ಸ್ನೇಹಿತನನ್ನು ನಂಬಿದ್ದ ವಿದ್ಯಾರ್ಥಿಯೊಬ್ಬ ಸೈಬರ್ ವಂಚನೆಯ ಸುಳಿಗೆ ಸಿಲುಕಿ ಏಳು ಕೋಟಿ ರೂಪಾಯಿ ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಒಂದು ವರ್ಷದ ಗೆಳೆತನದಲ್ಲಿದ್ದ ವಿದ್ಯಾರ್ಥಿ ತನ್ನ ಬ್ಯಾಂಕ್ ಖಾತೆಯ ವಿವರವನ್ನು ಸ್ನೇಹಿತನೊಂದಿಗೆ ಹಂಚಿಕೊಂಡಿದ್ದರಿಂದ ಇಂಥದ್ದೊಂದು ಸಂಕಷ್ಟಕ್ಕೆ ಸಿಲುಕಿದ್ದಾನೆ.
ಒಂದು ವರ್ಷದ ಹಿಂದೆ ವಿದ್ಯಾರ್ಥಿಗೆ ಪರಿಚಯವಾಗಿದ್ದ ಆಯುಷ್, ತನ್ನ ಅಕೌಂಟ್ ಬ್ಲಾಕ್ ಆಗಿದೆ ಎಂದು ವಿದ್ಯಾರ್ಥಿ ಬಳಿ ಹೇಳಿ ಆತನ ಬ್ಯಾಂಕ್ ವಿವರಗಳನ್ನು ಕೇಳಿದ್ದ. ನಂಬಿದ ವಿದ್ಯಾರ್ಥಿ ಬ್ಯಾಂಕ್ ಪಾಸ್ ಬುಕ್, ಎಟಿಎಂ ಕಾರ್ಡ್ ಹಾಗೂ ಮೊಬೈಲ್ ಸಿಮ್ ಎಲ್ಲವನ್ನೂ ಆಯುಷ್ಗೆ ನೀಡಿದ್ದ. ಅದನ್ನು ಬಳಸಿಕೊಂಡ ಆಯುಷ್, ಅಕೌಂಟ್ ಮೂಲಕ ಏಳು ಕೋಟಿ ರೂ. ವರ್ಗಾಯಿಸಿಕೊಂಡಿದ್ದಾನೆ.
ಬ್ಯಾಂಕ್ ಇತ್ತೀಚೆಗೆ ವಿದ್ಯಾರ್ಥಿಯನ್ನು ಸಂಪರ್ಕಿಸಿ, ಅಕೌಂಟ್ ಮೂಲಕ ಸೈಬರ್ ವಂಚನೆ ನಡೆದಿದೆ ಎಂದು ಮಾಹಿತಿ ನೀಡಿದ್ದು, ವಿದ್ಯಾರ್ಥಿಯ ಖಾತೆಯನ್ನು ಬ್ಲಾಕ್ ಮಾಡಲಾಗಿದೆ. ವಿದ್ಯಾರ್ಥಿ ಬೆಂಗಳೂರು ಉತ್ತರ ವಿಭಾಗ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ನಕಲಿ ಚಿನ್ನವಿಟ್ಟು ಬಂಗಾರ ಕಳವು
ಬೆಂಗಳೂರಿನ ನಾಗಸಂದ್ರದ ಪೂರನ್ ಜ್ಯುವೆಲರ್ಸ್‌ನಲ್ಲಿ ಚಿನ್ನ ಖರೀದಿ ನೆಪದಲ್ಲಿ ಬಂದಿದ್ದ ಕಳ್ಳ 3 ಲಕ್ಷ ರೂ. ಮೌಲ್ಯದ 18 ಗ್ರಾಂ ಚಿನ್ನಾಭರಣ ಕಳವು ಮಾಡಿದ್ದಾನೆ. ಮಹೇಂದ್ರ ಎಂಬವರ ಅಂಗಡಿಯಲ್ಲಿ ಉಂಗುರದ ತೂಕ ತೋರಿಸುವಂತೆ ಕೇಳಿ ಬೇರೆಡೆ ಗಮನ ಸೆಳೆದ ಕಳ್ಳ , ಅಸಲಿ ಉಂಗುರದ ಬದಲು ನಕಲಿ ಉಂಗುರವನ್ನು ಟ್ರೇನಲ್ಲಿ ಇಟ್ಟು ಪರಾರಿಯಾಗಿದ್ದಾನೆ. ಕಳ್ಳನ ಕೃತ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಬೆಂಗಳೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿ ದಿದೆ.


