ಮದ್ಯ ತಲೆಗೇರಿಸಿಕೊಂಡಿದ್ದ ವ್ಯಕ್ತಿಯು ಅಣ್ಣ, ತಂಗಿಯನ್ನು ಕೊಲೆ ಮಾಡಿರುವ ಘಟನೆ ಮಡಿಕೇರಿ ತಾಲೂಕಿನ ಭಾಗಮಂಡಲದಲ್ಲಿ ನಡೆದಿದೆ. ಯಶೋಧಾ(45), ಕುಂಞರಾಮ(47) ಕೊಲೆಯಾದವರು. ಕೊಲೆ ಆರೋಪಿ ಚಂದು(65) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಕುಡಿದ ಮತ್ತಿನಲ್ಲಿದ್ದ ಆರೋಪಿಯು ಮಾರಕಾಸ್ತ್ರದಿಂದ ಒಡ ಹುಟ್ಟಿದವರನ್ನು ಕೊಚ್ಚಿ ಕೊಂದಿದ್ದು, ಸ್ಥಳಕ್ಕೆ ಕೊಡಗು ಎಸ್ಪಿ ಬಿಂದುಮಣಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ದಂಪತಿಯ ಕೊಲೆಗೈದಾತನಿಗೆ ಮರಣದಂಡನೆ
ಮಹಿಳೆ ಜೊತೆಗಿನ ಅನೈತಿಕ ಸಂಬಂಧ ವಿಚಾರವಾಗಿ ಆಕೆ ಮತ್ತು ಅವಳ ಪತಿಯನ್ನು ಕೊಲೆ ಮಾಡಿದ್ದ ಆರೋಪಿಗೆ ಚಿಕ್ಕಮಗಳೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿ ಆದೇಶಿಸಿದೆ. 2019ರಲ್ಲಿ ಮನೆಯಲ್ಲಿ ಮಲಗಿದ್ದ ಗಂಡ-ಹೆಂಡತಿಯನ್ನು ಆರೋಪಿ ಗೋವಿಂದಪ್ಪ ಹತ್ಯೆ ಮಾಡಿದ್ದ. ಚಿಕ್ಕಮಗಳೂರು ಜಿಲ್ಲೆಯ ಎನ್‌ಆರ್ ಪುರ ತಾಲೂಕಿನ ಸಾತ್ಕೋಳಿಯಲ್ಲಿ ಈ ಕೊಲೆ ನಡೆದಿತ್ತು. ಆರೋಪಿ ಮಚ್ಚಿನಿಂದ ಹಲ್ಲೆಗೈದು ಧರ್ಮಯ್ಯ (53) ಮತ್ತು ಭಾರತಿ (33) ಎಂಬವರನ್ನು ಕೊಲೆ ಮಾಡಿದ್ದ.
ಭಾರತಿಯೊಂದಿಗೆ ಆರೋಪಿ ಗೋವಿಂದಪ್ಪನಿಗೆ ಅಕ್ರಮ ಸಂಬಂಧವಿತ್ತು. ಇದೇ ವಿಚಾರವಾಗಿ ಗೋವಿಂದಪ್ಪನ ಜೊತೆ ಭಾರತಿ ಪತಿ ಧರ್ಮಯ್ಯ ಜಗಳವಾಡಿದ್ದ. ಗ್ರಾಮದ ಹಿರಿಯರ ಸಮ್ಮುಖ ಪಂಚಾಯತಿ ನಡೆದಿತ್ತು. ಗಲಾಟೆ ನಡೆದ ಎರಡು ತಿಂಗಳ ಬಳಿಕ ಭಾರತಿ ಮತ್ತು ಪತಿ ಧರ್ಮಯ್ಯನನ್ನು ಗೋವಿಂದಪ್ಪ ಹತ್ಯೆ ಮಾಡಿದ್ದು, ಪ್ರಕರಣ ದಾಖಲಾಗಿತ್ತು. ತೀರ್ಪು ನೀಡಿರುವ ನ್ಯಾಯಾಲಯ ಆರೋಪಿಗೆ ಮರಣದಂಡನೆ ಶಿಕ್ಷೆಯ ಜೊತೆಗೆ 20 ಸಾವಿರ ರೂ. ದಂಡ ವಿಧಿಸಿ ಆದೇಶ ಪ್ರಕಟಿಸಿದೆ.


