ಸಂಜು ವೆಡ್ಸ್ ಗೀತಾ ಭಾಗ-1ಸೂಪರ್ ಹಿಟ್ ಸಿನಿಮಾ. ಅದರ ಯಶಸ್ಸನ್ನೇ ಮುಂದುವರಿಸುವ ನಾಗಶೇಖರ್-ಶ್ರೀನಗರ ಕಿಟ್ಟಿ ಪ್ರಯತ್ನ ವಿಫಲವಾಗಿದೆ. ಶುಕ್ರವಾರ ತೆರೆ ಕಂಡಿರುವ ಸಂಜು ವೆಡ್ಸ್ ಗೀತಾ ಭಾಗ-2 ಹೇಳಿಕೊಳ್ಳುವಂಥ, ನೋಡಬೇಕೆನಿಸುವಂಥ ಕಥೆಯೇನಲ್ಲ. 2 ಗಂಟೆ 2 ನಿಮಿಷದಲ್ಲಿ ಯಾರಿಗೂ ಬೇಡವಾದ ಟಿವಿ ಧಾರಾವಾಹಿಯಂತೆ ಬೋರಿಂಗ್. ಆದರೆ ಚಿತ್ರದ ಶ್ರೀಮಂತಿಕೆಯನ್ನು ಅಲ್ಲಗಳೆಯುವಂತಿಲ್ಲ. ಚಿತ್ರದ ಹಾಡುಗಳು ಕೇಳುವಂತಿವೆಯಾದರೂ ನೆನಪಲ್ಲುಳಿಯುವುದು ಕಷ್ಟ.
ಗೀತಾ ಮಿಸ್ ಕರ್ನಾಟಕ. ಆಗರ್ಭ ಶ್ರೀಮಂತನ ಮಗಳು. ಸಂಜು ಬೀದಿ ಬೀದಿಯಲ್ಲಿ ರೇಷ್ಮೆ ಸೀರೆ ಮಾರುವ ಸ್ವಾಭಿಮಾನದ, ಹೆಣ್ಣಿಗೆ ಗೌರವ ನೀಡುವ ಹುಡುಗ. ಇಂಥ ಹುಡುಗನನ್ನು ಹುಡುಕಲು ಗೀತಾ ಈ ಕಾಲದಲ್ಲೂ ಹರಸಾಹಸ ಪಡುವುದು ಅತಿಶಯೋಕ್ತಿಯೇ. ಆತನ ವಿಳಾಸವನ್ನು ಹುಡುಕಿ ಕೊಡುವ ಅಪ್ಪ, ಸ್ನೇಹ ಆದರೆ ಓಕೆ, ಸಲುಗೆ ಬೆಳೆದರೆ ಜೋಕೆ ಎಂತಲೂ ಎಚ್ಚರಿಕೆ ಕೊಡುತ್ತಾನೆ. ಪ್ರೇಕ್ಷಕನ ನಿರೀಕ್ಷೆಯಂತೆ ಸಂಜು-ಗೀತಾ ಮದುವೆ ಆಗುತ್ತಾರೆ.
ಹತ್ತು ವರ್ಷದಲ್ಲಿ ಅಪ್ಪನಷ್ಟೇ ಶ್ರೀಮಂತಿಕೆ ಗಳಿಸುವ ಕನಸು ಆಕೆಯದ್ದು. ಆಕೆಯ ಕಣ್ಣಿಂದ ಹನಿ ನೀರು ಬರದಂತೆ ಶ್ರಮಿಸುವ ಕೆಲಸ ಈತನದ್ದು. ಹತ್ತು ವರ್ಷ ಬಂದೇ ಬಿಡುತ್ತದೆ. ಆಕೆಯ ಕನಸೂ ನನಸಾಗಿರುತ್ತದೆ. ಇಲ್ಲಿಂದ ಸರ್ಪ್ತೈಸ್ ಮೇಲೆ ಸರ್ಪ್ರೈಸ್ನ್ನು ಗೀತಾಳಿಗೆ ಕೊಡುವ ಸಂಜುಗೆ ಆಘಾತಕಾರಿ ಸಂಗತಿ ಎದುರಾಗುವುದು ಸಿನಿಮಾದಲ್ಲಿರುವ ಏಕೈಕ ಟ್ವಿಸ್ಟ್. ಆನಂತರ ಸಿನಿಮಾದಲ್ಲಿ ಬರುವ ಸನ್ನಿವೇಶಗಳನ್ನು ಸರಳವಾಗಿ ಊಹಿಸಬಹುದು.
ಇಲ್ಲೂ ಮಳೆ ಇದೆ. ನಿಷ್ಕಲ್ಮಶ ಪ್ರೇಮವಿದೆ. ಜೊತೆಗೆ ರೇಷ್ಮೆ ಬೆಳೆಗಾರನ ಅಳಲಿದೆ. ರೇಷ್ಮೆ ಬ್ರ್ಯಾಂಡ್ ಮಾಡುವ ಕನಸಿದೆ. ಇವೆಲ್ಲವನ್ನೂ ಇನ್ನೂ ಉತ್ತಮವಾಗಿ ಕಟ್ಟಿಕೊಡುವ ಸಾಧ್ಯತೆಯನ್ನು ನಿರ್ದೇಶಕ ನಾಗಶೇಖರ್ ಕೈ ಚೆಲ್ಲಿದ್ದಾರೆ. ಇಡೀ ಚಿತ್ರದುದ್ದಕ್ಕೂ ಕನ್ನಡದಷ್ಟೇ ಎನ್ನಬಹುದಾದಷ್ಟು ಇಂಗ್ಲಿಷ್ ಪದಗಳಿವೆ. ಇವು ಸಾಮಾನ್ಯ ಪ್ರೇಕ್ಷಕನನ್ನು ತಲುಪುವುದು ಕಷ್ಟ ಎನ್ನುವ ಸಾಮಾನ್ಯ ಸಂಗತಿಯನ್ನು ಚಿತ್ರತಂಡ ಅರಿಯಬೇಕಿತ್ತು.
ಶ್ರೀನಗರ ಕಟ್ಟಿ ಮತ್ತು ರಚಿತಾರಾಮ್ ಚಿತ್ರದ ಬಹುತೇಕ ಎಲ್ಲ ಫ್ರೇಮ್ಗಳಲ್ಲೂ ಇದ್ದಾರೆ. ಈ ಎರಡೇ ಪಾತ್ರಗಳೇ ಚಿತ್ರಕ್ಕೆ ಮುಖ್ಯ ಎನ್ನುವಷ್ಟರಮಟ್ಟಿಗೆ ಇನ್ನುಳಿದ ಪಾತ್ರಗಳು ಡಮ್ಮಿಯಾಗಿವೆ. ಸಂಪತ್ ಇದ್ದರೂ ವಿಲನ್ನ ತೀರಾ ಅಬ್ಬರವಿಲ್ಲ. ರಂಗಾಯಣ ರಘು ಹೀಗೇ ಬಂದು ಹಾಗೇ ಹೋಗುತ್ತಾರಷ್ಟೇ. ಸಾಧುಕೋಕಿಲ, ತಬಲಾ ನಾಣಿ ಇದ್ದರೂ ಕಾಮಿಡಿ ವಿಷಯದಲ್ಲಿ ಅವರ ಸಾಮರ್ಥ್ಯ ಸರಿಯಾಗಿ ಬಳಕೆಯಾಗಿಲ್ಲ. ಛಾಯಾಗ್ರಹಣ ಮತ್ತು ಸಂಗೀತಕ್ಕೆ ಸ್ಕೋರ್ ನೀಡಬಹುದು. ಬಿಜಿಎಂ ಚನ್ನಾಗಿಲ್ಲ. ಸ್ವಿಟ್ಜರ್ಲ್ಯಾಂಡ್ ಸೀನ್ಸ್ ಚನ್ನಾಗಿವೆ.
ಕ್ಲೈಮ್ಯಾಕ್ಸ್ನಲ್ಲೂ ಟ್ವಿಸ್ಟ್ ಇದೆಯಾದರೂ ಅನಿರೀಕ್ಷಿತ ಎನ್ನುವಂತಿಲ್ಲ. ಸಮಯ, ಹಣ ಮತ್ತು ತಾಳ್ಮೆ ಇದ್ದರೆ ಕುಟುಂಬದ ಜೊತೆ ಸಿನಿಮಾ ನೋಡಬಹುದು. ಏಕೆಂದರೆ ಇದೊಂದು IDLY – I Deeply Love You ಎನ್ನುತ್ತಲೇ ಉಸಿರು ಬದಲಾಯಿಸುವ ಪ್ರೇಮಿಗಳ ಕಥೆ, ರೇಷ್ಮೆಯನ್ನು ಮಾರುಕಟ್ಟೆಯಲ್ಲಿ ಬ್ರ್ಯಾಂಡ್ ಮಾಡುವ ಯುವಕನ ನವಿರು ಕಥೆ. ಆದರೆ ಸಿನಿಮಾದಲ್ಲಿ ರೋಚಕತೆ ಇಲ್ಲ ಎನ್ನುವುದು ಬೇಸರದ ಸಂಗತಿ.
ತಾರಾಗಣ: ಶ್ರೀನಗರ ಕಿಟ್ಟಿ, ರಚಿತಾ ರಾಮ್, ತಬಲಾ ನಾಣಿ, ಸಾಧು ಕೋಕಿಲಾ, ರಂಗಾಯಣ ರಘು, ಸಂಪತ್ ಮತ್ತಿತರರು.
ನಿರ್ಮಾಪಕ: ಚಲುವಾದಿ ಕುಮಾರ್, ನಿರ್ದೇಶನ : ನಾಗಶೇಖರ್, ಛಾಯಾಗ್ರಹಣ : ಸತ್ಯ ಹೆಗಡೆ, ಸಂಗೀತ: ಶ್ರೀಧರ್ ವಿ ಸಂಭ್ರಮ್.