ಶೃಂಗೇರಿಯ ಅಂಚೆ ಮತಗಳ ಮರು ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಎನ್.ಜೀವರಾಜ್ ಗೆಲುವು ಸಾಧಿಸಿದ್ದಾರೆ. ಚುನಾವಣಾ ಅಧಿಕಾರಿ ಗೌರವ ಕುಮಾರ್ ಶೆಟ್ಟಿ ಅಧಿಕೃತವಾಗಿ ಫಲಿತಾಂಶವನ್ನು ಪ್ರಕಟಿಸಿದ್ದಾರೆ.
ಶೃಂಗೇರಿ ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶವನ್ನು ಚುನಾವಣಾಧಿಕಾರಿ ಪ್ರಕಟಿಸದಂತೆ ಕಾಂಗ್ರೆಸ್ ಸರ್ಕಾರ ಒತ್ತಡ ಹೇರಿದೆ. ಚುನಾವಣಾಧಿಕಾರಿಗಳು ಕೂಡಲೇ ಫಲಿತಾಂಶ ಪ್ರಕಟಿಸಿ ಹೈಕೋರ್ಟ್ ಆದೇಶ ಪಾಲಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ, ಸಂಸದ ಪ್ರಲ್ಹಾದ್ ಜೋಷಿ ಆಗ್ರಹಿಸಿದ್ದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ 52 ಅಂಚೆ ಮತಗಳು ಬಿಜೆಪಿ ಅಭ್ಯರ್ಥಿ ಡಿ.ಎನ್.ಜೀವರಾಜ್ ಅವರಿಗೆ ದೊರೆತಿದೆ. ಮತ ಎಣಿಕೆಯಲ್ಲಿ ಯಾರಿಗೆ ಹೆಚ್ಚು ಮತ ಬರುತ್ತದೋ ಅದನ್ನು ಘೋಷಿಸಬೇಕೆಂದು ಕೋರ್ಟ್ ಆದೇಶದಲ್ಲಿ ಹೇಳಲಾಗಿದೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ಕೇಳಿದಾಗ, ಹೈಕೋರ್ಟ್‌ಗೆ ಮಾಹಿತಿ ನೀಡುತ್ತೇವೆ ಎಂದು ಸಬೂಬು ಹೇಳಿದ್ದಾರೆ. ಕಾಂಗ್ರೆಸ್ ಸರ್ಕಾರ ಚುನಾವಣಾಧಿಕಾರಿಯ ಮೇಲೆ ಒತ್ತಡ ಹೇರಿ ಫಲಿತಾಂಶವನ್ನು ತಡೆಹಿಡಿದಿದೆ. ಈ ಮೂಲಕ ಕೋರ್ಟ್ ಆದೇಶ ಉಲ್ಲಂಘಿಸಲಾಗಿದೆ. ಇದು ರಾಜ್ಯದ ಜನತೆಗೆ ಬಗೆದ ದ್ರೋಹ ಎಂದು ಟೀಕಿಸಿದ್ದರು.
ಬಿಜೆಪಿ ಪರವಾಗಿ ಫಲಿತಾಂಶ ಬರಲಿದೆ ಎಂದು ತಿಳಿದಾಕ್ಷಣ ಅಧಿಕಾರಿಗಳು ಉಲ್ಟಾ ಹೊಡೆದಿದ್ದಾರೆ. ಪ್ರತಿ ಬಾರಿ ಅಂಚೆ ಮತಗಳನ್ನು ಮೊದಲು ಎಣಿಸುತ್ತಾರೆ. ಬಳಿಕ ಮತಯಂತ್ರದಲ್ಲಿ ಮತಗಳನ್ನು ಎಣಿಸಲಾಗುತ್ತದೆ. ಆದರೆ ಶೃಂಗೇರಿಯಲ್ಲಿ ಎಲ್ಲವನ್ನೂ ಉಲ್ಟಾ ಪಲ್ಟಾ ಮಾಡಲಾಗಿದೆ, ಚುನಾವಣಾಧಿಕಾರಿ ಕೂಡಲೇ ಫಲಿತಾಂಶ ಪ್ರಕಟಿಸಬೇಕು ಎಂದು ಆಗ್ರಹಿಸಿದ್ದರು.


