೈಕೆಯಾಗುವ ಇಂಧನದಲ್ಲಿ ಭಾರಿ ವ್ಯತ್ಯಯವಾಗಿದೆ. ಇದರಿಂದ ದೇಶದ ಜನತೆ ಗ್ಯಾಸ್ ಬಳಕೆ ವಿಚಾರದಲ್ಲಿ ಕಂಗಾಲಾಗಿದ್ದಾರೆ. ಇದೇ ವೇಳೆ ಗುಡ್ಡಗಾಡು ಮತ್ತು ಗ್ರಾಮೀಣ ಜನತೆ ಮರಗಳನ್ನು ಕಡಿದು ಸೌದೆ ಸ್ಟಾಕ್ ಮಾಡಲು ಮುಂದಾಗಿರುವುದು ಗಮನಾರ್ಹ. ಯುದ್ಧ ಮತ್ತಷ್ಟು ಭೀಕರತೆ ಕಂಡರೆ ಇಂಧನ ಪೂರೈಕೆಯ ಪರಿಸ್ಥಿತಿ ಬಿಗಡಾಯಿಸುವುದೆಂಬ ಭಯ ಮತ್ತು ಆತಂಕ ಜನತೆಯಲ್ಲಿ ತಲೆದೋರಿದೆ. ಸಂಕಷ್ಟ ತಲೆದೋರಿದೆ ಎಂದು ನಮ್ಮ ಸುತ್ತಲಿನ ಮರಗಳನ್ನು ಕಡಿದುರುಳಿಸುವುದು ಸರಿಯಲ್ಲ. ಇದು ಅರಣ್ಯ ಸಂರಕ್ಷಣೆ ಕಾಯಿದೆಗೆ ವಿರುದ್ಧ ಮತ್ತು ಪರಿಸರ ಸಮತೋಲನಕ್ಕೆ ಅಡ್ಡಿ. ಲಕ್ಷಾಂತರ ಕುಟುಂಬಗಳ ಅಡುಗೆ ಮನೆಗಳಲ್ಲಿ ಸಕ್ರಿಯವಾಗಿರುವ ನಾರಿಲೋಕ ಇದನ್ನು ಗಂಭಿರವಾಗಿ ಆಲೋಚಿಸಿದೆ.
ಮತ್ತೊಂದು ಕಡೆ ಪಟ್ಟಣ, ನಗರ ಮತ್ತು ಮಹಾನಗರಗಳಲ್ಲಿ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಿಗೆ ಇಂದು ಗ್ಯಾಸ್ ಕೊರತೆ ಬಾಧಿಸಿದೆ. ನಿತ್ಯ ಸಾವಿರಾರು ಮಂದಿ ಗ್ರಾಹಕರಿಗೆ ಅಡುಗೆ ಮತ್ತು ಆಹಾರವನ್ನು ತಯಾರಿಸಬೇಕಿರುವ ಹೋಟೆಲುಗಳೀಗ ಹಳ್ಳಿಗಾಡಿನ ಮರಗಳ ಹನನಕ್ಕೆ ಕಣ್ಣು ಹಾಕಿದೆ. ಇದಕ್ಕೆ ಸರ್ಕಾರಗಳಂತೂ ಅನುಮತಿ ನೀಡಿಲ್ಲ ಮತ್ತು ನೀಡಲು ಸಾಧ್ಯವೂ ಇಲ್ಲ.
ಕಾಡಿನಲ್ಲಿ ಲಭ್ಯವಿರುವ ಒಣ ಮರ ಮತ್ತು ಉದುರಿದ ಒಣಎಲೆ ಮತ್ತು ಒಣಕಾಯಿ ಗೊರಟೆ ಇತ್ಯಾದಿ ವಸ್ತುಗಳನ್ನು ಕಾನೂನುಬದ್ಧವಾಗಿ ಹೇಗೆ ಸಂಗ್ರಹಿಸಬೇಕೆಂಬ ನಿಯಮಗಳಿವೆ. ಈದಿಶೆಯಲ್ಲಿ ರಾಜ್ಯ ಅರಣ್ಯ ಸಚಿವ ಈಶ್ವರ್ ಖಂಡ್ರೆ ಜನತೆಗೆ ಎಚ್ಚರಿಕೆ ನೀಡಿದ್ದಾರೆ. ಇದು ಸಕಾಲಿಕ. ನಗರ ಪ್ರದೇಶಗಳ ವಾಣಿಜ್ಯ ವಲಯದ ಅಗತ್ಯ ಮತ್ತು ಬೇಡಿಕೆಯನ್ನು ಪೂರೈಸಲು ಪಟ್ಟಭದ್ರರು ಮತ್ತು ಕಾಳಸಂತೆಕೋರರು ಕೈ ಜೋಡಿಸುವ ಚಾಳಿ ಈ ಸಮಾಜಕ್ಕೆ ಹೊಸದೇನಲ್ಲ. ಇಂತಹವರ ಮೇಲೆ ಕಂದಾಯ, ಅರಣ್ಯ ಮತ್ತು ಪೊಲೀಸ್ ಇಲಾಖೆಗಳು ನಿಗಾಯಿಡುವುದು ಅವಶ್ಯ.
ಸರ್ಕಾರಗಳೂ ಅಷ್ಟೆ. ಗ್ಯಾಸ್ ಪೂರೈಕೆಯಲ್ಲಿ ಉಂಟಾಗಿರುವ ಸಮಸ್ಯೆಯನ್ನು ಜನತೆಗೆ ಸರಿಯಾದ ರೀತಿಯಲ್ಲಿ ತಿಳಿಸಿ ಆತಂಕ ದೂರ ಮಾಡುವ ಹೊಣೆಗಾರಿಕೆ ಸರ್ಕಾರದ್ದು. ಯುದ್ದದ ಯಾವುದೇ ಸಂಕಷ್ಟವನ್ನು ಎದುರಿಸಲು ದೇಶದ ಜನತೆ ಇಂದು ಸರ್ವಸಿದ್ಧವಾಗಬೇಕಿದೆ . ಈ ದಿಶೆಯಲ್ಲಿ ಜನತೆ ಕಾನೂನುಗಳನ್ನು ಕೈಗೆ ತೆಗೆದುಕೊಂಡು ಮರಗಳನ್ನು ಕಡಿದುರುಳಿಸುವ ಪ್ರವೃತ್ತಿ ಸಲ್ಲದು.


