ರಿಯಲ್ ಎಸ್ಟೇಟ್ ಮಾಫಿಯಾದ ತಾಳಕ್ಕೆ ಕುಣಿಯುವ ಡಮ್ಮಿ ಸಿಎಂ @DKShivakumar ಅವರಿಗೆ ಮತ್ತೊಮ್ಮೆ ಜನಾಕ್ರೋಶದ ಬಿಸಿ ತಟ್ಟಿದೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ ಟೀಕಿಸಿದ್ದಾರೆ.
ಕಳಂಕಿತ ಮಾಜಿ ಸಚಿವ ಬಿ. ನಾಗೇಂದ್ರ ರಾಜೀನಾಮೆ ವಿಚಾರದಲ್ಲಿ ಸಾರ್ವಜನಿಕರ ಆಕ್ರೋಶ ಹಾಗೂ ಪ್ರತಿಪಕ್ಷಗಳ ಹೋರಾಟದ ಮುಂದೆ ಮಂಡಿಯೂರಿ ಕಡೆಗೂ ರಾಜನಾಮೆ ಪಡೆದುಕೊಂಡ ಈ ಲಜ್ಜೆಗೇಡಿ @INCKarnataka ಸರ್ಕಾರ, ಈಗ ಉದ್ಯಾನವನಗಳ ಮಾರಾಟದ ವಿಚಾರದಲ್ಲೂ ಜನಾಕ್ರೋಶಕ್ಕೆ ಬೆದರಿ ಮರುಪರಿಶೀಲನೆಯ ನಾಟಕವಾಡುತ್ತಿದೆ ಎಂದು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಅವರು ಪೋಸ್ಟ್ ಮಾಡಿದ್ದಾರೆ.
ಬೆಂಗಳೂರಿನ ಲಾಲ್‌ಬಾಗ್ ಸೇರಿದಂತೆ ರಾಜ್ಯದ ಸಾರ್ವಜನಿಕ ಉದ್ಯಾನವನಗಳ ಶೇ.5 ಭೂಮಿಯನ್ನು ರಿಯಲ್ ಎಸ್ಟೇಟ್ ಮಾಫಿಯಾ ಹಾಗೂ ಪ್ರಭಾವಿ ಬಂಡವಾಳಶಾಹಿಗಳ ಮಡಿಲಿಗೆ ಹಾಕಲು ‘ಕರ್ನಾಟಕ ಸರ್ಕಾರದ ಉದ್ಯಾನವನಗಳ ಸಂರಕ್ಷಣೆ ತಿದ್ದುಪಡಿ ವಿಧೇಯಕ-2026’ ಅನ್ನು ವಿಧಾನಸಭೆಯಲ್ಲಿ ಯಾವುದೇ ಚರ್ಚೆಯಿಲ್ಲದೆ ತರಾತುರಿಯಲ್ಲಿ ಅಂಗೀಕರಿಸಿಕೊಂಡಿದ್ದು ಏಕೆ? ಉದ್ಯಾನವನಗಳ ಜಾಗ ಮಾರಾಟ ಮಾಡಲು, ಅಡಮಾನ ಇಡಲು, ಕಬಳಿಸಲು ಹಾದಿ ಸುಗಮ ಮಾಡಿ ಕೊಡುವುದೇ ನಿಮ್ಮ ‘ಬ್ರಾಂಡ್ ಬೆಂಗಳೂರು’ ಹಿಂದಿರುವ ಉದ್ದೇಶನಾ ಎಂದು ಪ್ರಶ್ನಿಸಿದ್ದಾರೆ.
ಲಾಲ್‌ಬಾಗ್‌ನ ಭೂಮಿಯನ್ನು ಟನಲ್ ರಸ್ತೆ ಹೆಸರಿನಲ್ಲಿ ಬಂಡವಾಳಶಾಹಿಗಳಿಗೆ ಧಾರೆ ಎರೆಯಲು ಹೊರಟ ನಿಮ್ಮ ಕಮಿಷನ್ ದಂದೆ ಈಗ ಸಾರ್ವಜನಿಕರ ಪ್ರತಿಭಟನೆ, ಪರಿಸರ ಪ್ರೇಮಿಗಳ ಆಕ್ರೋಶ ಮತ್ತು ಬಿಜೆಪಿ ನಡೆಸಿದ ಕಾನೂನು ಸಮರಕ್ಕೆ ಹೆದರಿ ಯು-ಟರ್ನ್ ಹೊಡೆಯುವ ಹಂತಕ್ಕೆ ತಲುಪಿದೆ ಮುಖ್ಯಮಂತ್ರಿ @DKShivakumar ಅವರೇ, ‘ಉದ್ಯಾನನಗರಿ’ ಬೆಂಗಳೂರನ್ನು ‘ರಿಯಲ್ ಎಸ್ಟೇಟ್ ನಗರಿ’ಯನ್ನಾಗಿ ಮಾಡಲು ಹೋದರೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂಬ ಸತ್ಯ ಈಗ ಗೊತ್ತಾಯಿತೇ ಎಂದು ವ್ಯಂಗ್ಯವಾಡಿದ್ದಾರೆ.
ಉದ್ಯಾನವನ ಕಬಳಿಸುವ ಈ ಮಾರಕ ತಿದ್ದುಪಡಿ ವಿಧೇಯಕವನ್ನು ಸಂಪೂರ್ಣವಾಗಿ ಹಿಂಪಡೆಯಬೇಕು, ಸಾರ್ವಜನಿಕ ಆಸ್ತಿ ಮತ್ತು ಹಸಿರು ಸಂಪತ್ತನ್ನು ಕಮಿಷನ್‌ಗಾಗಿ ಮಾರಿಕೊಳ್ಳುವ ಕಸರತ್ತನ್ನು ತಕ್ಷಣವೇ ನಿಲ್ಲಿಸಬೇಕು. ಅಲ್ಲಿವರೆಗೂ ಈ ಜನವಿರೋಧಿ, ಹಸಿರುವಿರೋಧಿ ಮತ್ತು ಲೂಟಿಕೋರ ಕಾಂಗ್ರೆಸ್ ಸರ್ಕಾರದ ವಿರುದ್ಧ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಅಶೋಕ ಎಚ್ಚರಿಕೆ ನೀಡಿದ್ದಾರೆ.


