ಬಾಗಲಕೋಟೆಯ ಮುಧೋಳ ಸಮೀಪದ ಮಂಟೂರು ಬೈಪಾಸ್ ಬಳಿ ಭಾರೀ ಪ್ರಮಾಣದ ಹಣ ಸಾಗಿಸುತ್ತಿದ್ದ ಕಾರಿನ ಮೇಲೆ ಕಲ್ಲೆಸೆದು ಅರ್ಧದಷ್ಟು ಹಣವನ್ನು ಅಪರಿಚಿತರು ದೋಚಿಕೊಂಡು ಹೋಗಿರುವ ಘಟನೆ ನಡೆದಿದೆ.
ಮಹಾರಾಷ್ಟ್ರ ಪಾಸಿಂಗ್ ಹೊಂದಿರುವ ಮಹೀಂದ್ರಾ ಎಸ್ಯುವಿ 700 (MH 43 CC 9820) ವಾಹನ ರಾಯಭಾಗದಿಂದ ಲೋಕಾಪುರ ಮಾರ್ಗವಾಗಿ ತೆರಳುತ್ತಿದ್ದ ವೇಳೆ, ಬೇರೊಂದು ವಾಹನದಲ್ಲಿ ಬಂದ ಅಪರಿಚಿತರು ಮಂಟೂರ ಬೈಪಾಸ್ ಬಳಿ ಕಲ್ಲೆಸೆದಿದ್ದಾರೆ.
ಆ ಕಾರಿನ ಡಿಕ್ಕಿಯಲ್ಲಿ ಕರ್ನಾಟಕ ನೋಂದಣಿ ಸಂಖ್ಯೆಯ KA 48 N 4044 ನಂ ಪ್ಲೇಟ್ ಪತ್ತೆಯಾಗಿದೆ. ದಾಳಿಯ ಬಳಿಕ ವಾಹನದಲ್ಲಿದ್ದ ಅರ್ಧದಷ್ಟು ಹಣವನ್ನು ಅಪರಿಚಿತರು ಕದ್ದೊಯ್ದಿದ್ದಾರೆ.
ಹಣ ಡಬ್ಲಿಂಗ್ ಮಾಡುವ ಗ್ಯಾಂಗ್ ಇದಾಗಿದೆ ಎಂದು ತಿಳಿದು ಬಂದಿದ್ದು, ಅದರಲ್ಲಿ ಒಬ್ಬನ್ನು ಪೊಲೀಸರು ಬಂಧಿಸಿದ್ದಾರೆ. ಮೂವರು ಪರಾರಿಯಾಗಿದ್ದಾರೆ. ಕಾರಿನಲ್ಲಿ ಸಾಗಿಸುತ್ತಿದ್ದ ಹಣ ಖೋಟಾ ನೋಟುಗಳಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ಮುಧೋಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಣ ಹೊತ್ತಿದ್ದ ಕಾರನ್ನು ಠಾಣೆಗೆ ತೆಗೆದುಕೊಂಡು ಹೋಗಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ಕಲೆ ಹಾಕುವ ಜೊತೆಗೆ ತನಿಖೆ ಮುಂದುವರಿಸಿದ್ದಾರೆ.


