Sunday, September 13, 2026
Menu

ಗ್ರಾಮ ಭಾರತ ಅಭಿವೃದ್ಧಿಯಾಗದೆ ದೇಶದ ಅಭಿವೃದ್ಧಿ ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ

ಗ್ರಾಮದಿಂದಲೇ ಅಧಿಕಾರ ಕೆಳಗಿನಿಂದ ಮೇಲಕ್ಕೆ ಹೋಗಬೇಕು ಎನ್ನುವ ವಿಕೇಂದ್ರೀಕರಣ ಗಾಂಧಿ, ನೆಹರೂ, ಲೋಹಿಯಾ ಅವರ ಕನಸಾಗಿತ್ತು. ನಮ್ಮದು ಹಳ್ಳಿಗಳ ದೇಶ. ಗ್ರಾಮ ಭಾರತ ಅಭಿವೃದ್ಧಿ ಆಗದೆ ದೇಶ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 2023-24ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಗಳನ್ನು ವಿತರಿಸಿ ಹಾಗೂ ಇ-ಸ್ವತ್ತು 2.0 ತಂತ್ರಾಂಶಕ್ಕೆ ಚಾಲನೆ ನೀಡಿ ಮಾತನಾಡಿದರು.

ಹಿಂದುಳಿದವರ-ದಲಿತರ-ಮಹಿಳೆಯರ ಮೀಸಲಾತಿಯನ್ನು ವಿರೋಧಿಸಿದ್ದು ಬಿಜೆಪಿ- ಜಾರಿ ಮಾಡಿದ್ದು ನಮ್ಮ ಕಾಂಗ್ರೆಸ್ . ಹೀಗಾಗಿ ಇವತ್ತು ಶೇ50 ರಷ್ಟು ಮಹಿಳಾ ಮೀಸಲಾತಿ ರಾಜೀವ್ ಗಾಂಧಿ ಮತ್ತು ಕಾಂಗ್ರೆಸ್ಸಿನ ಕೊಡುಗೆ. ಇದನ್ನು ವಿರೋಧ ಮಾಡಿದ್ದು ಬಿಜೆಪಿಯ ಉಪಾಧ್ಯಕ್ಷರಾಗಿದ್ದ ರಾಜ್ಯ ಸಭಾ ಸದಸ್ಯ ರಾಮಾಜೋಯಿಸ್. ಇದನ್ನು ಅರ್ಥ ಮಾಡಿಕೊಳ್ಳಬೇಕು. ಸುಮ್ಮನೆ ಬಿಜೆಪಿ ಗೆ ಚಪ್ಪಾಳೆ ತಟ್ಟಬಾರದು ಎಂದರು.

ಹಳ್ಳಿಗಳ ಅಭಿವೃದ್ಧಿಯಲ್ಲಿ ಗ್ರಾಮಸ್ಥರ ಪಾಲ್ಗೊಳ್ಳುವಿಕೆ ಬಹಳ ಮುಖ್ಯ. ರಾಜೀವ್ ಗಾಂಧಿಯವರು ಪ್ರಧಾನಿ ಆದಾಗ ಸಂವಿಧಾನ ಪರಿಚ್ಛೇದ 73, 74 ಕ್ಕೆ ತಿದ್ದುಪಡಿ ತಂದು ಸ್ಥಳೀಯ ಸಂಸ್ಥೆಗಳಿಗೆ ಮೀಸಲಾತಿ ತಂದರು. ಈ ತಿದ್ದುಪಡಿ ಬರುವವರೆಗೂ ಮಹಿಳೆಯರಿಗೆ, ಹಿಂದುಳಿದವರಿಗೆ ಮೀಸಲಾತಿಯೇ ಇರಲಿಲ್ಲ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು. ಬಿಜೆಪಿಯ ರಾಮಾಜೋಯಿಸ್ ಮೀಸಲಾತಿ ವಿರೋಧಿಸಿ ಸುಪ್ರೀಂಕೋರ್ಟ್ ಗೆ ಅರ್ಜಿ ಹಾಕಿದ್ದರು. ಆದರೆ, ಸುಪ್ರೀಂಕೋರ್ಟ್ ಮೀಸಲಾತಿ ಪರವಾಗಿ ನಿಂತು ಬಿಜೆಪಿಯ ರಾಮಾ ಜೋಯಿಸ್ ಅರ್ಜಿಯನ್ನು ತಿರಸ್ಕರಿಸಿತು ಎಂದು ಮಾಹಿತಿ ನೀಡಿದರು.

JJM : 13 ಸಾವಿರ ಕೋಟಿ ಬಾಕಿ

ಕೇಂದ್ರ ಸರ್ಕಾರದ ಜಲ ಜೀವನ್ ಮಿಷನ್ ಹೆಸರಿಗೆ ಮಾತ್ರ ಪ್ರಧಾನಿ ಅವರ ಹೆಸರಿನಲ್ಲಿದೆ. ಇದರಲ್ಲಿ ರಾಜ್ಯದ ಪಾಲೇ ಹೆಚ್ಚು. ಕೇಂದ್ರದಿಂದ ಇನ್ನೂ 13 ಸಾವಿರ ಕೋಟಿ ಹಣ ರಾಜ್ಯಕ್ಕೆ ವಾಪಾಸ್ ಬರಬೇಕಿದೆ. ಕೇಂದ್ರದ ಮಾಡುವ ಅನ್ಯಾಯವನ್ನು ರೈತರು ಮತ್ತು ರಾಜ್ಯದ ಜನತೆ ವಿರೋಧಿಸಬೇಕು. ಕಬ್ಬಿನ ದರ ನಿಗಧಿಯಲ್ಲೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರಿಂದ ರೈತರಿಗೆ ಅನ್ಯಾಯವಾಯಿತು. ಆದರೂ ರಾಜ್ಯ ಸರ್ಕಾರ ಸರಿದೂಗಿಸಿ ಕಬ್ಬು ಬೆಳೆಗಾರರ ಪ್ರತಿಭಟನೆಗೆ ಸ್ಪಂದಿಸಿ ಪರಿಹಾರ ನೀಡಿತು ಎಂದು ಸಿಎಂ ಹೇಳಿದರು.

ಇ-ಸ್ವತ್ತು ತಂತ್ರಾಂಶದಿಂದ ಸದ್ಯ 1778 ಕೋಟಿ ತೆರಿಗೆ ಆದಾಯ ಹೆಚ್ಚಾಗುವ ಅಂದಾಜಿದೆ. ತಂತ್ರಾಂಶ ಪರಿಣಾಮಕಾರಿ ಜಾರಿ ಆದರೆ, ಆದಾಯದ ಪ್ರಮಾಣ 2000 ಕೋಟಿಗೂ ಹೆಚ್ಚುವ ನಿರೀಕ್ಷೆ ಇದೆ ಎಂದರು.

ಕಲ್ಯಾಣ ಕರ್ನಾಟಕ‌ ಭಾಗದಲ್ಲಿ 8860ಕಿಮೀ ಕಲ್ಯಾಣ ಪಥಕ್ಕೆ ಚಾಲನೆ ನೀಡಿದ್ದು ನಮ್ಮ ಸರ್ಕಾರ. ಈ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಮಾಡುವುದನ್ನು ಬಿಟ್ಟು ಈ ಬಿಜೆಪಿಯವರು ಜನಪರ ಕೆಲಸ ಮಾಡುತ್ತಿರುವ ನಮ್ಮ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ತರುತ್ತಾರಂತೆ ಎಂದು ಮುಖ್ಯಮಂತ್ರಿ ವ್ಯಂಗ್ಯವಾಡಿದರು.

ನಮ್ಮ ಭಾಗ್ಯಗಳು-ನಮ್ಮ ಗ್ಯಾರಂಟಿಗಳು ಎಲ್ಲಾ ಜಾತಿ, ಎಲ್ಲಾ ಧರ್ಮದ ಬಡವರ ಬದುಕಿನ ಭದ್ರತೆಗಾಗಿ ಜಾರಿ ಮಾಡಿದ್ದು. ಬಿಜೆಪಿ ಯ ಬುರುಡೆ ಗ್ಯಾಂಗ್ ಇಂತಹ ಯಾವುದೇ ಕಾರ್ಯಕ್ರಮ ನೀಡದೆ ಜನರ ಎದುರು ಬುರುಡೆ ಬಿಡುತ್ತಾ ತಿರುಗುತ್ತಿದ್ದಾರೆ‌ ಎಂದು ಟೀಕಿಸಿದರು.

ನಾನೂ ತಾಲೂಕು ಬೋರ್ಡ್ ಸದಸ್ಯನಾಗಿ ಈಗ ಮುಖ್ಯಮಂತ್ರಿವರೆಗೂ ಬೆಳೆದಿದ್ದೇನೆ. ಹೀಗಾಗಿ ಗ್ರಾಮ ಪಂಚಾಯ್ತಿಗಳು ಹಾಗೂ ಸ್ಥಳೀಯ ಸಂಸ್ಥೆಗಳು ಹೆಚ್ಚೆಚ್ಚು ಶಕ್ತಿಯುತವಾಗಬೇಕು ಎನ್ನುವುದು ನನ್ನ ಗುರಿಯೂ ಆಗಿದೆ. ಸಚಿವ ಪ್ರಿಯಾಂಕ್ ಖರ್ಗೆ ಅವರ ನೇತೃತ್ವದಲ್ಲಿ ಗ್ರಾಮ ಕರ್ನಾಟಕ ಅಭಿವೃದ್ಧಿ ಕಾಣುತ್ತದೆ ಎನ್ನುವ ಭರವಸೆ ನನಗಿದೆ ಎಂದರು.

Related Posts

Leave a Reply

Your email address will not be published. Required fields are marked *