ಪಾರ್ಶ್ವವಾಯು ಪೀಡಿತರಾಗಿ ಹಾಸಿಗೆ ಹಿಡಿದದಿದ ವ್ಯಕ್ತಿಯನ್ನು ಪತ್ನಿ, ಆಕೆಯ ಪ್ರಿಯಕರ ಮತ್ತು ಅತ್ತೆ ಸೇರಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಕಿತ್ತಗನೂರಿನ ಯಲ್ಲಪ್ಪ ಗಾರ್ಡನ್ನಲ್ಲಿ ನಡೆದಿದೆ. ಮೂವರೂ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮುಬಾರಕ್ (40) ಕೊಲೆಯಾದ ವ್ಯಕ್ತಿ, ಎರಡು ವರ್ಷದಿಂದ ಪಾರ್ಶ್ವವಾಯುಪೀಡಿತರಾಗಿ ಹಾಸಿಗೆ ಹಿಡಿದಿದ್ದರು. ಅವರನ್ನು ನೋಡಿಕೊಳ್ಳಲು ಪತ್ನಿಗೆ ಕಷ್ಟವಾಗಿತ್ತು, ಅವರ ಮಗಳು ಕೂಡ ಅನಾರೋಗ್ಯದಿಂದ ಬಳಲುತ್ತಿದ್ದರು.
ಮುಬಾರಕ್ ಮತ್ತು ಶಹಿನಾ ಬಾನು 20 ವರ್ಷಗಳ ಹಿಂದೆ ಮದುವೆಯಾಗಿದ್ದರು, ಎರಡು ವರ್ಷಗಳಿಂದ ಮುಬಾರಕ್ ಪಾರ್ಶ್ವವಾಯು ಪೀಡಿತರಾಗಿದ್ದರು. ಮಗಳು ಕೂಡ ಅನಾರೋಗ್ಯಕ್ಕೆ ಒಳಗಾಗಿದ್ದಳು. ಮಗಳನ್ನು ಗುಣಪಡಿಸುವುದಾಗಿ ಹೇಳಿ ನಹೀಮ್ ಉದ್ದೀನ್ ಖುರೇಶಿ ಮನೆಗೆ ಬಂದಿದ್ದ. ಆತನೊಂದಿಗೆ ಶಹಿನಾ ಬಾನು ಅನೈತಿಕ ಸಂಬಂಧ ಹೊಂದಿದ್ದಳು ಎಂಬ ಆರೋಪವಿದೆ. ಪತಿಯನ್ನು ಸಾಯಿಸಲು ನಹೀಮ್ ಸಲಹೆ ನೀಡಿದ್ದ ಎನ್ನಲಾಗಿದೆ.
ತಾಯಿ ಹಸೀನಾ ಬಾನು ಜೊತೆ ಸೇರಿ ಶಹಿನಾ ಮುಬಾರಕ್ನನ್ನು ಕೊಲೆ ಮಾಡಲು ಯೋಜನೆ ರೂಪಿಸಿ, ಆತ ಮಲಗಿದ್ದಾಗ ಉಸಿರುಗಟ್ಟಿಸಿ ಖಾಸಗಿ ಭಾಗಕ್ಕೆ ಹೊಡೆದು ಕೊಲೆ ಮಾಡಿದ್ದಾರೆ. ಆತ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ತಾಯಿ-ಮಗಳು ಹೇಳಿದ್ದರು. ಮೃತ ಮುಬಾರಕ್ ಸಂಬಂಧಿಕರು ಪೊಲೀಸರಿಗೆ ದೂರು ನೀಡಿ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿ ಮೃತಪಟ್ಟಿರುವುದು ದೃಢಪಟ್ಟಿದೆ.
ಪೊಲೀಸರು ಪತ್ನಿ ಶಹಿನಾ ಬಾನು, ಅತ್ತೆ ಹಸೀನಾ ಬಾನು ಮತ್ತು ಪ್ರಿಯಕರ ನಹೀಮ್ ಉದ್ದೀನ್ ಖುರೇಶಿ ಅವರನ್ನು ಬಂಧಿಸಿದ್ದಾರೆ.


