Menu

ಸುಪ್ರೀಂ ಮುಂದೆ ಮಮತಾ ಪಾರ್ಟಿ ಇನ್ ಪರ್ಸನ್…

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೇ ಈಗ ಸುಪ್ರೀಂಕೋರ್ಟಿನಲ್ಲಿ ತಾವೇ ಖುದ್ದು ಹಾಜರಾಗಿ ವಾದ ಮಂಡಿಸುತ್ತಿರುವುದರಿಂದ ಕೇಂದ್ರ ಚುನಾವಣೆ ಆಯೋಗಕ್ಕೆ ತನ್ನ ಸಾಚಾತನ ಮತ್ತು ನೈಜತೆಯನ್ನು ಸಾಬೀತು ಪಡಿಸುವ ಸಮಯ ಹಾಗೂ ಅಗ್ನಿಪರೀಕ್ಷೆ ಒದಗಿದೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈಗ ಸುಪ್ರೀಂಕೋರ್ಟ್ ಮುಂದೆ ಪಾರ್ಟಿ ಇನ್ ಪರ್ಸನ್ ಆಗಿದ್ದಾರೆ. ಈ ಮೂಲಕ ಅವರು ಕೇಂದ್ರ ಚುನಾವಣೆ ಆಯೋಗದ ವಿರುದ್ದ ಕಾನೂನು ಸಮರಕ್ಕೆ ಇಳಿದಿದ್ದಾರೆ. ರಾಜ್ಯದ  ಮುಖ್ಯಮಂತ್ರಿ ಪಾರ್ಟಿ ಇನ್ ಪರ್ಸನ್ ಆಗಿ ದೇಶದ ಸರ್ವೋನ್ನತ ನ್ಯಾಯಪೀಠದ ಮುಂದೆ ವಾದ ಮಾಡುತ್ತಿರುವುದು ವಿಶೇಷ. ಮಮತಾ ಓರ್ವ ಕಾನೂನು ಪದವೀಧರೆ ಎಂಬುದೂ ಗಮನಾರ್ಹ.

ದೇಶದ ರಾಜಕಾರಣದಲ್ಲಿ ಓರ್ವ ಮಹಿಳೆ, ತನ್ನ ಸುದೀರ್ಘ ರಾಜಕೀಯ ಪಯಣವನ್ನು ಮುಂದುವರಿಸಬೇಕಾದರೆ ಅದರ ಹಿಂದೆ ಸವಿಸ್ತಾರವಾದ ಸಾಧಕ- ಬಾಧಕಗಳ ಚಿತ್ರಣಗಳೂ ಇರುತ್ತೆ. ಈ ದಿಶೆಯಲ್ಲಿ ಮಮತಾ, ಬುಧವಾರದಂದು ಓರ್ವ ನ್ಯಾಯವಾದಿಯಾಗಿ ಸುಪ್ರೀಂ ನ್ಯಾಯಪೀಠದ ಮುಂದೆ ವಾದವನ್ನು ಮಂಡಿಸಿದಾಗ ಅವರ ವೈಯಕ್ತಿಕ ಬದಕಿನ ಕೆಲವೊಂದು ಆಸಕ್ತಿಕರ ವಿಷಯಗಳೂ ಬೆಳಕಿಗೆ ಬಂದಿವೆ. ಅವರು ಮುಖ್ಯಮಂತ್ರಿಯಾಗಿ ಒಂದು ಪೈಸೆಯನ್ನೂ ವೇತನ ರೂಪದಲ್ಲಿ ಪಡೆದಿಲ್ಲವಂತೆ. ಹಾಗೆಯೇ ಇವರು ಈ ಹಿಂದೆ ಲೋಕಸಭೆ ಸದಸ್ಯರಾಗಿದ್ದರೂ, ಇದರ ಪ್ರತಿಫಲವಾಗಿ ಯಾವುದೇ ಪಿಂಚಣಿ ಅಥವಾ ಸಂಭಾವನೆವನ್ನೂ ಪಡೆದಿಲ್ಲವಂತೆ. ಈ ವಿಷಯವನ್ನು ಅವರಿಂದು ದೇಶದ ಉನ್ನತ ನ್ಯಾಯಪೀಠದ ಮುಂದೆ ಬಾಯಿ ಚಪಲಕ್ಕೆ ಹೇಳುವ ಮಾತುಗಳಂತೂ ಇದಲ್ಲ. ಅವರು ದೇಶದ ಪ್ರಮುಖ ರಾಜ್ಯವೊಂದರ ಮುಖ್ಯಮಂತ್ರಿಯಾಗಿ ನೀಡಿರುವ ಈ ಹೇಳಿಕೆ ಇಂದಿನ ಪ್ರಸಕ್ತ ರಾಜಕಾರಣಿಗಳ ಕಣ್ ತೆರೆಸುವಂತಹದು ಎಂದರೆ ತಪ್ಪಾಗಲಾರದು.

ತಮ್ಮ ಆದಾಯದ ವಿವಿಧ ಮೂಲಗಳನ್ನು ಬಚ್ಚಿಟ್ಟು ಕೋಟ್ಯಂತರ ಹಣವನ್ನು ಕದ್ದು ಮುಚ್ಚಿ ವಿದೇಶಿ ಬ್ಯಾಂಕುಗಳಲ್ಲಿ ಠೇವಣಿಯಿಡುವಂತಹ ಈ ದಿನಗಳಲ್ಲಿ, ಮಮತಾ ಸುಪ್ರೀಂಕೋರ್ಟಿನ ಮುಂದೆ ಬಹಿರಂಗಪಡಿಸಿರುವ ಈ ಕೆಲವೊಂದು ಸಂಗತಿಗಳು ಅತಿ ಪ್ರಮುಖವಾಗಿದೆ. ಅವರು ಕೇವಲ ಓರ್ವ ರಾಜಕಾರಣಿ ಮಾತ್ರವಲ್ಲ. ಸುಮಾರು ೧೬೫ಕ್ಕೂ ಅಧಿಕ ಪುಸ್ತಕಗಳ ಲೇಖಕಿಯೂ ಹೌದು. ಈ ಪುಸ್ತಕಗಳಿಂದ ಬರುವಂತಹ ಸಂಭಾವನೆಯೇ ತಮ್ಮ ದೈನಂದಿನ ಖರ್ಚು-ವೆಚ್ಚಗಳ ಮೂಲ ಎಂಬುದನ್ನು ಈಗ ಸುಪ್ರೀಂಕೋರ್ಟ್ ಗಮನಿಸಿದೆ. ಈಕೆ ಓರ್ವ ಕವಯತ್ರಿ ಮತ್ತು ಚಿತ್ರಕಾರರೂ ಹೌದೆಂಬುದು ವಿಶೇಷ.

ಖುದ್ದು ಮುಖ್ಯಮಂತ್ರಿಯೇ ತನ್ನ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಕೋರ್ಟಿನ ಮುಂದೆ ವಿವರಿಸಿ ವಾದ ಮಂಡಿಸುವುದಕ್ಕೂ, ಇದನ್ನೇ ಈ ರಾಜ್ಯದ ಅಡ್ವೋಕೇಟ್ ಜನರಲ್ ಮಂಡಿಸುವ ವಾದಕ್ಕೂ ವ್ಯತ್ಯಾಸವಿದೆ. ಈ ದಿಶೆಯಲ್ಲಿ ಇಲ್ಲಿಯವರೆರೂ ಪ್ರಜಾ ನ್ಯಾಯಾಲಯದ ಮುಂದೆ ದಿಟ್ಟ ಹೋರಾಟಗಳನ್ನು ಮುಂದುವರಿಸಿಕೊಂಡು ಬಂದಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ, ನ್ಯಾಯಾಲಯದೊಳಗೂ ತಾವು ನ್ಯಾಯಕ್ಕಾಗಿ ಹೋರಾಡಲು ಸಿದ್ದ ಎಂಬುದನ್ನು ದೇಶಕ್ಕೆ ಸಂದೇಶ ನೀಡಿದ್ದಾರೆ. ಒಟ್ಟಿನಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೇ ಈಗ ಸುಪ್ರೀಂ ಕೋರ್ಟಿನಲ್ಲಿ ತಾವೇ ನಿಂತು ವಾದ ಮಂಡಿಸುತ್ತಿರುವುದರಿಂದ ಕೇಂದ್ರ ಚುನಾವಣೆ ಆಯೋಗಕ್ಕೆ ತನ್ನ ಸಾಚಾತನ ಮತ್ತು ನೈಜತೆಯನ್ನು ಸಾಬೀತು ಮಾಡಿಕೊಳ್ಳುವ ಸಮಯ ಮತ್ತು ಅಗ್ನಿಪರೀಕ್ಷೆ ಉಂಟಾಗಿದೆ.

Related Posts

Leave a Reply

Your email address will not be published. Required fields are marked *