Thursday, February 26, 2026
Menu

‘ಪಿ.ಸಾಯಿನಾಥ್ ಅವರ “Every body loves good drought” ಗ್ರಾಮೀಣ ಪತ್ರಿಕೋದ್ಯದ ಬೈಬಲ್’

ಗ್ರಾಮೀಣ ಪತ್ರಿಕೋದ್ಯಮ ಅಂದ ಕೂಡಲೇ ನನಗೆ ತಕ್ಷಣ ನೆನಪಾಗುವುದು ಪಿ.ಸಾಯಿನಾಥ್ ಅವರು. ಇವರು ಬರೆದಿರುವ “Every body loves good drought” ಎನ್ನುವ ಪುಸ್ತಕ “ಗ್ರಾಮೀಣ ಪತ್ರಿಕೋದ್ಯದ ಬೈಬಲ್” ಎಂದು ಕರೆಯಬಹುದು. ಈ ಪುಸ್ತಕ “ಬರ ಅಂದರೆ ಎಲ್ಲರಿಗೂ ಇಷ್ಟ” ಎಂದು ಕನ್ನಡದಲ್ಲೂ ಬಂದಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಹೇಳಿದ್ದಾರೆ.

ಗದಗದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಮಹಾತ್ಮಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವ ವಿದ್ಯಾಲಯ ಸಹಯೋಗದಲ್ಲಿ ಆಯೋಜಿಸಿದ್ದ “ಅವ್ವ ಸೇವಾ ಟ್ರಸ್ಟ್ ಮಾತೋಶ್ರೀ ಗುರವ್ವ ಶಿವಲಿಂಗಪ್ಪ ಹೊರಟ್ಟಿ ಸ್ಮರಣಾರ್ಥ ದತ್ತಿ ನಿಧಿ ಕಾರ್ಯಕ್ರಮದಲ್ಲಿ ತನುಜಾ ನಾಯಕ ಅವರಿಗೆ ದತ್ತಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ನಗರ ಕೇಂದ್ರಿತ ಪತ್ರಿಕೋದ್ಯಮ “ಅಭಿವೃದ್ಧಿ” ಎಂದರೆ ಕೇವಲ ಜಿಡಿಪಿ ಬೆಳವಣಿಗೆ ಅಥವಾ ಷೇರು ಮಾರುಕಟ್ಟೆಯ ಏರಿಳಿತವನ್ನು ಮಾತ್ರ ಅಭಿವೃದ್ಧಿ ಎಂದು ಬಿಂಬಿಸುತ್ತವೆ. ಆದರೆ ನಿಜವಾದ ಅಭಿವೃದ್ಧಿ ಎಂದರೆ ಗ್ರಾಮೀಣ ಭಾಗದ ಜನರ ಜೀವನಮಟ್ಟ ಸುಧಾರಿಸುವುದು ಮತ್ತು ಗ್ರಾಮೀಣ ಆರ್ಥಿಕತೆ ಬೆಳವಣಿಗೆಯೇ ನಿಜವಾದ ಅಭಿವೃದ್ಧಿ ಎನ್ನುವುದನ್ನು ನಾವು ಮರೆಯಬಾರದು ಎಂದರು.‌

ಕೇಂದ್ರ ಸರ್ಕಾರ ನೋಟು ನಿಷೇಧ ಜಾರಿಗೆ ತಂದಾಗ ನಗರ ಕೇಂದ್ರಿತ ಆರ್ಥಿಕತೆ, ದುಡಿಮೆ ಎಲ್ಲಾ ನೆಲಕಚ್ಚಿತು. ಆದರೆ, ಇಡೀ ದೇಶದ ಆರ್ಥಿಕತೆ ಪೂರ್ತಿ ನೆಲ ಕಚ್ಚದಂತೆ ಕಾಪಾಡಿದ್ದು ನಮ್ಮ ಗ್ರಾಮೀಣ ಆರ್ಥಿಕತೆ.ಸಾಸಿವೆ ಡಬ್ಬಿ, ಎಲೆ ಅಡಿಕೆ ಚೀಲದಲ್ಲಿ ಗ್ರಾಮೀಣ ಮಹಿಳೆಯರು ಕಾಪಿಡುವ, ಉಳಿತಾಯ ಮಾಡುವ ಹಣ ಕೋವಿಡ್ ಸಂದರ್ಭದಲ್ಲಿ ಸಾವಿರಾರು ಕುಟುಂಬಗಳ ಬದುಕಿಗೆ ಆಸರೆ ಆಗಿದ್ದನ್ನು ನಾವು ನೆನಪಿಸಿಕೊಳ್ಳಬೇಕು ಎಂದು ಹೇಳಿದರು.

ಭಾರತದ ಗ್ರಾಮೀಣಾಭಿವೃದ್ಧಿಗೆ ಪತ್ರಿಕೋದ್ಯಮ ಸೇತುವೆಯಾಗಿ ಕೆಲಸ ಮಾಡಬೇಕಿದೆ. ಪತ್ರಿಕೋದ್ಯಮವು ಮೇಲ್ಮಟ್ಟದ ಆರ್ಥಿಕ ಪ್ರಗತಿಗಿಂತ ಹೆಚ್ಚಾಗಿ, ಹಳ್ಳಿಗಳ ಜನರ ಆರೋಗ್ಯ, ಶಿಕ್ಷಣ ಮತ್ತು ಕುಡಿಯುವ ನೀರಿನ ಲಭ್ಯತೆಯ ಬಗ್ಗೆ ಗಮನ ಹರಿಸಬೇಕಿದೆ ಎಂದರು.

ಮುಖ್ಯಮಂತ್ರಿಗಳು KDP ಸಭೆಗಳನ್ನು ನಡೆಸುವಾಗ ಆಯಾ ಜಿಲ್ಲೆಗಳ ಗ್ರಾಮೀಣ ಬದುಕಿನ ಬಗ್ಗೆ ಪತ್ರಿಕೆಗಳಲ್ಲಿ ಬಂದಿರುವ ವರದಿಗಳನ್ನು  ಗಮನಿಸುತ್ತಾರೆ. ಇಂಥಾ ಪತ್ರಿಕೆಯಲ್ಲಿ, ಇಂಥಾ ದಿನ, ಇಂಥಾ ವರದಿ ಬಂದಿದೆ ಎಂದು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುವುದನ್ನು ನೀವೂ ಗಮನಿಸಿರ್ತೀರಿ. ಕಲುಷಿತ ನೀರು ಕುಡಿದು ಸಾವನ್ನಪ್ಪಿದ ವರದಿಗಳು ಸರ್ಕಾರವನ್ನು ಎಚ್ಚರಿಸಿವೆ. ಬೆಳೆರೋಗದ ಬಗ್ಗೆ ಬಂದ ವರದಿಗಳು  ರೈತ ಕುಟುಂಬಗಳಿಗೆ ಪರಿಹಾರ ಒದಗಿಸಲು ನೆರವಾಗಿವೆ. ಬರ ಮತ್ತು ಅತಿವೃಷ್ಟಿ ಸಂದರ್ಭದ ವರದಿಗಳು ವಿಧಾನಸೌಧದಲ್ಲಿ ತುರ್ತು ಸಭೆಗಳನ್ನು ನಡೆಸಲು, ತುರ್ತು ಪರಿಹಾರ ಒದಗಿಸಲು ವೇಗವರ್ದಕಗಳಾಗಿ ನೆರವಾಗಿವೆ ಎಂದು ವಿವರಿಸಿದರು.

ಬರಗಾಲ ಮತ್ತು‌ ಅತಿವೃಷ್ಟಿ ಹೆಸರಿನಲ್ಲಿ ಬರುವ ಅನುದಾನ ಹೇಗೆ ದುರುಪಯೋಗವಾಗುತ್ತದೆ ಎನ್ನುವುದನ್ನು ಗ್ರಾಮೀಣ ಪತ್ರಕರ್ತರು ಗಮನಿಸಿ ವರದಿ ಮಾಡಬೇಕು. ಇಂಥಾ ವರದಿಗಳನ್ನು  ಮುಖ್ಯಮಂತ್ರಿ ಗಂಭೀರವಾಗಿ ತೆಗೆದುಕೊಳ್ಳುತ್ತಾರೆ. ಗ್ರಾಮೀಣಾಭಿವೃದ್ಧಿಯಲ್ಲಿ ಪತ್ರಿಕೋದ್ಯಮದ ಪಾತ್ರವೆಂದರೆ, ರೈತರ ಆತ್ಮಹತ್ಯೆಯ ಹಿಂದಿನ ನೈಜ ಸಾಲದ ಬಾಧೆಯನ್ನು ಹೊರಹಾಕುವುದು,
ಸರ್ಕಾರದ ನೀತಿಗಳು ಕೃಷಿಯ ಮೇಲೆ ಬೀರುತ್ತಿರುವ ದುಷ್ಪರಿಣಾಮಗಳನ್ನು ವಿಶ್ಲೇಶಿಸುವುದಾಗಿದೆ ಎಂದರು.

ತಾಯಿ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ.‌ ತಮ್ಮ ಸುಖ ತ್ಯಾಗ ಮಾಡಿದ ತಾಯಿ-ತಂದೆಯರನ್ನು ವೃದ್ಧಾಶ್ರಮ ಕಾಣುವಂತಾಗಿರುವುದು ಬೇಸರದ ಸಂಗತಿ. ಆದರೆ ಬಸವರಾಜ ಹೊರಟ್ಟಿ ಅವರು ತಾಯಿ ಹೆಸರಲ್ಲಿ  ಈ ಕೆಲಸ ಮಾಡುತ್ತಿರುವುದು ಮಾದರಿಯಾಗಿದೆ. ಮಾತೋಶ್ರೀ ಗುರುವ್ವ ಶಿವಲಿಂಗಪ್ಪ ಅವ್ವ ಹೊರಟ್ಟಿ ಈ ಕಾರ್ಯಕ್ರಮದ ನೈತಿಕ ಶಕ್ತಿ ಆಗಿದ್ದಾರೆ. ಈ ತಾಯಿಯ ಕಾಳಜಿ, ಸಂಸ್ಕಾರ ಮತ್ತು ಕನವರಿಕೆಗಳನ್ನು ಅಕ್ಷರಕ್ಕೆ ಇಳಿಸುತ್ತಾ ಇವರ ಹೆಸರಿನ ಪ್ರಶಸ್ತಿ ಸ್ವೀಕರಿಸುತ್ತಿರುವ ತನುಜಾ ನಾಯಕ ಅವರ ಆಯ್ಕೆ ಅತ್ಯಂತ ಸೂಕ್ತವಾಗಿದೆ ಎಂದು ಶ್ಲಾಘಿಸಿದರು.

ಶರಣರ ಬಾಳನ್ನು ಮರಣದಲ್ಲಿ ಕಾಣು ಎನ್ನುವ ಮಾತೊಂದಿದೆ. ಶರಣರು ಮರಣ ನಂತರವೂ ಜನ‌ ಮಾನಸದಲ್ಲಿ ಬದುಕುತ್ತಾರೆ. ಇವತ್ತಿನ ಈ ಕಾರ್ಯಕ್ರಮವೇ ಅವ್ವ ಗುರವ್ವ ಅವರ ಸಂಸ್ಕಾರ ಮತ್ತು ಚೈತನ್ಯ ಜೀವಂತಿಕೆಗೆ ಸಾಕ್ಷಿಯಾಗಿದೆ ಎಂದರು.

ಇಂಥಾ ಆದರ್ಶಪ್ರಾಯ ಅವ್ವನವರ ಹೆಸರಿನ ಪ್ರಶಸ್ತಿಗೆ ತನುಜಾ ನಾಯಕ ಅವರನ್ನು ಆಯ್ಕೆ ಮಾಡಿರುವುದು ಹೆಚ್ಚು ಸೂಕ್ತವಾಗಿದೆ. ಮಹಿಳಾ ಸಂವೇದನೆ, ಕೌಟುಂಬಿಕ ಮೌಲ್ಯಗಳು, ಸಾಮಾಜಿಕ ಜಾಗೃತಿ ಮತ್ತು ಜೀವನ ಪ್ರೀತಿಯನ್ನು ಸಾರುವಂತಹ ಲೇಖನಗಳನ್ನು ನಿರಂತರವಾಗಿ ಬರೆಯುತ್ತಿರುವ ತನುಜಾ ನಾಯಕ ಅವರ “ಸಾಮಾಜಿಕ ನೋಟ” ಇವತ್ತಿನ ಕಿರಿಯ ವೃತ್ತಿ ಬಾಂಧವರಿಗೆ   ಮಾದರಿಯಾಗಿದ್ದಾರೆ ಎಂದರು.

Related Posts

Leave a Reply

Your email address will not be published. Required fields are marked *