Menu

ಪೋಕ್ಸೊ ಆರೋಪಿ ವಚನಾನಂದ ಶ್ರೀ ಜಾಮೀನು ರದ್ದುಗೊಳಿಸಲು ಕೋರ್ಟ್‌ಗೆ ಪೊಲೀಸ್‌ ಮನವಿ

ಪೋಕ್ಸೊ ಪ್ರಕರಣದ ಆರೋಪಿ, ಹರಿಹರ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ಪ್ರಕರಣ ದಾಖಲಾಗುವ ಮೊದಲೇ ಪಡೆದಿರುವ ನಿರೀಕ್ಷಣಾ ಜಾಮೀನು ರದ್ದುಗೊಳಿಸುವಂತೆ ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ  ಮನವಿ ಸಲ್ಲಿಸಿದ್ದಾರೆ.

ಮುಚ್ಚಿದ ಲಕೋಟೆಯಲ್ಲಿ ಕೋರ್ಟ್‌ಗೆ ವರದಿ ಜೊತೆ ಮನವಿ ಸಲ್ಲಿಕೆ ಮಾಡಿದ ತನಿಖಾಧಿಕಾರಿ, ಜಾಮೀನು ರದ್ದು ಮಾಡುವಂತೆ ಕೋರಿದ್ದಾರೆ. ಈ ಮನವಿಯ ವಿಚಾರಣೆಯು ಮೇ 29ರಂದು ವಿಶೇಷ ನ್ಯಾಯಾಲಯದಲ್ಲಿ ನಡೆಯಲಿದೆ.

ಲೈಂಗಿಕ ದೌರ್ಜನ್ಯ ಹಾಗೂ ಹಲ್ಲೆ ವಿಚಾರವಾಗಿ ಕಳೆದ ವಾರ ವಚನಾನಂದ ಶ್ರೀ ವಿರುದ್ಧ ಪೋಕ್ಸೋ ಕಾಯ್ದೆಯಡಿ ಗಂಭೀರ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾಗುವ ಮೊದಲೇ ಸ್ವಾಮೀಜಿ ನಿರೀಕ್ಷಣಾ ಜಾಮೀನು ಪಡೆದಿದ್ದರು.  ತನಿಖಾಧಿಕಾರಿ ಸುರೇಶ್ ಸಗರಿ ಜಾಮೀನನ್ನು ರದ್ದು ಮಾಡುವಂತೆ ಕೋರಿ ಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ.

ಮಕ್ಕಳ ಮೇಲೆ ಸ್ವಾಮೀಜಿ ನಡೆಸಿದ್ದಾರೆ ಎನ್ನಲಾದ ದೌರ್ಜನ್ಯ ಮತ್ತು ಹಲ್ಲೆ ಕುರಿತು ಸಂಪೂರ್ಣ ಮಾಹಿತಿಯನ್ನೊಳಗೊಂಡ ಪ್ರಮುಖ ವರದಿಯನ್ನು ಪೊಲೀಸರು ಮುಚ್ಚಿದ ಲಕೋಟೆಯಲ್ಲಿ ಬಾಗಲಕೋಟೆ ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದಾರೆ. ನ್ಯಾಯಾಲಯವು ಪೊಲೀಸರ ಮನವಿಯಂತೆ ಜಾಮೀನು ರದ್ದುಗೊಳಿಸಿದರೆ, ವಚನಾನಂದ ಸ್ವಾಮೀಜಿ ಬಂಧನವಾಗುವ ಸಾಧ್ಯತೆ ಇದೆ.

ವಚನಾನಂದ ಸ್ವಾಮೀಜಿ ವಿರುದ್ಧ 16 ವರ್ಷದ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಹರಿಹರ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಮಠದ ಟ್ರಸ್ಟಿಗಳೊಂದಿಗಿನ ಭಿನ್ನಾಭಿಪ್ರಾಯದಿಂದ ಸ್ವಾಮೀಜಿಯನ್ನು ಪೀಠದಿಂದ ಪದಚ್ಯುತಗೊಳಿಸಿದ ಬೆನ್ನಲ್ಲೇ ದೂರು ದಾಖಲಾಗಿತ್ತು.

ಸಂತ್ರಸ್ತ ಬಾಲಕನ ತಾಯಿ ಮೇ 7ರಂದು ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣವನ್ನು ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾಯಿಸಿ ಮೇ 8ರಂದು ಅಧಿಕೃತವಾಗಿ ಎಫ್‌ಐಆರ್ ದಾಖಲಿಸಲಾಗಿತ್ತು.

Related Posts

Leave a Reply

Your email address will not be published. Required fields are marked *