ಅನಾರೋಗ್ಯ ಮತ್ತು ಕೌಟುಂಬಿಕ ಸಮಸ್ಯೆಗಳನ್ನು ಪರಿಹರಿಸುವುದಾಗಿ ನಂಬಿಸಿದ ಸ್ವಯಂಘೋಷಿತ ಗುರುವೊಬ್ಬನನ್ನು ಮಹಿಳೆಯ ಮೇಲೆ ೧೫ ವರ್ಷ ಲೈಂಗಿಕ ದೌರ್ಜನ್ಯ ಜೊತೆಗೆ ಮೂತ್ರ ಕುಡಿಸಿ ವಿದ್ಯುತ್ ಶಾಕ್ ನೀಡಿರುವ ಆರೋಪದಡಿ ಏಳು ಮಂದಿ ಸಹಚರರೊಂದಿಗೆ ಪುಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಪ್ರಮುಖ ಆರೋಪಿಯನ್ನು ರಾಧಾಮೋಹನ್ ಮಿಶ್ರಾ (59) ಎಂದು ಗುರುತಿಸಲಾಗಿದೆ. ಸಹಾಯಕ ಕನ್ವಾಲ್ ನಯನ್ (58) ಹಾಗೂ ಆರು ಮಹಿಳಾ ಸಹಚರರನ್ನು ವಾಘೋಲಿಯ ಉಬಳೆನಗರದಲ್ಲಿರುವ ಬಂಗಲೆಯಲ್ಲಿ ಪುಣೆ ನಗರ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಸಿಂಹಗಡ ರಸ್ತೆ ನಿವಾಸಿ, ಖಾಸಗಿ ಕಂಪನಿಯ ಉದ್ಯೋಗಿಯಾಗಿರುವ ಸಂತ್ರಸ್ತೆ ನೀಡಿದ ದೂರಿನ ಅನ್ವಯ ಈ ದಾಳಿ ನಡೆದಿದ್ದು, ಆರೋಪಿಗಳನ್ನು ಜೂನ್ 20ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಹರಿಯಾಣದವನಾದ ಆರೋಪಿ ಮಿಶ್ರಾ, ಎಂಟು ವರ್ಷಗಳಿಂದ ಪುಣೆಯಲ್ಲಿ ನೆಲೆಸಿದ್ದು, ಉಬಳೆನಗರದ ಬಂಗಲೆಯಲ್ಲಿ ಆಶ್ರಮ ನಡೆಸುತ್ತಿದ್ದನು. ತನ್ನನ್ನು ತಾನು ದೇವರ ಅವತಾರ ಎಂದು ಹೇಳಿಕೊಳ್ಳುತ್ತಿದ್ದ ಸಂತ್ರಸ್ತೆಗೆ 15 ವರ್ಷದೈಹಿಕ, ಲೈಂಗಿಕ ಮತ್ತು ಮಾನಸಿಕ ಹಿಂಸೆ ನೀಡಿದ್ದಾನೆ. ಆಕೆಗೆ ತನ್ನ ಮೂತ್ರವನ್ನು ಕುಡಿಯುವಂತೆ ಒತ್ತಾಯಿಸಿದ್ದ, ವಿದ್ಯುತ್ ಶಾಕ್ ನೀಡಿದ್ದಾನೆ. ಪತಿಗೆ ವಿಚ್ಛೇದನ ನೀಡುವಂತೆ ಬೆದರಿಸಿ ಆಕೆಯ ಆಸ್ತಿಯನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಂಡಿದ್ದಾನೆ ಎಂದು ಪುಣೆ ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ವಿವರಿಸಿದ್ದಾರೆ.
ಸಂತ್ರಸ್ತೆಯ ಕುಟುಂಬಸ್ಥರನ್ನು ಆಕೆಯ ವಿರುದ್ಧವೇ ತಿರುಗುವಂತೆ ಮಾಡಿದ್ದನು. ಅಂತಿಮವಾಗಿ ಸಂತ್ರಸ್ತೆ, ಬಂಗಲೆಯಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಒಡೆದುಹಾಕಿ ಅಲ್ಲಿಂದ ತಪ್ಪಿಸಿಕೊಂಡು ತವರು ಮನೆಗೆ ನಂದಿದ್ದಾಳೆ. ತನಗಾದ ಅನ್ಯಾಯವನ್ನು ವಿವರಿಸಿದ ಬಳಿಕ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದಾರೆ. ಖರಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2001 ರಿಂದ 2026ರ ನಡುವೆ ಹರಿಯಾಣ ಮತ್ತು ಪುಣೆಯಲ್ಲಿ ಈ ಅಪರಾಧ ಕೃತ್ಯಗಳು ನಡೆದಿವೆ. ಆಶ್ರಮದ ಮೇಲೆ ದಾಳಿ ನಡೆಸಿದಾಗ 19 ಹಾರ್ಡ್ ಡಿಸ್ಕ್ಗಳು, 12 ಲ್ಯಾಪ್ಟಾಪ್ಗಳು, 1 ಟ್ಯಾಬ್ಲೆಟ್, 11 ಮೊಬೈಲ್ ಫೋನ್ಗಳು, ಡಿವಿಡಿ, ಸಿಡಿ, 23 ಪೆನ್ ಡ್ರೈವ್ಗಳು, 15 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 6.5 ಲಕ್ಷ ನಗದು ಹಾಗೂ 10 ಬುಲೆಟ್ ವಶಪಡಿಸಿಕೊಳ್ಳಲಾಗಿದೆ. ಆಶ್ರಮದಲ್ಲಿ ಸುರಂಗ ಮಾರ್ಗ ನಿರ್ಮಿಸುತ್ತಿರುವುದು ಪತ್ತೆಯಾಗಿದೆ.


