Menu

ಇರಾನ್‌-ಇಸ್ರೇಲ್‌ ಕದನ ವಿರಾಮಕ್ಕೆ ಯಾವುದು ಮಾರ್ಗ

ರಕ್ತಪಾತವಿಲ್ಲದೆ ಸರ್ವಾಧಿಕಾರಿಗಳನ್ನು ಮತ್ತು ಸಾಮ್ರಾಜ್ಯಶಾಹಿ ಗಳನ್ನು ಕುರ್ಚಿಯಿಂದ ಕೆಳಗಿಳಿಸಿದ ಭಾರತಕ್ಕೆ ರಕ್ತಪಾತವನ್ನು ನಿಲ್ಲಿಸುವ ಅಹಿಂಸಾ ಪರಮೋ ಧರ್ಮದ ಮಹಾಶಕ್ತಿ ಇದೆ. ಇರಾನ್ ಮತ್ತು ಇಸ್ರೇಲ್ ನಡುವಣ ಸಮರ ಸ್ಥಗಿತಕ್ಕೆ ಇದು ಪ್ರದರ್ಶಿತವಾಗಬೇಕಿದೆ.

ಇರಾನ್ ಮತ್ತು ಇಸ್ರೇಲ್ ನಡುವೆ ಯುದ್ಧ ಆರಂಭವಾಗಿ ನಾಲ್ಕು ದಿನಗಳು ಕಳೆದಿವೆ. ಆದರೂ ಉಭಯ ದೇಶಗಳ ಭುಗಿಲೆದ್ದ ರೋಷಾಗ್ನಿ ಶಮನಗೊಳ್ಳುವ ಯಾವ ಲಕ್ಷಣವೂ ಗೋಚರಿಸುತ್ತಿಲ್ಲ ! ಇತ್ತ ಕೊಲ್ಲಿ ದೇಶಗಳ ಮೇಲೆ ಇರಾನ್ ಮಿಲಿಟರಿ ಪಡೆಗಳು ಡ್ರೋಣ್ ದಾಳಿ ಮುಂದುವರಿಸಿದೆ. ಅಲ್ಲದೆ ಕತಾರ್, ಬೆಹರಿನ್ ಮತ್ತು ಕುವೈತ್‌ನಲ್ಲಿರುವ ಪ್ರಮುಖ ತೈಲ ಘಟಕಗಳ ಮೇಲೆ ತನ್ನ ಹಿಡಿತ ಸಾಧಿಸಿದೆ. ಇದರ ಪರಿಣಾಮವಾಗಿ ತೈಲ ಘಟಕಗಳ ಕಾರ್ಯಾಚರಣೆ ಸ್ಥಗಿತಗೊಂಡಿದೆ. ಇದಲ್ಲದೆ ಯೂರೋಪ್ ಮತ್ತು ಎಷ್ಯಾ ಖಂಡಗಳ ಸಮುದ್ರಮಾರ್ಗದ ಪ್ರಮುಖ ಕೊಂಡಿಯಾದ ಅರ್ಮುಜ್ ಜಲಸಂಧಿ ಬಂದ್ ಆಗಿರುವುದರಿಂದ ಈ ಮಾರ್ಗದ ಸರಕು ಸಾಗಣೆಯ ಹಡಗುಗಳ ಸಂಚಾರ ಸ್ಥಬ್ಧಗೊಂಡಿದೆ. ಈ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಯುದ್ಧ, ಮೂರು ನಾಲ್ಕು ವಾರಗಳ ಕಾಲ ಮುಂದುವರಿಯುವ ಸುಳಿವು ನೀಡಿರುವುದು ಗಮನಾರ್ಹ.

ಯುದ್ಧ ಸಂಬಂಧ ಯೂರೋಪ್ ದೇಶಗಳ ನಿಲುವು ಕೂಡಾ ಈಗ ತಿಳಿಯಾಗುತ್ತಿದೆ. ಬ್ರಿಟನ್ ಅಮೆರಿಕಕ್ಕೆ ಬೆಂಬಲ ನೀಡಿದರೂ, ಇದು ಬೇಷರತ್ ಬೆಂಬಲವಾಗಿಲ್ಲ. ಫ್ರಾನ್ಸ್ ಮತ್ತು ಜರ್ಮನಿ ಕೂಡಾ ಹೆಚ್ಚೂ ಕಡಿಮೆ ಇದೇ ಧೋರಣೆಯನ್ನು ಅನುಸರಿಸಿದೆ. ಇತ್ತ ಚೀನಾವು ಟ್ರಂಪ್ ಯುದ್ದ ನೀತಿಯನ್ನು ಖಂಡಿಸಿದೆ. ಆದರೆ ಇರಾನ್ ದೇಶಕ್ಕೆ ಯಾವುದೇ ಮಿಲಿಟರಿ ನೆರವು ನೀಡುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ.

ರಷ್ಯಾ ಟ್ರಂಪ್ ಕೈಗೆತ್ತಿಕೊಂಡ ಯುದ್ಧವನ್ನು ತನ್ನ ಮಾಧ್ಯಮಗಳ ಮೂಲಕ ಕಠಿಣವಾಗಿ ಟೀಕಿಸಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ತಾನು ಸುಮ್ಮನೆ  ಕುಳಿತುಕೊಂಡಿರಲಾಗದೆಂಬ ಪರೋಕ್ಷ  ಸಂದೇಶವನ್ನೂ ರಷ್ಯಾ ಈಗ ಅಮೆರಿಕಕ್ಕೆ ರವಾನಿಸಿದೆ. ಇದರ ನಡುವೆ ಭಾರತದ ನಿಲುವು ಒಟ್ಟಾರೆ ಯುದ್ಧ ನಿಲ್ಲಬೇಕೆಂಬುದು ಆಗಿದ್ದರೂ, ಇದಕ್ಕೆ ಸ್ಪಷ್ಟತೆ ಇಲ್ಲ ಎಂಬ ಟೀಕೆ ವ್ಯಕ್ತ ಆಗಿದೆ. ಕಳೆದ ಎಪ್ಪತ್ತೈದು ವರ್ಷಗಳಿಂದ ಭಾರತವು ಅಲಿಪ್ತ ನೀತಿ ಪಾಲಿಸುತಿದ್ದು ಪ್ರಸಕ್ತ ಸನ್ನಿವೇಶದಲ್ಲಿ ಇರಾನ್ ಮೇಲೆ ನಡೆದಿರುವ ದಾಳಿ ಮತ್ತು ಆಕ್ರಮಣವನ್ನು ಭಾರತ ಸರ್ಕಾರ ಇದುವರೆಗೆ ಖಂಡಿಸಿಲ್ಲ ಏಕೆ ಎಂದು ಕಾಂಗ್ರೆಸ್ ಅಭಿನೇತ್ರಿ ಸೋನಿಯಾಗಾಂಧಿ ಪ್ರಶ್ನಿಸಿದ್ದಾರೆ.

ಇಸ್ರೇಲ್ ಜೊತೆ ಮೊದಲಿಂದಲೂ ಉತ್ತಮ ಸಂಬಂಧವನ್ನು ಹೊಂದಿರುವ ಭಾರತಕ್ಕೆ ಇರಾನ್ ಜೊತೆ ಕೂಡಾ ಇದೇ ಪ್ರಮಾಣದಲ್ಲಿ ದಶಕಗಳಿಂದ ಆರ್ಥಿಕ, ವಾಣಿಜ್ಯ ಮತ್ತು ಸಾಂಸ್ಕೃತಿಕ ಸಂಬಂಧಗಳಿವೆ. ಈ ದಿಶೆಯಲ್ಲಿ ಭಾರತಕ್ಕೆ ಬೇಕಿರುವುದು ತನ್ನ ಸಂಬಂಧಗಳನ್ನು ಕಾಪಾಡಿಕೊಳ್ಳಲು ಬೇಕಿರುವ ಸೌಹಾರ್ದಯುತ ವಾತಾವರಣ. ಇಸ್ರೇಲ್ ಮತ್ತು ಇರಾನ್ ನಡುವಣ ಸಂಪರ್ಕ ಸೇತುವೆಯಾಗುವಂತಹ ಶಕ್ತಿ ಮತ್ತು ಸಾಮರ್ಥ್ಯವಿರುವುದು ಭಾರತಕ್ಕೆ. ಈಗಿನ ಸನ್ನಿವೇಶದಲ್ಲಿ ಭಾರತ ಈ ನಿಟ್ಟಿನಲ್ಲಿ ಮುಂದಾಗುವುದು ಅನಿವಾರ್ಯ. ರಕ್ತಪಾತವಿಲ್ಲದೆ ಸರ್ವಾಧಿಕಾರಿಗಳನ್ನು ಮತ್ತು ಸಾಮ್ರಾಜ್ಯಶಾಹಿ ಗಳನ್ನು ಕುರ್ಚಿಯಿಂದ ಕೆಳಗಿಳಿಸಿದ ಭಾರತಕ್ಕೆ ರಕ್ತಪಾತವನ್ನು ನಿಲ್ಲಿಸುವ ಅಹಿಂಸಾ ಪರಮೋ ಧರ್ಮದ ಮಹಾಶಕ್ತಿ ಇದೆ. ಇರಾನ್ ಮತ್ತು ಇಸ್ರೇಲ್ ನಡುವಣ ಸಮರ ಸ್ಥಗಿತಕ್ಕೆ ಇದು ಪ್ರದರ್ಶಿತವಾಗಬೇಕಿದೆ.

Related Posts

Leave a Reply

Your email address will not be published. Required fields are marked *