ನಾಯಕ ಶುಭಮನ್ ಗಿಲ್ ಶತಕದ ಹೊರತಾಗಿಯೂ ಸಂಘಟಿತ ಪ್ರದರ್ಶನ ನೀಡಿದ ಕರ್ನಾಟಕ ತಂಡ 207 ರನ್ ಗಳ ಭಾರೀ ಅಂತರದಿಂದ ಪಂಜಾಬ್ ತಂಡವನ್ನು ಮಣಿಸಿ ರಣಜಿ ಟ್ರೋಫಿಯಲ್ಲಿ ಭರ್ಜರಿ ಶುಭಾರಂಭ ಮಾಡಿದೆ.
ಬೆಂಗಳೂರಿನಲ್ಲಿ ನಡೆದ ಸಿ ಗುಂಪಿನ ಪಂದ್ಯದಲ್ಲಿ 420 ರನ್ ಗಳ ಭಾರೀ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಪಂಜಾಬ್ ತಂಡ 63.3 ಓವರ್ ಗಳಲ್ಲಿ 213 ರನ್ ಗಳಿಗೆ ಆಲೌಟ್ ಆಯಿತು.
24 ರನ್ ಗೆ 2 ವಿಕೆಟ್ ನಿಂದ ಎರಡನೇ ಇನಿಂಗ್ಸ್ ಮುಂದುವರಿಸಿದ ಪಂಜಾಬ್ ತಂಡ ಶುಭಮನ್ ಗಿಲ್ ಶತಕದ ನೆರವಿನಿಂದ ಹೋರಾಟ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಗಿಲ್ 171 ಎಸೆತಗಳಲ್ಲಿ 14 ಬೌಂಡರಿ ಮತ್ತು 3 ಸಿಕ್ಸರ್ ಸಹಾಯದಿಂದ 102 ರನ್ ಬಾರಿಸಿ ಔಟಾದರು.
ಕೆಳ ಕ್ರಮಾಂಕದಲ್ಲಿ ಮಯಾಂಕ್ ಮರ್ಕಡೆ (27) ಮತ್ತು ಸುಕದೀಪ್ ಸಿಂಗ್ (26) ಹೋರಾಟ ನಡೆಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ಕರ್ನಾಟಕದ ಪರ ಯಶೋವರ್ಧನ್ ಪ್ರತಾಪ್ ಮತ್ತು ಶ್ರೇಯಸ್ ಗೋಪಾಲ್ ತಲಾ 3 ವಿಕೆಟ್ ಉರುಳಿಸಿದರೆ, ಪ್ರಸಿದ್ಧ ಕೃಷ್ಣ 2 ವಿಕೆಟ್ ಪಡೆದರು.