ಬಳ್ಳಾರಿಯ ಸಿರಗುಪ್ಪ ತಾಲೂಕು ಪೊಲೀಸರು ಬೈಕ್ ಕಳ್ಳನನ್ನು ಬಂಧಿಸಿ 20.50 ಲಕ್ಷ ರೂಪಾಯಿ ಮೌಲ್ಯದ ವಿವಿಧ ಕಂಪನಿಗಳ 41 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಬಳ್ಳಾರಿಯ ಅಹಂಬಾವಿ ನಗರದ ನಿವಾಸಿ, ಆಟೋ ಚಾಲಕ ಸಿದ್ದಾರೆಡ್ಡಿ ಬಂಧಿತ ಆರೋಪಿ. ಒಂದೂವರೆ ವರ್ಷದಿಂದ ಬೈಕ್ ಕಳ್ಳತನದಲ್ಲಿ ತೊಡಗಿದ್ದ ಸಿದ್ದಾರೆಡ್ಡಿ ‘ಕರ್ನಾಟಕ ಒನ್’ ಮೂಲಕ ನಕಲಿ ಆರ್‌ಸಿ ಸೃಷ್ಟಿಸಿ ರೈತರಿಗೆ ಬೈಕ್ ಮಾರಾಟ ಮಾಡುತ್ತಿದ್ದ ಎಂಬುದು ಪತ್ತೆಯಾಗಿದೆ.
ಜೂನ್ 2 ರಂದು ಸಿರಗುಪ್ಪ ಪೊಲೀಸ್ ಠಾಣೆಯಲ್ಲಿ ದ್ವಿಚಕ್ರ ವಾಹನ ಕಳವು ಪ್ರಕರಣ ದಾಖಲಾಗಿತ್ತು. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳು ಹಾಗೂ ತಾಂತ್ರಿಕ ಸಾಕ್ಷ್ಯಗಳ ಆಧಾರದಲ್ಲಿ ಆರೋಪಿ ಸಿದ್ದಾರೆಡ್ಡಿಯನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ನಡೆಸಿದಾಗ ಒಂದೂವರೆ ವರ್ಷದಿಂದ ವಾರಕ್ಕೊಂದು ಬೈಕ್ ಕದಿಯುತ್ತಿರುವುದಾಗಿ ಬಾಯ್ಬಿಟ್ಟಿದ್ದಾನೆ.
ಹಗಲು ಹೊತ್ತಿನಲ್ಲಿ ನಕಲಿ ಕೀ ಬಳಸಿ ಬೈಕ್‌ಗಳನ್ನು ಕದ್ದು, ಅವುಗಳ ನಂಬರ್ ಪ್ಲೇಟ್ ಕಿತ್ತು ಹಾಕುತ್ತಿದ್ದ. ಬೇರೊಂದು ಬೈಕ್‌ನ ನಂಬರ್ ಪ್ಲೇಟ್ ಫೋಟೊ ತೆಗೆದುಕೊಂಡು, ‘ಕರ್ನಾಟಕ ಒನ್’ ಕೇಂದ್ರದ ಮೂಲಕ ನಕಲಿ ಆರ್‌ಸಿ ಕಾರ್ಡ್ ಮಾಡಿಸುತ್ತಿದ್ದ. ನಕಲಿ ದಾಖಲೆಗಳನ್ನು ತೋರಿಸಿ ಕದ್ದ ಬೈಕ್‌ಗಳನ್ನು ಹಳ್ಳಿಗಳ ರೈತರಿಗೆ ಹಾಗೂ ಆಂಧ್ರಪ್ರದೇಶದ ಗಡಿ ಭಾಗದ ಜನರಿಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ.
ಬಳ್ಳಾಯಲ್ಲಿ 15, ಚಿತ್ರದುರ್ಗದಲ್ಲಿ 21, ವಿಜಯನಗರದಲ್ಲಿ ನಾಲ್ಕು ಹಾಗೂ ಆಂಧ್ರದ ಅನಂತಪುರದಲ್ಲಿ ಒಂದು ಬೈಕ್ ಸೇರಿದಂತೆ 41 ಬೈಕ್‌ಗಳನ್ನು ಕದ್ದಿರುವುದಾಗಿ ವಿಚಾರಣೆ ವೇಳೆ ಆರೋಪಿ ಹೇಳಿದ್ದಾನೆ. ಸಿರಗುಪ್ಪ ಪೊಲೀಸರ ಕಾರ್ಯವೈಖರಿಯನ್ನು ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಪೆನ್ನೇಕರ್ ಶ್ಲಾಘಿಸಿ ತಂಡಕ್ಕೆ ನಗದು ಬಹುಮಾನ ಘೋಷಿಸಿದ್ದಾರೆ.


