Wednesday, February 25, 2026
Menu

ನೂತನ ಶಾಸಕರಿಗೆ ಮಂತ್ರಿ ಪದವಿ ಬೇಕೇ?

ಹೊಸದಾಗಿ ಚುನಾಯಿತರಾದ ೩೧ ಮಂದಿ ಶಾಸಕರು ತಮಗೂ ಮಂತ್ರಿ ಪದವಿ ಬೇಕೆಂದು ಹೈಕಮಾಂಡ್‌ಗೆ ಪತ್ರ ಬರೆದಿರುವುದು ಗಮನಾರ್ಹ. ಮೊದಲನೆಯ ಬಾರಿಗೆ ಅಸೆಂಬ್ಲಿಗೆ ಚುನಾಯಿತರಾದವರು ಕೂಡಾ ತಮಗೆ ಕ್ಯಾಬಿನೆಟ್ ದರ್ಜೆ ಮಂತ್ರಿ ಪದವಿ ಬೇಕೆಂದು ಹಾತೊರೆಯವುದನ್ನು ಕಂಡು ನಾಡಿನ ಜನತೆ ಈಗ ನಗಬೇಕೋ, ಅಳಬೇಕೋ?

ರಾಜ್ಯದ ಆಡಳಿತಾರೂಢ ಪಕ್ಷದಲ್ಲಿ ಮಂತ್ರಿ ಪದವಿ ಹಪಾಹಪಿ ಈಗ ಜೋರಾಗಿ ಸದ್ದು ಮಾಡತೊಡಗಿದೆ. ವಿಧಾನಸಭೆ ಚುನಾವಣೆಗೆ ಇನ್ನು ಎರಡೇ ವರ್ಷಗಳು ಬಾಕಿ ಇದೆ. ಮೂರು ವರ್ಷಗಳ ಹಿಂದೆ, ರಾಜ್ಯದಲ್ಲಿ ಕಾಂಗ್ರೆಸ್ ಭರ್ಜರಿ ಬಹುಮತ ಸಾಧಿಸಿತ್ತು. ಇದೇ ವೇಳೆ ನಾಡಿನ ಸಮಸ್ತ ಜನತೆಗೆ ಹಲವು ಹತ್ತು ಭರವಸೆಗಳನ್ನೂ ನೀಡಿತ್ತು. ನಾಡಿನ ಜನತೆಗೆ ಅಧಿಕಾರದ ಗದ್ದುಗೆ ಹಿಡಿದ ಕಾಂಗ್ರೆಸ್ ಆಗ ನೀಡಿದ್ದ ಭರವಸೆ ಈಗ ಎಲ್ಲಿಗೆ ಬಂದು ನಿಂತಿದೆ? ಅಂದು ಸರ್ಕಾರ ಕೊಟ್ಟ ಭರವಸೆಗಳು ಇಂದು ಈಡೇರಿದೆಯೇ ? ಈ ಕುರಿತು ಗಂಭೀರವಾಗಿ ಆಲೋಚಿಸಬೇಕಿರುವ ಕೆಲ ಕಾಂಗ್ರೆಸ್ ಶಾಸಕರು ಈಗ ಮಂತ್ರಿಮಂಡಲದ ಕುರ್ಚಿಗಾಗಿ ದಿಲ್ಲಿ ಹೈಕಮಾಂಡ್ ಬಳಿಗೆ ಎಡತಾಕುತ್ತಿರುವುದು ದುರದೃಷ್ಟಕರ.

ರಾಜ್ಯ ಸರ್ಕಾರವೇನೋ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿರುವುದು ಸರಿಯಷ್ಟೆ. ಆದರೆ ಈ ಯೋಜನೆಗಳು ರಾಜ್ಯದ ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲಿ ಸಮರ್ಪಕವಾಗಿ ಅನುಷ್ಠಾನಗೊಂಡಿದೆಯೇ ? ಒಂದು ಯೋಜನೆಯು ವಿಧಾನಸೌದದಿಂದ ಘೋಷಣೆಯಾದ ಕೂಡಲೇ ಅದು ನಾಡಿನ ಸಮಸ್ತ ಜಿಲ್ಲೆಗಳಲ್ಲಿ ನೂರಕ್ಕೆ ನೂರರಷ್ಟು ಜಾರಿಯಾಗುವುದು ಅಸಾಧ್ಯ. ಈ ದಿಶೆಯಲ್ಲಿ ಆಡಳಿತಾರೂಢ ಪಕ್ಷದ ಶಾಸಕರ ಮೊಟ್ಟಮೊದಲ ಕೆಲಸವೆಂದರೆ, ಗ್ಯಾರಂಟಿಯೋಜನೆಗಳು ಜನತೆಗೆ ತಲುಪಿದೆಯೇ ಎಂಬುದರ ಖುದ್ದು ಪರಿಶೀಲನೆ ಮತ್ತು ಪರಾಮರ್ಶೆಮಾಡುವುದು. ದುರಂತವೆಂದರೆ, ಈ ಕುರಿತು ಆಲೋಚಿಸಿ ತಮ್ಮ ಕ್ಷೇತ್ರದ ಜನತೆಯ ಬೇಕು, ಬೇಡಗಳ ಬಗ್ಗೆ ತಲೆಕಡಿಸಿಕೊಳ್ಳಬೇಕಿರುವ ಕಾಂಗ್ರೆಸ್ ಶಾಸಕರು, ಮಿನಿಸ್ಟರ್ ಆಗಬೇಕೆಂದು ದಿಲ್ಲಿಗೆ ವಾರದಲ್ಲಿ ಮೂರು, ನಾಲ್ಕು ಸಾರಿ ಹೋಗಿ ಬರುತ್ತಿರುವುದು ಖೇದಕರ.

ರಾಜ್ಯದಲ್ಲಿ ಈಗಾಗಲೇ ಕೆಲವು ಕಡೆ ಸುಡು ಬೇಸಿಗೆ ಶುರುವಾಗಿದೆ. ಕುಡಿಯುವ ನೀರು ಮತ್ತು ಕರೆಂಟ್ ಸಮಸ್ಯೆ ಉಲ್ಬಣಿಸಿದೆ. ಜನ- ಜಾನುವಾರುಗಳಿಗೆ ಕುಡಿಯಲು ನೀರಿಲ್ಲ. ಇನ್ನು ಕೆಲವು ಪಂಚಾಯ್ತಿಗಳಲ್ಲಿ ಕುಡಿಯುವ ನೀರಿನ ಪಂಪಿಂಗ್‌ಗೆ ಸೂಕ್ತ ಕರೆಂಟ್ ಪೂರೈಕೆಯೂ ಆಗುತ್ತಿಲ್ಲ. ಇವೆಲ್ಲವೂ ಆಯಾ ಕ್ಷೇತ್ರವನ್ನು ಪ್ರತಿನಿಧಿಸುವ ಶಾಸಕರು ಖುದ್ದಾಗಿ ಅಲ್ಲಿದ್ದು ಜನತೆಯ ಸಮಸ್ಯೆಗಳಿಗೆ ಸ್ಪಂದಿಸುವುದು ಅವರ ಹೊಣೆಗಾರಿಕೆ. ಆದರೆ ಇವೆಲ್ಲವನೂ ಬದಿಗಿತ್ತು ಹೊಸದಾಗಿ ಚುನಾಯಿತರಾದ ೩೧ ಮಂದಿ ಶಾಸಕರು ತಮಗೂ ಮಂತ್ರಿಪದವಿ ಬೇಕೆಂದು ಹೈಕಮಾಂಡ್‌ಗೆ ಪತ್ರ ಬರೆದಿರುವುದು ಗಮನಾರ್ಹ. ಮೊದಲನೆಯ ಬಾರಿಗೆ ಅಸೆಂಬ್ಲಿಗೆ ಚುನಾಯಿತರಾದವರು ಕೂಡಾ ತಮಗೆ ಕ್ಯಾಬಿನೆಟ್ ದರ್ಜೆ ಮಂತ್ರಿ ಪದವಿ ಬೇಕೆಂದು ಹಾತೊರೆಯವುದನ್ನು ಕಂಡು ನಾಡಿನ ಜನತೆ ಈಗ ನಗಬೇಕೋ, ಅಳಬೇಕೋ?

ಎರಡೆರಡು ಸಾರಿ ಗೆದ್ದು ಬಂದವರಿಗೆ ಒಂದು ಕಾಲದಲ್ಲಿ ಸಹಾಯಕ ಮಂತ್ರಿ ಪದವಿ ಸಿಗುವುದೇ ಅತಿ ಕಷ್ಟವಾಗಿತ್ತು. ಅಸಲಿಗೆ ಮಂತ್ರಿ ಪದವಿಯಾದರೂ ಯಾಕೆ ಬೇಕು. ತಮ್ಮ ಹಿತಾಸಕ್ತಿಗಳನ್ನು ಕಾಯ್ಡುಕೊಳ್ಳಲೋ ಅಥವಾ ಜನತೆಯ ಕೆಲಸ ಕಾರ್ಯಗಳನ್ನು ಪೂರೈಸಲೆಂದೋ ? ನೂತನ ಶಾಸಕರ ಈ ಅಹವಾಲನ್ನು ದಿಲ್ಲಿ ಹೈಕಮಾಂಡ್ ಮನ್ನಿಸುವುದು ಸೂಕ್ತವಲ್ಲ. ಬೇಸಿಗೆ ಪರ್ವದಲ್ಲಿ ನೂತನ ಶಾಸಕರಿಗೆ ಬೇಕಿರುವುದು ಜನತೆಗೆ ಹಿತಾಸಕ್ತಿಯೇ ವಿನಹ ತಮ್ಮ ಹಿತಾಸಕ್ತಿಗಳಿಗೆ ಅನುಕೂಲವಾಗುವ ಮನ್ನಣೆಗಳಿಲ್ಲ ಎಂಬುದನ್ನು ಮನಗಾಣಬೇಕು.

Related Posts

Leave a Reply

Your email address will not be published. Required fields are marked *