ಒಮನ್‌ನ ಶಿನಾಸ್ ಬಂದಿರಿನ ಬಳಿ ಭಾರತೀಯ ಸಿಬ್ಬಂದಿ ಇದ್ದ ವಾಣಿಜ್ಯ ಹಡಗಿನ ಮೇಲೆ ಅಮೆರಿಕ ದಾಳಿ ನಡೆಸಿದೆ ಎನ್ನಲಾಗಿದ್ದು, ಅಮೆರಿಕ ಹಾಗೂ ಇರಾನ್ ನಡುವಿನ ದಾಳಿಗಳ ನಂತರ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತೆ ಹೆಚ್ಚಿದ ಬಳಿಕ ಇತ್ತೀಚಿನ ದಿನಗಳಲ್ಲಿ ನಡೆದ ಮೂರನೇ ಘಟನೆ ಇದಾಗಿದೆ. ದಾಳಿಗೆ ಒಳಗಾದ ಹಡಗು ಎಂಟಿ ಜಲವೀರ್ ಎಂದು ಗುರುತಿಸಲಾಗಿದೆ. ಇದು ಗಿನಿಯಾ ಧ್ವಜವನ್ನು ಹೊಂದಿರುವ ಹಡಗು. ಎಂಟಿ ಜಲವೀರ್ನಲ್ಲಿ 20 ಭಾರತೀಯ ಸಿಬ್ಬಂದಿ ಇದ್ದರು, ಹಡಗು 119.95 ಮೀಟರ್ ಉದ್ದ ಮತ್ತು 16.84 ಮೀಟರ್ ಅಗಲವಿರುವ ಟ್ಯಾಂಕರ್ ಆಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ.
ಹಡಗಿನಿಂದ ಹೊಗೆ ಬರುತ್ತಿರುವುದನ್ನು ತೋರಿಸುವ ವೀಡಿಯೊ ವೈರಲ್ ಆಗಿದೆ. ಒಮನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಘಟನೆಯ ಬಗ್ಗೆ ಮಾಹಿತಿ ಪಡೆದು ಪರಿಸ್ಥಿತಿ ನಿಭಾಯಿಸುತ್ತಿದೆ. ಅಮೆರಿಕ ಸೇನೆಯು ನಿಯಮ ಪಾಲಿಸದ ಎಂಟು ಹಡಗುಗಳನ್ನು ನಿಷ್ಕ್ರಿಯಗೊಳಿಸಿದ್ದು, 134 ಹಡಗುಗಳನ್ನು ಮರುನಿರ್ದೇಶಿಸಿರುವುದಾಗಿ ಎಂದು ಸೆಂಟ್ರಲ್ ಕಮಾಂಡ್ ತಿಳಿಸಿದೆ.
ಒಮನ್ನಲ್ಲಿ ಭಾರತದ ವಾಣಿಜ್ಯ ಹಡಗಿನ ಮೇಲೆ ಅಮೆರಿಕ ದಾಳಿ ನಡೆಸಿದ್ದು, 24 ಮಂದಿ ಭಾರತೀಯರು ಅದರಲ್ಲಿದ್ದರು. 21 ಮಂದಿಯನ್ನು ರಕ್ಷಿಸಲಾಗಿದ್ದು, ಮೂವರು ಇನ್ನೂ ನಾಪತ್ತೆಯಾಗಿದ್ದಾರೆ. ಒಮನ್‌ನಲ್ಲಿರುವ ಭಾರತ ರಾಯಭಾರ ಕಚೇರಿಯು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಸಂಬಂಧ ಅಲ್ಲಿನ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿತ್ತು. ನಾಪತ್ತೆಯಾಗಿದ್ದ ಉಳಿದ ಮೂವರು ಭಾರತೀಯ ನಾವಿಕರು ದುರದೃಷ್ಟವಶಾತ್ ಮೃತಪಟ್ಟಿದ್ದಾರೆಂದು ಕೇಂದ್ರ ಹಡಗು ಸಚಿವ ಸರ್ಬಾನಂದ ಸೋನೊವಾಲ್ ದೃಢಪಡಿಸಿದ್ದಾರೆ. ಮೃತ ನಾವಿಕರ ಕುಟುಂಬಗಳಿಗೆ ಸರ್ಕಾರವು ಎಲ್ಲಾ ರೀತಿಯ ಬೆಂಬಲವನ್ನು ಘೋಷಿಸಿದೆ ಎಂದು ಸಚಿವಾಲಯ ತಿಳಿಸಿದೆ.
ರಾಸಾಯನಿಕ ಮತ್ತು ತೈಲ ಉತ್ಪನ್ನಗಳ ಟ್ಯಾಂಕರ್ ಸೆಟ್ಟೆಬೆಲ್ಲೊ ಮೇಲೆ ಒಮನ್ ಕರಾವಳಿಯಲ್ಲಿ ಅಮೆರಿಕದ ಕ್ಷಿಪಣಿ ದಾಳಿ ನಡೆಸಿದೆ ಎಂದು ಹೇಳಲಾಗಿದೆ. ಮಧ್ಯಪ್ರಾಚ್ಯ ಉದ್ವಿಗ್ನತೆ ಹೆಚ್ಚುತ್ತಿರುವಂತೆ ವ್ಯಾಪಾರಿ ಹಡಗುಗಳ ಮೇಲಿನ ದಾಳಿಗಳು ಹೆಚ್ಚು ಅಪಾಯಕಾರಿಯಾಗುತ್ತಿವೆ ಎಂದು ಭಾರತ ಕಳವಳ ವ್ಯಕ್ತಪಡಿಸಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ತುರ್ತು ರಾಜತಾಂತ್ರಿಕ ಪ್ರಯತ್ನಗಳಿಗೆ ಕರೆ ನೀಡಿದೆ. ಅಮೆರಿಕ ರಾಜತಾಂತ್ರಿಕರಿಗೆ ಭಾರತ ಸಮನ್ಸ್ ಜಾರಿ ಮಾಡಿದೆ. ಅಮೆರಿಕದ ದಾಳಿಗೆ ಪ್ರತಿಯಾಗಿ ಇರಾನ್ ಹರ್ಮುಜ್ ಜಲಸಂಧಿಯನ್ನು ಮುಚ್ಚುವುದಾಗಿ ಘೋಷಿಸಿದೆ.
ತೈಲ ಟ್ಯಾಂಕರ್‌ಗಳು ಮತ್ತು ವಾಣಿಜ್ಯ ಹಡಗುಗಳು ಸೇರಿದಂತೆ ಎಲ್ಲಾ ನೌಕೆಗಳ ಸಂಚಾರಕ್ಕೆ ಹರ್ಮುಜ್ ಜಲಸಂಧಿಯನ್ನು ಮುಚ್ಚಲಾಗಿದೆ ಎಂದು ಪ್ರಕಟಿಸಲಾಗಿದೆ. ಯಾವುದೇ ಹಡಗುಗಳು ಈ ಮಾರ್ಗದ ಮೂಲಕ ಹಾದುಹೋಗಲು ಪ್ರಯತ್ನಿಸಿದರೆ ಅವುಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗುವುದು ಎಂದು ಇರಾನ್ ಎಚ್ಚರಿಸಿದೆ.
ದಕ್ಷಿಣ ಇರಾನ್ ಪ್ರಾಂತ್ಯದ ಮೇಲೆ ಅಮೆರಿಕ ನಡೆಸಿದ ದಾಳಿಗಳು ಸೇರಿದಂತೆ ನಿರಂತರವಾಗಿ ಕೈಗೊಳ್ಳುತ್ತಿರುವ ವೈರತ್ವದ ಕ್ರಮಗಳಿಗೆ ಪ್ರತಿಕ್ರಿಯೆಯಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಇರಾನ್ ತಿಳಿಸಿದೆ. ಸೆಂಟ್ರಲ್ ಕಮಾಂಡ್ ಪ್ರತಿಕ್ರಿಯಿಸಿದ್ದು, ವಾಣಿಜ್ಯ ಹಡಗುಗಳು ಎಂದಿನಂತೆ ಹರ್ಮುಜ್ ಜಲಸಂಧಿಯ ಒಳಗೆ ಮತ್ತು ಹೊರಗೆ ಮುಕ್ತವಾಗಿ ಸಂಚರಿಸುತ್ತಿವೆ. ಅಮೆರಿಕದ ಯಾವುದೇ ಯುದ್ಧನೌಕೆಗಳ ಮೇಲೆ ದಾಳಿಯಾಗಿಲ್ಲ ಎಂದು ತಿಳಿಸಿದೆ. ಇರಾನ್ ಮಾಧ್ಯಮಗಳು ಬಿತ್ತರಿಸುತ್ತಿರುವ ಸುದ್ದಿಗಳನ್ನು ಸಂಪೂರ್ಣ ಸುಳ್ಳು ಸುದ್ದಿ ಎಂದಿದೆ.
ಅಮೆರಿಕದ ದಾಳಿಗಳಿಗೆ ಪ್ರತಿಯಾಗಿ ಇರಾನ್ ಹರ್ಮುಜ್ ಜಲಸಂಧಿಯನ್ನು ಮುಚ್ಚಿರುವುದು ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಆತಂಕ ಸೃಷ್ಟಿಸಿದೆ. ಕಚ್ಚಾ ತೈಲದ ಬೆಲೆಗಳು ಶೇ. 2ಕ್ಕಿಂತ ಹೆಚ್ಚು ಏರಿಕೆಯಾಗಿವೆ. ಈ ಬಿಕ್ಕಟ್ಟಿಂದಾಗಿ ಇಂಧನ ಬೆಲೆಗಳು ಮತ್ತಷ್ಟು ಗಗನಕ್ಕೇರಲಿವೆ ಎಂಬ ಭೀತಿ ವ್ಯಕ್ತವಾಗಿದೆ. ಭಾರತವು ತನಗೆ ಅಗತ್ಯವಿರುವ ಕಚ್ಚಾ ತೈಲದ ಶೇ. 88ರಷ್ಟು ಭಾಗವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಇದರಲ್ಲಿ ಅರ್ಧದಷ್ಟು ತೈಲ ಆಮದುಗಳು ಹರ್ಮುಜ್ ಜಲಸಂಧಿಯ ಮೂಲಕವೇ ಭಾರತವನ್ನು ತಲುಪುತ್ತವೆ, ಭಾರತವು ಬಳಸುವ ಒಟ್ಟು ಎಲ್‌ಪಿಜಿಯಲ್ಲಿ ಶೇ. 60ಕ್ಕಿಂತ ಹೆಚ್ಚು ಭಾಗವನ್ನು ಆಮದು ಮಾಡಿಕೊಳ್ಳಲಾಗುತ್ತಿದ್ದು, ಇದೂ ಜಲಸಂಧಿಯ ಮಾರ್ಗವಾಗಿ ಬರುತ್ತದೆ. ಈ ಮಾರ್ಗದಲ್ಲಿ ತೊಡಕಾದರೆ ಭಾರತದ ಆರ್ಥಿಕತೆಯ ತೀವ್ರ ವ್ಯತಿರಿಕ್ತ ಪರಿಣಾಮ ಬೀರಲಿದೆ.


