Menu

ಬರಗಾಲ, ಪ್ರವಾಹದಿಂದ ಸಂತ್ರಸ್ತರಾದ ರೈತರಿಗೆ ಸರ್ಕಾರ 50,000 ರೂ. ವರೆಗೆ ಸಾಲ ಮನ್ನಾ ಮಾಡಲಿ

ಬರಗಾಲ ಮತ್ತು ಪ್ರವಾಹದಿಂದ ಸಂತ್ರಸ್ತರಾಗಿರುವ ರೈತರ ನೆರವಿಗೆ ರಾಜ್ಯ ಸರ್ಕಾರ ಕೂಡಲೇ ಧಾವಿಸಬೇಕೆಂದು ಆಗ್ರಹಿಸಿರುವ ಪ್ರತಿಪಕ್ಷ ನಾಯಕ ಆರ್‌ ಅಶೋಕ, ತುರ್ತು ಪರಿಹಾರದ ಜೊತೆಗೆ ತಲಾ 50,000 ರೂ.ವರೆಗೆ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರಿಗೆ ಪತ್ರ ಬರೆದಿದ್ದಾರೆ. ರಾಜ್ಯದ ಹಲವಾರು ಜಿಲ್ಲೆಗಳು ತೀವ್ರ ಬರಗಾಲದಿಂದ ತತ್ತರಿಸುತ್ತಿದ್ದರೆ,  ಉತ್ತರ ಕರ್ನಾಟಕ ಹಾಗೂ ಮಲೆನಾಡು ಭಾಗಗಳಲ್ಲಿ ಅತಿವೃಷ್ಟಿ ಮತ್ತು ಪ್ರವಾಹದ ಆತಂಕ ಎದುರಾಗಿದೆ. ಲಕ್ಷಾಂತರ ರೈತರು, ಕೃಷಿ ಕಾರ್ಮಿಕರು ಹಾಗೂ ಗ್ರಾಮೀಣ ಕುಟುಂಬಗಳು ಸಂಕಷ್ಟದಲ್ಲಿದ್ದು, ಸರ್ಕಾರದ ತುರ್ತು ನೆರವು ನಿರೀಕ್ಷಿಸುತ್ತಿದ್ದಾರೆ.  ವಿಳಂಬ ಮಾಡದೆ ಬರ ಮತ್ತು ಪ್ರವಾಹದಿಂದ
ಸಂತ್ರಸ್ತರಾಗಿರುವ ಎಲ್ಲ ರೈತರಿಗೆ ₹50,000 ವರೆಗೆ ಸಾಲಮನ್ನಾ ಘೋಷಿಸಿ ಸಂಕಷ್ಟಕ್ಕೆ ಸೃ೦ದಿಸಬೇಕು ಎಂದು ಆಗ್ರಹ ಮಾಡಿದ್ದಾರೆ.

ಕೆಪಿಸಿಸಿ ಸರ್ವಸದಸ್ಯರ ಸಭೆಯಲ್ಲಿ ಬರ ಪರಿಹಾರ ಕಾರ್ಯಕ್ಕಾಗಿ 10 ಸಾವಿರ ಕೋಟಿ ರೂ. ಮೊತ್ತವನ್ನು ಕೇಂದ್ರ ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕೆಂದು ಮಾಡಿರುವ ನಿರ್ಣಯ ಬೇಜವಾಬ್ದಾರಿಯುತ ಮತ್ತು ದುರದೃಷ್ಟಕರ ಎಂದು  ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬರ ನಿರ್ವಹಣೆ, ಬೆಳೆಹಾನಿ ಸಮೀಕ್ಷೆ, ಎಸ್‌ಡಿಆರ್‌ಎಫ್‌ ನಿಧಿಯ ಸಮರ್ಪಕ ಬಳಕೆ, ರೈತರಿಗೆ ಮಧ್ಯಂತರ ಪರಿಹಾರ ವಿತರಣೆ ಹಾಗೂ ಕೇಂದ್ರ ಸರ್ಕಾರಕ್ಕೆ ಕಾಲಮಿತಿಯೊಳಗೆ ಸಮಗ್ರ ವರದಿ ಸಲ್ಲಿಸುವುದು ರಾಜ್ಯ ಸರ್ಕಾರದ ಜವಾಬ್ದಾರಿ. ಈ ಕರ್ತವ್ಯಗಳನ್ನು ಸಮರ್ಪಕವಾಗಿ ನಿರ್ವಹಿಸುವ ಬದಲು, ತನ್ನ ಆಡಳಿತ ವೈಫಲ್ಯ ಮರೆಮಾಚಲು ಕೇಂದ್ರ ಸರ್ಕಾರದ ವಿರುದ್ದ ಆರೋಪಗಳ ನಿರ್ಣಯ ಕೈಗೊಂಡಿರುವುದು ರಾಜ್ಯದ ರೈತರಿಗೆ
ಮಾಡುವ ದೊಡ್ಡ ದ್ರೋಹ ಎಂದು ಅವರು ಹೇಳಿದ್ದಾರೆ.

ಎನ್‌ಡಿಆರ್‌ಎಫ್‌ ನೆರವು ಯಾವುದೇ ಸರ್ಕಾರದ ಇಚ್ಛೆಯಂತೆ ಬಿಡುಗಡೆಯಾಗುವುದಿಲ್ಲ. ರಾಜ್ಯ ಸರ್ಕಾರ ಸಮಗ್ರ ಸಮೀಕ್ಷೆ ನಡೆಸಿ ಕೇಂದ್ರ ಸರ್ಕಾರಕ್ಕೆ ವರದಿ ಸಹಿತ ಮನವಿ ಸಲ್ಲಿಸಬೇಕು. ಕೇಂದ್ರದ ಗೃಹ ಸಚಿವರ ನೇತೃತ್ವದ ಸಮಿತಿ ಸಭೆ ನಡಸಿ ನಿಯಮಾನುಸಾರ ರಾಜ್ಯಗಳಿಗೆ ನಿಗದಿತ ಕಾನೂನುಬದ್ಧ ಪ್ರಕ್ರಿಯೆಯಂತೆ ನೆರವು ಬಿಡುಗಡೆ ಮಾಡುತ್ತದೆ. ಅಲ್ಲಿಯವರೆಗೆ ಎಸ್‌ಡಿಆರ್‌ಎಫ್‌ ನಿಧಿ ಬಳಸಿಕೊಂಡು ರೈತರಿಗೆ ತಕ್ಷಣದ ಪರಿಹಾರ ನೀಡುವುದು ರಾಜ್ಯ ಸರ್ಕಾರದ ಮೊದಲ ಕರ್ತವ್ಯ.ಕೇಂದ್ರ, ಸರ್ಕಾರದ ಮೇಲೆ ಗೂಬೆ ಕೂರಿಸಿ ಜವಾಬ್ದಾರಿಯಿಂದ ನುಣುಚಿಕೊಳ್ಳುವುದರಲ್ಲೇ ಕಾಂಗ್ರೆಸ್‌ ಸರ್ಕಾರ ಕಾಲಹರಣ ಮಾಡುತ್ತಿದೆಯೇ ಹೊರತು ರೈತರ ನೆರವಿಗೆ ಬರುವ ಉದ್ದೇಶವೇ ಇದ್ದಂತಿಲ್ಲ ಎಂದಿದ್ದಾರೆ.

2019 ರಲ್ಲಿ ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಉತ್ತರ ಕರ್ನಾಟಕದಲ್ಲಿ ಪ್ರವಾಹ ಉಂಟಾಗಿತ್ತು.  ಯಡಿಯೂರಪ್ಪನವರೇ  ಪ್ರವಾಸ ಕೈಗೊಂಡು ರೈತರಿಗೆ ಧೈರ್ಯ ತುಂಬುವ ಕೆಲಸ ಮಾಡಿದರು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಎಸ್‌ಡಿಆರ್‌ಎಫ್‌ ಅನ್ವಯ ನೀಡುವ ಬೆಳೆಹಾನಿ ಪರಿಹಾರವನ್ನು ದುಪ್ಪಟ್ಟುಗೊಳಿಸಲಾಯಿತು. 2022 ನೇ ಸಾಲಿನಲ್ಲಿ  ಕೇಂದ್ರದ ಮಾರ್ಗಸೂಚಿಗಿಂತ ಹೆಚ್ಚಿನ ಪರಿಹಾರವನ್ನು ರಾಜ್ಯ ಸರ್ಕಾರದ ಹೆಚ್ಚುವರಿ ಅನುದಾನದ ಮೂಲಕ ನೀಡಿ ರೈತರ ಬೆನ್ನಿಗೆ ನಿಲ್ಲಲಾಗಿತ್ತು ಎಂದು  ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ವಿರುದ್ಧ ನಿರಾಧಾರ ಆರೋಪಗಳನ್ನು ಕೈಬಿಟ್ಟು, ರಾಜ್ಯ ಸರ್ಕಾರ ತನ್ನ ಕರ್ತವ್ಯವನ್ನು ನಿರ್ವಹಿಸಿ, ತಾವು ನೀಡಿರುವ ಸಾಲ ಮನ್ನಾ ಭರವಸೆಯನ್ನು ತಕ್ಷಣ ಕಾರ್ಯರೂಪಕ್ಕೆ ತರಬೇಕೆಂದು  ಆಗ್ರಹಿಸಿದ್ದಾರೆ.. ಬರ ಮತ್ತು ಪ್ರವಾಹದಿ೦ದ ಸಂಕಷ್ಟಕ್ಕೊಳಗಾದ ಎಲ್ಲಾ ರೈತರಿಗೆ ಕನಿಷ್ಠ ₹50,000 ವರೆಗೆ ಸಾಲ ಮನ್ನಾ ಘೋಷಿಸಬೇಕು.   ಎಸ್‌ಡಿಆರ್‌ಎಫ್‌ ನಿಧಿಯಿಂದ ತಕ್ಷಣ ಮಧ್ಯಂತರ ಪರಿಹಾರ ಬಿಡುಗಡೆ ಮಾಡಿ ಯಾವುದೇ ರೈತ ನೆರವಿನಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರತಿ ತಾಲೂಕಿನಲ್ಲಿ ಸ್ಥಳೀಯ ಶಾಸಕರ ನೇತೃತ್ವದಲ್ಲಿ ವಿಶೇಷ ಟಾಸ್ಕ್‌ ಫೋರ್ಸ್‌ ರಚಿಸಿ ಬೆಳೆಹಾನಿ ಸಮೀಕ್ಷೆ, ಪರಿಹಾರ ವಿತರಣೆ ಹಾಗೂ ಪುನರ್ವಸತಿ ಕಾರ್ಯಗಳ ಮೇಲ್ವಿಚಾರಣೆ ನಡೆಸಬೇಕು.  ಜಿಲ್ಲಾಧಿಕಾರಿಗಳಿಗೆ ಪಿಡಿ ಅಕೌಂಟ್‌ ಹಾಗೂ ಎಸ್‌ಡಿಆರ್‌ಎಫ್‌ ನಿಧಿಯಿಂದ ತುರ್ತು ಅನುದಾನ ಬಿಡುಗಡೆ ಮಾಡಿ ಪರಿಹಾರ ಕಾರ್ಯಗಳಿಗೆ ವೇಗ ನೀಡಬೇಕು.  ಬೆಳೆಹಾನಿ ಸಮೀಕ್ಷೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿ, ರಾಜ್ಯಕ್ಕೆ ದೊರೆಯಬೇಕಾದ ಎನ್‌ಡಿಆರ್‌ಎಫ್‌ ನೆರವನ್ನು ಶೀಘ್ರ ಪಡೆದುಕೊಳ್ಳಬೇಕು.  ಸಚಿವರು ಹಾಗೂ ಉಸ್ತುವಾರಿ ಕಾರ್ಯದರ್ಶಿಗಳು ಜಿಲ್ಲೆಗಳಿಗೆ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಆಲಿಸಿ ಪರಿಹಾರ ಕ್ರಮಗಳನ್ನು ಜಾರಿಗೊಳಿಸಬೇಕು. ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.

Related Posts

Leave a Reply

Your email address will not be published. Required fields are marked *