ಕೊಳ್ಳೇಗಾಲದಲ್ಲಿ ಕಲ್ಯಾಣ ಮಂಟಪಕ್ಕೆ ಕಾರಿನಲ್ಲಿ ಬರುತ್ತಿದ್ದ ವರನ ಅಡ್ಡಗಟ್ಟಿ ಚಾಕು ಇರಿದು ಗುಂಪು ಪರಾರಿಯಾಗಿದ್ದ ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ಈ ಕೃತ್ಯದ ರೂವಾರಿ ಆತನನ್ನು ಮದುವೆಯಾಗಬೇಕಿದ್ದ ವಧು ಎಂಬ ಸತ್ಯವನ್ನು ಬಯಲಿಗೆಳೆದಿದ್ದಾರೆ.
ಡಿ.30ರಂದು ಕುಣಗಳ್ಳಿ ಗ್ರಾಮದ ರವೀಶ್ ಮತ್ತು ನಯನ ಮದುವೆ ನಡೆಯಬೇಕಿತ್ತು. ಹಿಂದಿನ ದಿನ ರಿಸೆಪ್ಶನ್‌ಗೆ ರವೀಶ್ ಸೇರಿದಂತೆ ಸಂಬಂಧಿಕರು ಕಲ್ಯಾಣ ಮಂಟಪದತ್ತ ಹೊರಟಿದ್ದರು. ಕೊಳ್ಳೇಗಾಲದ ವೆಂಕಟೇಶ್ವರ ಮಂಟಪಕ್ಕೆ ಕಾರಿನಲ್ಲಿ ಬರುತ್ತಿದ್ದಾಗ ಮತ್ತೊಂದು ಕಾರಿನಲ್ಲಿ ಬಂದ ಗುಂಪು ರವೀಶ್ ಕಾರನ್ನು ಅಡ್ಡಗಟ್ಟಿ ಚಾಕು ಇರಿದು ಪರಾರಿಯಾಗಿತ್ತು. ಗಾಯಗೊಂಡಿದ್ದ ರವೀಶ್ ಪ್ರಾಣಾಪಾಯದಿಂದ ಬಚಾವ್ ಆಗಿದ್ದರು. ಪ್ರಕರಣದ ತನಿಕೆ ನಡೆಸಿದ ಪೊಲೀಸರು, ವಧು ನಯನಳ ಪೋನ್‌ಕರೆಗಳನ್ನು ಪರಿಶೀಲಿಸಿದಾಗ ಬೆಚ್ಚಿ ಬೀಳುವಂಥ ಮಾಹಿತಿ ಲಭಿಸಿದೆ. ಚಾಕು ಇರಿದ ಆರೋಪಿಗಳ ಜೊತೆ ಆಕೆ ಸಂಪರ್ಕದಲ್ಲಿದ್ದ ವಿಚಾರ ದೃಢಪಟ್ಟಿದೆ.
ಪ್ರಕರಣದ ಮೊದಲ ಆರೋಪಿ ದರ್ಶನ್ ತಮಟೆ ಬಾರಿಸುವ ಹಾಗೂ ಪುಸ್ತಕ ಮಾರಾಟ ಮಾಡುವ ಕೆಲಸ ಮಾಡಿಕೊಂಡಿದ್ದು ಎರಡು ವರ್ಷಗಳಿಂದ ನಯನಳನ್ನು ಪ್ರೀತಿಸುತ್ತಿದ್ದ. ಇದರ ನಡುವೆ ನಯನಗೆ ಕುಣಗಳ್ಳಿ ಗ್ರಾಮದ ರವೀಶ್ ಜೊತೆ ವಿವಾಹ ನಿಶ್ಚಯವಾಗಿತ್ತು. ಬಳಿಕ ರವೀಶ್‌ನ ಮೊಬೈಲ್ ನಂಬರ್ ಆರೋಪಿ ದರ್ಶನ್‌ಗೆ ನೀಡಿ ಬೆದರಿಕೆ ಹಾಕಿ ಮದುವೆ ನಿಲ್ಲಿಸುವಂತೆ ನಯನಾ ಒತ್ತಾಯಿಸಿದ್ದಳು.
ಇಷ್ಟ ಇಲ್ಲದಿದ್ದರೂ ಮನೆಯವರು ನಯನಾಗೆ ಮದುವೆ ಮಾಡಲು ಮುಂದಾಗಿದ್ದರು. ಮದುವೆ ನಿಲ್ಲಿಸಲು ಕೊನೆಯ ಪ್ರಯತ್ನ ಎನ್ನುವಂತೆ ನಯನ ತನ್ನ ತಂಗಿಯ ಮೊಬೈಲ್‌ನಿಂದ ಪ್ರಿಯಕರ ದರ್ಶನ್‌ಗೆ ಕರೆ ಮಾಡಿ ವರನನ್ನು ಹತ್ಯೆ ಮಾಡುವಂತೆ ಹೇಳಿದ್ದಳು. ಪೊಲೀಸ್ ವಿಚಾರಣೆ ವೇಳೆ ಆರೋಪಿ ಎಲ್ಲಾ ವಿಚಾರ ಬಾಯಿ ಬಿಟ್ಟಿದ್ದಾನೆ.
ನಯನ, ನಯನಳ ಪ್ರೇಮಿ ದರ್ಶನ್ ಹಾಗೂ ಮಿಥುನ್‌ನನ್ನ ಪೊಲೀಸರು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಕ್ಕೆ ಪಡೆಯಲಾಗಿದೆ. ಮತ್ತಿಬ್ಬರು ಆರೋಪಿಗಳ ಬಂಧನಕ್ಕೆ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.
ವರನಿಗೆ ಚಾಕು ಇರಿದ ಬಳಿಕ ಮದುವೆ ರದ್ದಾಗಿತ್ತು. ಆಸ್ಪತ್ರೆಗೆ ಬಂದಿದ್ದ ನಯನ ಕಣ್ಣೀರಿಟ್ಟು, ರವೀಶ್ ಬಳಿ ಮದುವೆ ಮಾಡಿಕೊಳ್ಳಿ, ನೀವೂ ಕೈ ಕೊಟ್ಟರೆ ನನ್ನನ್ನು ಯಾರೂ ಮದುವೆಯಾಗುವುದಿಲ್ಲ ಎಂದು ನಾಟಕವಾಡಿದ್ದಳು.


