ನಲ್ವತ್ತು ವರ್ಷದ ಬಳಿಕ ಮಹಿಳೆ ಐವಿಎಫ್ ಮೂಲಕ ಇಬ್ಬರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದು, ಅವು ತನ್ನ ಖಾಸಗಿತನಕ್ಕೆ ಅಡ್ಡಿಯಾಗುತ್ತವೆ ಎಂದು ಕತ್ತು ಹಿಚುಕಿ ಸಾಯಿಸಿರುವ ದಾರುಣ ಘಟನೆ ಬೆಂಗಳೂರಿನ ತಲಘಟ್ಟಪುರದಲ್ಲಿ ನಡೆದಿದೆ.
ಉಮಾದೇವಿ ಪುಟಾಣಿ ಅವಳಿ ಹೆಣ್ಣುಮಕ್ಕಳ ಕೊಲೆಗೈದ ತಾಯಿ. ಈಕೆ ಮೇ ತಿಂಗಳಲ್ಲಿ ಮಹಿಳೆ ಇಬ್ಬರು ಹೆಣ್ಣುಮಕ್ಕಳಿಗೆ ಜನ್ಮ ನೀಡಿದ್ದರು. ಮಕ್ಕಳನ್ನು ಕೊಲೆ ಮಾಡಿದ ಬಳಿಕ ತಾಯಿ ಖಿನ್ನತೆಗೆ ಒಳಗಾಗಿದ್ದಾಳೆ ಎನ್ನಲಾಗಿದೆ. ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.
ಮಕ್ಕಳನ್ನು ನೀರು ತುಂಬಿದ ಬಕೆಟ್‌ನಲ್ಲಿ ಮುಳುಗಿಸಿ ಕೊಲೆ ಮಾಡಿರುವ ತಾಯಿ, ಬಳಿಕ ತಾನೂ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದರು ಎನ್ನಲಾಗಿದೆ. ಪತಿ ರಾಮಲಿಂಗಪ್ಪ ದೂರು ನೀಡಿದ್ದು, ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಮಲಿಂಗಪ್ಪ–ಉಮಾದೇವಿ 2002ರಲ್ಲಿ ಮದುವೆ ಆಗಿದ್ದರು. ರಾಮಲಿಂಗಪ್ಪ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು. ಐವಿಎಫ್ ಚಿಕಿತ್ಸೆ ಮೂಲಕ, 2026ರ ಮೇ 5ರಂದು ಉಮಾದೇವಿಗೆ ಅವಳಿ ಹೆಣ್ಣು ಮಕ್ಕಳು ಜನಿಸಿದ್ದವು.
ಒಂದೂವರೆ ತಿಂಗಳಿನಿಂದ ಉಮಾದೇವಿ ಮಕ್ಕಳ ಬಗ್ಗೆ ನಿರಾಸಕ್ತಿ ತೋರಿಸುತ್ತಿದ್ದರು. ಆಶ್ರಮಕ್ಕೆ ಸೇರಿಸುವಂತೆಯೂ ಹೇಳುತ್ತಿದ್ದರು. ಅಸಹಜವಾಗಿ ವರ್ತಿಸುತ್ತಿದ್ದರು. ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಮನೋವೈದ್ಯಕೀಯ ಚಿಕಿತ್ಸೆ ಕೊಡಿಸಲಾಗಿತ್ತು ಎಂದು ತಿಳಿದು ಬಂದಿದೆ. ಹೆರಿಗೆಯ ನಂತರದ ಹಾರ್ಮೋನ್ ಅಸಮತೋಲನದಿಂದ ಈ ರೀತಿ ಆರೋಗ್ಯ ಮಸ್ಯೆ ಉಂಟಾಗುತ್ತದೆಂದು ವೈದ್ಯರು ತಿಳಿಸಿದ್ದರು.
ಹಣ ನೀಡಲಿಲ್ಲವೆಂದು ತಂದೆಯ ಕೊಂದ ಮಗ
ಹಣ ನೀಡಲಿಲ್ಲವೆಂಬ ಸಿಟ್ಟಿಗೆ ಮಗನೇ ತಂದೆಯನ್ನು ರಾಡ್‌ನಿಂದ ಹೊಡೆದು ಕೊಂದ ಘಟನೆ ಬಂಗಾರಪೇಟೆ ಪಟ್ಟಣದಲ್ಲಿ ನಡೆದಿದೆ. ಪೊಲೀಸರು ಆರೋಪಿ ಮಗನನ್ನು ಬಂಧಿಸಿದ್ದಾರೆ.
ವಿಜಯನಗರ ಬಡಾವಣೆಯಲ್ಲಿ ಈ ಘಟನೆ ನಡೆದಿದ್ದು, ವೆಂಕಟಕೃಷ್ಣ ಬಾಬು (70) ಕೊಲೆಯಾದವರು. ಅವರ ಇಬ್ಬರು ಪುತ್ರರಲ್ಲಿ ದೊಡ್ಡ ಮಗ ಬೆಂಗಳೂರಿನಲ್ಲಿದ್ದು, ಚಿಕ್ಕ ಮಗ ಸೀಮೇಶ್ಕರ್ ತಂದೆಯೊಂದಿಗೆ ಬಂಗಾರಪೇಟೆಯಲ್ಲಿ ವಾಸವಾಗಿದ್ದ. ಸೀಮೇಶ್ಕರ್ರು 75 ಸಾವಿರ ರೂ. ಕೈಸಾಲ ಮಾಡಿಕೊಂಡಿದ್ದ. ಸಾಲ ತೀರಿಸಲು ತಂದೆಯ ಬಳಿ ಹಣ ನೀಡುವಂತೆ ಒತ್ತಾಯಿಸುತ್ತಿದ್ದ. ಇದೇ ವಿಚಾರವಾಗಿ ತಂದೆ-ಮಗನ ನಡುವೆ ವಾಗ್ವಾದ ನಡೆದಿದೆ. ಕೋಪಗೊಂಡ ಸೀಮೇಶ್ಕರ್ ಕಬ್ಬಿಣದ ರಾಡ್‌ನಿಂದ ತಂದೆಯ ತಲೆಗೆ ಹೊಡೆದಿದ್ದಾನೆ. ಗಾಯಗೊಂಡ ವೆಂಕಟಕೃಷ್ಣ ಬಾಬು ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ನಡೆಸಿದರೂ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ಬಳಿಕ ಯಾರೋ ಅಪರಿಚಿತರು ಮನೆಗೆ ನುಗ್ಗಿ ತಂದೆಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸಂಬಂಧಿಕರಿಗೆ ಸೀಮೇಶ್ಕರ್ ಸುಳ್ಳು ಮಾಹಿತಿ ನೀಡಿದ್ದ. ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದು, ತನಿಖೆ ಆರಂಭಿಸಿದ ಪೊಲೀಸರುವಿಚಾರಣೆ ತೀವ್ರಗೊಳಿಸಿದಾಗ ಹಣದ ವಿಚಾರಕ್ಕೆ ತಂದೆ-ಮಗನ ನಡುವೆ ನಡೆದ ಜಗಳವೇ ಕೊಲೆಗೆ ಕಾರಣ ಎಂಬುದು ಗೊತ್ತಾಗಿದೆ.


