Menu

ಕೇರಳದಲ್ಲಿ ಅಧಿಕಾರ ನಿರೀಕ್ಷಿತ , ತಮಿಳುನಾಡಲ್ಲಿ ಅಚ್ಚರಿ ಫಲಿತಾಂಶ: ಡಿಕೆ ಶಿವಕುಮಾರ್

“ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳು ನಮ್ಮ ಕೈ ಹಿಡಿದಿವೆ. ಜನರ ಕಷ್ಟಕ್ಕೆ ನಮ್ಮ ಸರ್ಕಾರ ಸ್ಪಂದಿಸಿದೆ. ಹೀಗಾಗಿ ಕರ್ನಾಟಕ ಉಪಚುನಾವಣೆಗಳಲ್ಲಿ ಉತ್ತಮ ಫಲಿತಾಂಶ ಬಂದಿದೆ. ಬೇರೆ ರಾಜ್ಯಗಳ ಪೈಕಿ ಕೇರಳದಲ್ಲಿ ಅಧಿಕಾರಕ್ಕೆ ಬರುತ್ತೇವೆ ಎನ್ನುವ ವಿಶ್ವಾಸವಿತ್ತು” ಎಂದು ಡಿಸಿಎಂ ಡಿಕೆ ಶಿವಕುಮಾರ್  ಹೇಳಿದರು.

ರಾಜ್ಯದ ಉಪಚುನಾವಣೆ, ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದ ಕುರಿತು ಮಾಧ್ಯಮಗಳ ಜೊತೆ ಶಿವಕುಮಾರ್ ಮಾತನಾಡಿದರು. ದಾವಣಗೆರೆ ದಕ್ಷಿಣದಲ್ಲಿ ಗೆಲುವಿನ ಅಂತರ 25-30 ಸಾವಿರಕ್ಕಿಂತ ಕಡಿಮೆ ಆಗಿರುವ ಬಗ್ಗೆ ಕೇಳಿದಾಗ, “ಇಷ್ಟೆಲ್ಲಾ ಗೊಂದಲ ಆದಮೇಲೆ 25-30 ಸಾವಿರ ಅಂತರದ ಗೆಲುವು ಸಿಗುವುದಿಲ್ಲ ಎಂಬುದು ಗೊತ್ತಿತ್ತು. ಆದರೆ ಆರಾಮವಾಗಿ ಗೆಲ್ಲುತೇವೆ ಎಂದು ಗೊತ್ತಿತ್ತು. ಎಸ್ ಡಿಪಿಐನಿಂದ ಅಪಾಯವಾಗಿದೆ” ಎಂದರು.

ಎಸ್ ಡಿಪಿಐ ಮತಗಳಿಕೆಯ ಬಗ್ಗೆ ಕೇಳಿದಾಗ, “ಅದರ ಬಗ್ಗೆ ಮುಖ್ಯಮಂತ್ರಿಗಳು ಈಗಾಗಲೇ ಮಾತನಾಡಿದ್ದಾರೆ. ನಾನೇನು ಮಾತನಾಡಲು ಹೋಗುವುದಿಲ್ಲ. ಎಸ್ ಡಿಪಿಐ ಅನ್ನು ಹಗುರವಾಗಿ ನಾವು ಪರಿಗಣಿಸಿರಲಿಲ್ಲ. ಅದೂ ಸಹ ರಾಜಕೀಯ ಪಕ್ಷ. ಅವರು ಅಲ್ಪಸಂಖ್ಯಾತರ ಮತ ತೆಗೆದುಕೊಂಡರು” ಎಂದು ಹೇಳಿದರು.

ಚುನಾವಣೆ ಫಲಿತಾಂಶವು ರಾಜ್ಯದಲ್ಲಿ ಏನಾದರೂ ಬದಲಾವಣೆ ತರಲಿದೆಯೇ ಎಂದು ಕೇಳಿದಾಗ, “ನಮ್ಮ ರಾಜ್ಯಕ್ಕೆ ಏನೂ ಆಗುವುದಿಲ್ಲ. ಒಂದಷ್ಟು ಜನಕ್ಕೆ ಸಂತೋಷ, ಒಂದಷ್ಟು ಜನಕ್ಕೆ ಬೇಜಾರು ಆಗಬಹುದು. ಡಬಲ್ ಎಂಜಿನ್ ಸರ್ಕಾರ ಇದ್ದಾಗಲೇ ಅವರಿಗೆ ಏನೂ ಮಾಡಲಿಲ್ಲ” ಎಂದರು.

ಕೇರಳದಲ್ಲಿ ಯುಡಿಎಫ್ ಮೈತ್ರಿಯ ಗೆಲುವಿನ ಬಗ್ಗೆ ಕೇಳಿದಾಗ, “ಅಲ್ಲಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಾವು ಗೆದ್ದಿದ್ದೆವು. ಎಲ್ ಡಿಎಫ್ 10 ವರ್ಷಗಳ ಕಾಲ ಆಡಳಿತ ನಡೆಸಿದೆ. ಅದಕ್ಕೆ ಜನ ಬದಲಾವಣೆ ಬೇಕು ಎಂದು ಫಲಿತಾಂಶ ನೀಡಿದ್ದಾರೆ. ಪ್ರಚಾರಕ್ಕೂ ಹೋದಾಗಲೂ ಜನ ನಮ್ಮ ಬಗ್ಗೆ ವಿಶ್ವಾಸ ವ್ಯಕ್ತಪಡಿಸುತ್ತಿದ್ದರು” ಎಂದು ತಿಳಿಸಿದರು.

ತಮಿಳುನಾಡಿನ ಫಲಿತಾಂಶದ ಬಗ್ಗೆ ಕೇಳಿದಾಗ, “ತಮಿಳುನಾಡಿನದ್ದು ಅಚ್ಚರಿಯ ಫಲಿತಾಂಶ. ಅಲ್ಲಿ ಹೊಸ ಯುಗ ಪ್ರಾರಂಭವಾಗಿದೆ. ಜನರ ನಾಡಿಮಿಡಿತವನ್ನು ನಾವು ಗ್ರಹಿಸಲು ಆಗಲಿಲ್ಲ. ಸ್ಥಳೀಯ ನಾಯಕರು ಈ ಬಗ್ಗೆ ಹೇಳಿದ್ದರು. 40 ವರ್ಷಗಳ ರಾಜಕೀಯದಲ್ಲಿ ಸಂಬಂಧ, ನೆಂಟಸ್ತನ ಬಿಡಲು ಆಗುತ್ತದೆಯೇ” ಎಂಉ ಉತ್ತರಿಸಿದರು.

ಸ್ಟಾಲಿನ್ ಅವರ ಜೊತೆ ರಾಹುಲ್ ಗಾಂಧಿ ಅವರು ಎಲ್ಲಿಯೂ ಕಾಣಿಸಿಕೊಳ್ಳಲಿಲ್ಲ ಎನ್ನುವ ಬಗ್ಗೆ ಕೇಳಿದಾಗ, “ಆ ಬಗ್ಗೆ ಮಾತನಾಡಲು ನಾನು ಹೋಗುವುದಿಲ್ಲ. ಹೈಕಮಾಂಡ್ ತೀರ್ಮಾನ ಮಾಡಿದಂತೆ ನಾವೆಲ್ಲರೂ ಅಲ್ಲಿಗೆ ಹೋಗಿದ್ದೇವಲ್ಲ” ಎಂದರು. ಸೆಲೆಬ್ರಿಟಿ ಅನ್ನುವ ಕಾರಣಕ್ಕೆ ಜನ ಮತ ಹಾಕಿದ್ದಾರೆಯೇ ಎಂದು ಕೇಳಿದಾಗ, “ಶೇ 30-40 ರಷ್ಟು ಮತ ಹೋಗಬಹುದು ಎಂದು ಕೊಂಡಿದ್ದೆವು. ಆದರೆ ಅದಕ್ಕೂ ಹೆಚ್ಚು ಮತ ಅವರಿಗೆ ಹೋಗಿದೆ” ಎಂದು ಪ್ರತಿಕ್ರಿಯಿಸಿದರು.

ಅಸ್ಸಾಂ ರಾಜ್ಯದಲ್ಲಿ ನಿರೀಕ್ಷಿತ ಫಲಿತಾಂಶ ಬಾರದಿರುವ ಬಗ್ಗೆ ಕೇಳಿದಾಗ, “ನಾವು 50- 60 ಸ್ಥಾನ ಬರುತ್ತೇವೆ ಎಂದು ಕೊಂಡಿದ್ದೆವು. ಅಲ್ಲಿನ ಸ್ಥಳೀಯ ನಾಯಕರೂ 50 ಸ್ಥಾನಗಳನ್ನು ಮುಟ್ಟುತ್ತೇವೆ ಎಂದು ಹೇಳಿದ್ದರು” ಎಂದರು. ಸೋಲಿಗೆ ಕಾರಣ ಏನಿರಬಹುದು ಎಂದು ಕೇಳಿದಾಗ, “ಕ್ಷೇತ್ರ ಮರುವಿಂಗಡಣೆ ಮಾಡುವಾಗ ಅಲ್ಪಸಂಖ್ಯಾತರು ಒಂದೇ ಕಡೆ ಬರುವಂತೆ ಮಾಡಿದ್ದಾರೆ. ಉಪಾಯವಾಗಿಯೇ ಇದನ್ನು ಮಾಡಲಾಗಿದೆ” ಎಂದು ತಿಳಿಸಿದರು.

ಪಶ್ಚಿಮ ಬಂಗಾಳದ ಬಗ್ಗೆ ಕೇಳಿದಾಗ, “ಅಲ್ಲಿ ವ್ಯವಸ್ಥಿತವಾಗಿ ಅಧಿಕಾರ ದುರುಪಯೋಗವಾಗಿದೆ. ಎಲೆಕ್ಷನ್ ಕಮಿಷನ್ ಅನ್ನು ಎಷ್ಟು ದುರುಪಯೋಗ ಪಡಿಸಿಕೊಳ್ಳಬೇಕೋ ಅಷ್ಟು ದುರುಪಯೋಗ ಮಾಡಿಕೊಂಡಿದ್ದಾರೆ. ಈ ಹಿಂದೆ ಬಹಳ ಪ್ರಯತ್ನ ಮಾಡಿದರು. ಈಗ ಎರಡು ಲಕ್ಷಕ್ಕೂ ಹೆಚ್ಚು ಮತಗಳನ್ನು ಅಳಿಸಿ ಹಾಕಿದ ಕಾರಣಕ್ಕೆ ಬದಲಾವಣೆಯಾಗಿದೆ” ಎಂದರು.

Related Posts

Leave a Reply

Your email address will not be published. Required fields are marked *