8ನೇ ತರಗತಿಯ ಹೊಸ ಸಮಾಜ ವಿಜ್ಞಾನ ಪುಸ್ತಕದ ಒಂದು ಅಧ್ಯಾಯದಲ್ಲಿ ನ್ಯಾಯಾಂಗದಲ್ಲಿನ ಭ್ರಷ್ಟಾಚಾರ ಎಂಬ ವಿಷಯ ಉಲ್ಲೇಖಕ್ಕೆ ಸಂಬಂಧಿಸಿದಂತೆ ಎನ್ಸಿಆರ್ಟಿ
ಸುಪ್ರೀಂಕೋರ್ಟ್ನ ಕ್ಷಮೆ ಯಾಚಿಸಿ, ಇಡೀ ಪುಸ್ತಕವನ್ನೇ ವಾಪಸ್ ಪಡೆದಿದೆ.
ಪುಸ್ತಕದಲ್ಲಿ ನ್ಯಾಯಾಂಗದಲ್ಲಿನ ಭ್ರಷ್ಟಾಚಾರ ಎಂಬ ವಿಷಯವನ್ನು ಉಲ್ಲೇಖಿಸಿರುವುದು ಕೋಲಾಹಲಕ್ಕೆ ಕಾರಣವಾಗಿತ್ತು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿ, ನ್ಯಾಯಾಂಗದ ಗೌರವಕ್ಕೆ ಧಕ್ಕೆಯಾಗುವ ವಿಷಯವನ್ನು ಮಕ್ಕಳಿಗೆ ಈ ರೀತಿ ಕಲಿಸುವುದು ಸರಿಯೇ ಎಂದು ಪ್ರಶ್ನಿಸಿತ್ತು.
ಫೆಬ್ರವರಿ 26ರಂದು 8ನೇ ತರಗತಿಯ ಪಠ್ಯಪುಸ್ತಕವನ್ನು ಸುಪ್ರೀಂಕೋರ್ಟ್ ಸಂಪೂರ್ಣ ಬ್ಯಾನ್ ಮಾಡಿತ್ತು. ಅದರ ಎಲ್ಲಾ ಪ್ರತಿಗಳನ್ನು ವಶಪಡಿಸಿಕೊಳ್ಳಲು ಮತ್ತು ಡಿಜಿಟಲ್ ಆವೃತ್ತಿಗಳನ್ನು ತಕ್ಷಣವೇ ತೆಗೆದು ಹಾಕಲು ಆದೇಶ ನೀಡಿತ್ತು. ಆದೇಶ ಅನುಸರಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಧಿಕಾರಿಗಳಿಗೆ ನಿರ್ದೇಶಿಸಿ, ನಿರ್ದೇಶನಗಳನ್ನು ಧಿಕ್ಕರಿಸಿದರೆ ಗಂಭೀರ ಕ್ರಮ ಎದುರಿಸಬೇಕಾದೀತು ಎಂದು ಎಚ್ಚರಿಸಿತ್ತು.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಸುಪ್ರೀಂ ಕೋರ್ಟ್ನ ತ್ರಿಸದಸ್ಯ ಪೀಠವು ಎನ್ಸಿಇಆರ್ಟಿ ನಿರ್ದೇಶಕರು ಮತ್ತು ಶಾಲಾ ಶಿಕ್ಷಣ ಕಾರ್ಯದರ್ಶಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿ, ಈ ಅಧ್ಯಾಯ ಸೇರ್ಪಡೆಗೆ ಕಾರಣರಾದವರ ವಿರುದ್ಧ ಏಕೆ ಕ್ರಮ ತೆಗೆದುಕೊಂಡಿಲ್ಲ ಎಂದು ಪ್ರಶ್ನಿಸಿತ್ತು.


