ಯತ್ನಾಳ್ಗೆ ಮತ್ತು ಡಿ.ಕೆ.ಶಿವಕುಮಾರ್ ಅವರಿಗೆ ಏನು ಸಂಬಂಧ, ಡಿಕೆಶಿ ಬಗ್ಗೆ ಮಾತನಾಡಲು ಯತ್ನಾಳ್ಗೆ ಯಾರು ಹೇಳಿದ್ದು, ಯತ್ನಾಳ್ಗೆ ಉಗೀರಿ, ಅವರದ್ದೇ ನೋಡಿಕೊಲ್ಳಲು ಅವರಿಗೆ ನೂರೆಂಟು ಇದೆ. ಮೊದಲು ಅದನ್ನು ನೋಡಿಕೊಳ್ಳಲಿ ಎಂದು ಬಿಜೆಪಿ ಬಂಡಾಯ ಶಾಸಕ ಎಸ್.ಟಿ.ಸೋಮಶೇಖರ್ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸೋಮಶೇಖರ್, ಡಿ.ಕೆ ಶಿವಕುಮಾರ್ ಅಧಿಕಾರಕ್ಕಾಗಿ ಟೆಂಪಲ್ ರನ್ ಮಾಡುತ್ತಿದ್ದಾರೆ. ಅವರು ಏನೇ ಮಾಡಿದರೂ ಮುಖ್ಯಮಂತ್ರಿ ಆಗುವುದಿಲ್ಲ ಎಂಬ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿದರು. ಡಿ.ಕೆ.ಶಿವಕುಮಾರ್ ಅವರ ಬಗ್ಗೆ ಹೊಗಳಿಕೆ, ತೆಗಳಿಕೆ ನಿಮ್ಮ ಕೆಲಸವಲ್ಲ. ವಕ್ಫ್, ವಿಜಯೇಂದ್ರ ಬಗ್ಗೆ ಏನೋ ಮಾಡಲು ಹೊರಟಿದ್ದೀರಲ್ಲ ಅದನ್ನು ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿವಕುಮಾರ್ ದೇವಾಲಯಕ್ಕಾದರೂ ಹೋಗುತ್ತಾರೆ, ಜ್ಯೋತಿಷಿ ಬಳಿಯಾದರೂ ಹೋಗುತ್ತಾರೆ. ಅವರು ದೇಶದ ಎಲ್ಲಾ ದೇವಾಲಯಗಳಿಗೂ ಕುಟುಂಬ ಸಮೇತ ಹೋಗಿದ್ದಾರೆ. ಅವರ ಬಗ್ಗೆ ಪದೇ ಪದೆ ಮಾತನಾಡಲು ನೀವು ಯಾರು ಎಂದು ಪ್ರಶ್ನಿಸಿದ್ದಾರೆ.
ಶಾಸಕರಾದ ಎಸ್.ಟಿ.ಸೋಮಶೇಖರ್ ಮತ್ತು ಶಿವರಾಮ್ ಹೆಬ್ಬಾರ್ ಅವರನ್ನು ಪಕ್ಷದಿಂದ ಅಮಾನತು ಮತ್ತು ಅನರ್ಹಗೊಳಿಸುವ ಸಂಬಂಧ ಪಕ್ಷದ ವರಿಷ್ಠರಿಗೆ ಮನವಿ ಮಾಡಲು ಡಿ.7 ರಂದು ಸಭೆ ಸೇರಿದ್ದ ಬಿಜೆಪಿ ಕೋರ್ ಕಮಿಟಿ ಸಭೆ ನಿರ್ಧರಿಸಿತ್ತು.