Menu

ಬೇಹುಗಾರಿಕೆ ವರದಿ: ಪರಿಣಾಮ ಶೂನ್ಯ

ಇಂದಿನ ಗೂಗಲ್ ಮತ್ತು ಎಐ ಯುಗದಲ್ಲಿ ಪರಮ ರಹಸ್ಯ ಎಂಬುದೇ ಬೊಗಳೆ ! ಯಾರು ಏನೇ ಮಾಡಿದರೂ, ಎಲ್ಲೇ ಇದ್ದರೂ ಈ ಮಾಹಿತಿ ಬಹಿರಂಗವಾಗಲು ಕೆಲವೇ ನಿಮಿಷಗಳು ಸಾಕು. ಹೀಗಿರುವಾಗ ಇಂಟಲಿಜೆನ್ಸ್ ರಿಪೋರ್ಟ್‌ಗಳ ಬಗ್ಗೆ ಕಾಂಗ್ರೆಸ್ ಶಾಸಕರು ಬೆದರಿ ಕಂಗಾಲಾಗುವರೆಂಬುದು ಅರ್ಥರಹಿತ ಮತ್ತು ತರ್ಕಹೀನ.

ಆಡಳಿತಾರೂಢ ಶಾಸಕರು ಹಾಗೂ ಮಂತ್ರಿಗಳ ಮೇಲೆ ಮುಖ್ಯಮಂತ್ರಿ ಇಂಟೆಲಿಜೆನ್ಸ್.. !! ಇದು ಇಂದೇನೂ ಹೊಸದಲ್ಲ. ಹಳೆಯ ಚಾಳಿಯೇ. ದೇವರಾಜ ಅರಸು, ರಾಮಕೃಷ್ಣ ಹೆಗಡೆ ಅವರ ಆಡಳಿತದ ಕಾಲದಿಂದಲೂ ಈ ಬೇಹುಗಾರಿಕೆ ದಳದ ಕೆಲಸ ಮುಂದುವರಿದಿದೆ. ರಾಜ್ಯದ ಪ್ರಸಕ್ತ ರಾಜಕೀಯ ಸನ್ನಿವೇಶಗಳಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷದ ಕೆಲವು ಶಾಸಕರು ಹಾಗೂ ಮಂತ್ರಿಗಳ ಚಲನವಲನದ ಮೇಲೆ ನಿಗಾಯಿಡಲು ಗುಪ್ತಚರ ಇಲಾಖೆಗೆಸೂಚಿಸಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆರೋಪ ಮಾಡಿದ್ದಾರೆ.

ಅವರು ಮುಂದುವರಿದು, ಡಿಕೆ ಶಿವಕುಮಾರ್ ಬಣದ ಬೆಂಬಲಿಗ ಶಾಕರ ಮೇಲೆ ಇಂಟೆಲಿಜೆನ್ಸ್ ನಿಗಾ ಇಟ್ಟಿದೆ ಎಂದು ಅಶೋಕ್ ಮಾಧ್ಯಮಗಳ ಗಮನಸೆಳೆದಿದ್ದಾರೆ. ಇಷ್ಟಕ್ಕೂ ಇದು. ಕಾನೂನು ಉಲ್ಲಂಘನೆಯ ಪ್ರಶ್ನೆ ಏನಲ್ಲ. ಮಿಗಿಲಾಗಿ ಈ ನೆಲದಲ್ಲಿ ಪ್ರಸಕ್ತ ಜಾರಿಯಲ್ಲಿರುವ ಕಾನೂನುಗಳ ಪ್ರಕಾರ, ಬೇಹುಗಾರರು ಮುಖ್ಯಮಂತ್ರಿಗಳಿಗೆ ವರದಿಯನ್ನು ಸಲ್ಲಿಸುವುದು ನಿಯಮಾವಳಿಗಳಿಗೆ ವಿರುದ್ಧವಲ್ಲ ಮತ್ತು ರಾಜ್ಯದ ಮುಖ್ಯಮಂತ್ರಿ ಆದವರು ಈ ಬಗೆಯ ಇಂಟೆಲಿಜೆನ್ ವರದಿಗಳನ್ನು ಪಡೆಯಬಾರದೆಂಬ ನಿಯಮವೂ ಇಲ್ಲ !

ಪೊಲೀಸ್ ಇಲಾಖೆಯಲ್ಲಿ ಬೇಹುಗಾರಿಕೆ ವಿಭಾಗವಿದ್ದು ಇದರ ಎಡಿಜಿಪಿ, ರಾಜ್ಯದ ಆಗುಹೋಗುಗಳ ಬಗ್ಗೆ ನಿತ್ಯವೂ ಮುಖ್ಯಮಂತ್ರಿಗಳಿಗೆ ಬೆಳಗ್ಗೆ ಬ್ರೀಫಿಂಗ್ ಮಾಡುವುದು ನಿಯಮ. ಇಂತಹ ವಿವರಣೆಯಲ್ಲಿ ರಾಜ್ಯ ರಾಜಕೀಯ ವಿದ್ಯಮಾನ, ಶಾಂತಿ ಮತು ಭದ್ರತೆ. ಚಳವಳಿ ಮತ್ತು ಪ್ರತಿಭಟನೆ ಇವೆಲ್ಲವೂ ಒಳಗೊಂಡಿರುತ್ತೆ.

ಅಶೋಕ್ ಮಾಡಿರುವ ಈ ಅರೋಪಗಳಲ್ಲಿ ಸತ್ಯವೇ ಇರಬಹುದು. ನಾಯಕತ್ವ ಬದಲಾವಣೆ ಕುರಿತು ರಾಜ್ಯ ಕಾಂಗ್ರೆಸ್ ಪಾಳೆಯದಲ್ಲಿಂದು ವಿಧ ವಿಧವಾದ ಹೇಳಿಕೆಗಳು ಮತ್ತು ಚರ್ಚೆ ಸಾಗಿದೆ. ಕಾಂಗ್ರೆಸ್ ಶಾಸಕರು ಕೆಲವರು ದಿಲ್ಲಿಗೆ ತೆರಳುವುದು ಮತ್ತು ಅಲ್ಲಿ ರಹಸ್ಯವಾಗಿ ಸಭೆ ನಡೆಸುವುದು ಇದು ಗುಪ್ತದಳದ ಕಣ್ಣಿಗೆ ಬೀಳದಂತಹ ಸುದ್ದಿಯೇನಲ್ಲ . ಗುಪ್ತದಳ ಮಾಡುವ ಕೆಲಸವನ್ನು ಇಂದು ಸುದ್ದಿ ಮಾಧ್ಯಮಗಳ ಟಿವಿ ಚಾನಲುಗಳೇ ಕೈಗೆತ್ತಿಕೊಂಡಿವೆ. ವಾಸ್ತವದಲ್ಲಿ ಈ ಮಾಧ್ಯಮಗಳು ಬೇಹುಗಾರಿಕೆ ಇಲಾಖೆಗಿಂತ ತ್ವರಿತವಾಗಿ ಕಾರ್ಯ ನಿರ್ವಹಿಸುತ್ತಿರುವುದು ಗಮನಾರ್ಹ. ಚಾನಲುಗಳ ಕಾರ್ಯನಿರ್ವಹಣೆಯಿಂದ ಇಂಟೆಲಿಜೆನ್ಸ್ ಕೆಲಸ ಕಾರ್ಯವೂ ಸುಗಮವಾಗಿದೆ ಎಂದರೆ ಅತಿಶಯವಲ್ಲ.

ನಲವತ್ತು ವರ್ಷಗಳ ಹಿಂದೆ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು, ತಮ್ಮ ಪಕ್ಷದ ಕೆಲ ಶಾಸಕರು ಮತ್ತು ಮಂತ್ರಿಗಳ ಟೆಲಿಫೋನ್ ಕದ್ದಾಲಿಕೆಯಲ್ಲಿ ತೊಡಗಿದ್ದರೆಂಬ ಆರೋಪವನ್ನು ಹೊತ್ತಿದ್ದರು. ಇದು ರಾಜ್ಯದ ರಾಜಕೀಯದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿ ಕೊನೆಗೆ ಹೆಗಡೆ ಅಧಿಕಾರವನ್ನು ಕಳೆದುಕೊಳ್ಳುವಂತಾಗಿತ್ತು. ಆದರೆ ಈ ಆರೋಪಗಳಿಗೆ ಯಾವುದೇ ಪ್ರಬಲ ಆಧಾರ ಮತ್ತು ಖಚಿತ ಮಾಹಿತಿ ದೊರೆಯಲಿಲ್ಲವಾದ್ದರಿಂದ ತಾರ್ಕಿಕ ಅಂತ್ಯವನ್ನು ಮುಟ್ಚಲಾಗಲಿಲ್ಲ. ಒಟ್ಟಿನಲ್ಲಿ ಇಂದಿನ ಗೂಗಲ್ ಮತ್ತು ಎಐ ಯುಗದಲ್ಲಿ ಪರಮ ರಹಸ್ಯ ಎಂಬುದು ಬರೀ ಬೊಗಳೆಯಷ್ಟೆ. ಪ್ರತಿಷ್ಠಿತರೂ ಸೇರಿದಂತೆ ಯಾರು ಏನೇ ಮಾಡಿದರೂ, ಎಲ್ಲೇ ಇದ್ದರೂ ಈ ಮಾಹಿತಿ ಬಹಿರಂಗವಾಗಲು ಕೆಲವೇ ನಿಮಿಷಗಳು ಸಾಕು. ಹೀಗಿರುವಾಗಇಂಟಲಿಜೆನ್ಸ್ ರಿಪೋರ್ಟ್‌ಗಳ ಬಗ್ಗೆ ಕಾಂಗ್ರೆಸ್ ಶಾಸಕರು ಬೆದರಿ ಕಂಗಾಲಾಗುವರೆಂಬುದು ಅರ್ಥಹೀನ.

Related Posts

Leave a Reply

Your email address will not be published. Required fields are marked *