Menu

ಸಚಿವ ಸುಧಾಕರ್‌ ಅಗಲಿಕೆ ನೋವು ತಂದಿದೆ, ರಾಜಕೀಯ ಕ್ಷೇತ್ರಕ್ಕೆ ದೊಡ್ಡ ನಷ್ಟ: ಸಿಎಂ-ಡಿಸಿಎಂ ಸಂತಾಪ

ಯೋಜನೆ ಮತ್ತು ಸಾಂಖ್ಯಿಕ ಸಚಿವ ಸುಧಾಕರ್ ಅವರ ಅಗಲಿಕೆಯಿಂದ ರಾಜಕೀಯ ಕ್ಷೇತ್ರಕ್ಕೆ ದೊಡ್ಡ ನಷ್ಟವುಂಟಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ  ಹೇಳಿದ್ದಾರೆ. ಸದಾಶಿವ ನಗರದಲ್ಲಿರುವ ಸಚಿವ ಸುಧಾಕರ್ ಅವರ ನಿವಾಸದಲ್ಲಿ ಅಂತಿಮ ದರ್ಶನ ಪಡೆದು ಮಾಧ್ಯಮದವರೊಂದಿಗೆ ಮಾತನಾಡಿದರು.

ಸುಧಾಕರ್ ಮೂಲತಃ ಚಳ್ಳಕರೆಯವರು. 2008ರಿಂದ ಹಿರಿಯೂರು ಶಾಸಕರಾಗಿದ್ದರು. ಎರಡನೇ ಬಾರಿಗೆ ಮಂತ್ರಿಯಾಗಿದ್ದ ಅವರು ಅತ್ಯಂತ ಜನಪ್ರಿಯ ವ್ಯಕ್ತಿ. ಸಮಾಜ ಕಲ್ಯಾಣ ಸಚಿವರಾಗಿಯೂ ಕೆಲಸ ಮಾಡಿದ್ದಾರೆ. ಸಹಕಾರ ಕ್ಷೇತ್ರದಲ್ಲಿಯೂ ಸಾಕಷ್ಟು ಕೊಡುಗೆ ನೀಡಿರುವ ಅವರು ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆಗಿದ್ದರು. ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದರು. ಸುಧಾಕರ್ ಅವರ ಚಿಕ್ಕಪ್ಪ ಜಯಣ್ಣ ಕೂಡಾ ಶಾಸಕರಾಗಿದ್ದವರು. ರಾಜಕೀಯ ಕ್ಷೇತ್ರದಲ್ಲಿ ಅಪಾರ ಜನಪ್ರಿಯತೆ ಗಳಿಸಿಕೊಂಡಿದ್ದರು. ಚಳ್ಳಕೆರೆ ಎಸ್.ಟಿ ಮೀಸಲು ಕ್ಷೇತ್ರವಾಗಿದ್ದರಿಂದ ಹಿರಿಯೂರಿನಿಂದ ಸ್ಪರ್ಧಿಸಿ ಗೆದ್ದಿದ್ದರು ಎಂದು ವಿವರಿಸಿ, ರೈತರ ಹಾಗೂ ಬಡವರ ಪರವಾಗಿ ಸಾಕಷ್ಟು ಕೆಲಸ ಮಾಡಿದ್ದು, ಜನಪ್ರಿಯ ವ್ಯಕ್ತಿಯಾಗಿದ್ದರು ಎಂದರು.

ಸುಧಾಕರ್ ಅವರು ಪತ್ನಿ, ಪುತ್ರಿ ಹಾಗೂ ಪುತ್ರ ಸೇರಿದಂತೆ ಅಪಾರ ಬಂಧುಬಳಗ, ಅಭಿಮಾನಿಗಳನ್ನು ಬಿಟ್ಟು ಅಗಲಿದ್ದಾರೆ. ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಹಾಗೂ ಕುಟುಂಬದವರಿಗೆ ಅವರ ಸಾವಿನ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುವುದಾಗಿ ಹೇಳಿದರು.  ಜನಸೇವೆಯಲ್ಲಿ‌ ಅಪಾರ ಕಾಳಜಿ ಮತ್ತು ಬದ್ಧತೆಯಿದ್ದ ವ್ಯಕ್ತಿ ಸುಧಾಕರ್. ಇಂಥವರು ಇನ್ನಷ್ಟು ಕಾಲ ಜನರ ನಡುವೆ ಇರಬೇಕಿತ್ತು. ವೈದ್ಯರ ನಿರಂತರ ಪ್ರಯತ್ನ, ನಮ್ಮೆಲ್ಲರ ಹಾರೈಕೆಯ ಹೊರತಾಗಿಯೂ  ಇಂದು ಸುಧಾಕರ್ ಅವರು ನಮ್ಮನ್ನಗಲಿದ್ದಾರೆ. ಇದು ಅತ್ಯಂತ ನೋವಿನ ಗಳಿಗೆ. ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬವರ್ಗ ಮತ್ತು ಅಭಿಮಾನಿಗಳಿಗೆ ನೋವು ಭರಿಸುವ ಶಕ್ತಿ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದರು.

ಚಿತ್ರದುರ್ಗ ಜಿಲ್ಲೆಯಲ್ಲಿ ಮೂರು ದಿನಗಳ ಕಾಲ ಶೋಕಾಚರಣೆ ಮಾಡುತ್ತಿದ್ದು, ಚಿತ್ರದುರ್ಗದಲ್ಲಿ ಸೋಮವಾರ ರಜೆ ಘೋಷಣೆ ಮಾಡಲಾಗಿದೆ. ನಾಳೆ ಚಳ್ಳಕೆರೆಯಲ್ಲಿ ಸಂಜೆ 4 ಗಂಟೆಗೆ ನಡೆಯಲಿರುವ ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗುವುದಾಗಿ ತಿಳಿಸಿದ ಮುಖ್ಯಮಂತ್ರಿಗಳು ಅವರ ಮತಕ್ಷೇತ್ರ ಹಿರಿಯೂರಿಗೆ ಅವರ ಪಾರ್ಥಿವ ಶರೀರವನ್ನು ದರ್ಶನಕ್ಕಾಗಿ ಇರಿಸಿದ್ದು, ನಾಳೆ ಚಳ್ಳಕೆರೆಗೆ ಕರೆದೊಯ್ಯಲಾಗುವುದು ಎಂದು  ತಿಳಿಸಿದರು.

ಭದ್ರಾ ಮೇಲ್ದಂಡೆ ಯೋಜನೆಗೆ ಸುಧಾಕರ್‌ ಹೆಸರು ಎಂದ ಡಿಕೆ ಶಿವಕುಮಾರ್‌

ಸಚಿವರಾದ ಡಿ. ಸುಧಾಕರ್ ಅವರು ಭದ್ರ ಮೇಲ್ದಂಡೆ ಯೋಜನೆ ಜಾರಿಗೆ ಹೋರಾಟ ಮಾಡಿದ್ದರು. ಅವರ ಸ್ಮರಣಾರ್ಥ ನೀರಾವರಿ ಯೋಜನೆಗೆ ಸುಧಾಕರ್ ಅವರ ಹೆಸರಿಡಲು ಆಲೋಚನೆ ಮಾಡಲಾಗುವುದು” ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.  ಸದಾಶಿವನಗರ ನಿವಾಸದಲ್ಲಿ ಭಾನುವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

” ನನ್ನ ಆಪ್ತಮಿತ್ರ ಹಾಗೂ ನಮ್ಮ ಸರ್ಕಾರದ ಸಚಿವರಾದ ಡಿ. ಸುಧಾಕರ್ ನಮ್ಮನ್ನು ಅಗಲಿದ್ದಾರೆ. ಕಳೆದ ಒಂದು ತಿಂಗಳ ಹಿಂದೆ ಮಂಡಿ ನೋವಿನ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಸೇರಿದ್ದರು. ಶಸ್ತ್ರಚಿಕಿತ್ಸೆ ನಂತರ ಶ್ವಾಸಕೋಶ ಸೋಂಕಿಗೆ ಒಳಗಾಗಿದ್ದರು, ಪ್ರಜ್ಞೆ ಹೋಗಿತ್ತು. ಈ ಮಧ್ಯೆ ಕೆಲ ದಿನಗಳ ಕಾಲ ಅವರಿಗೆ ಪ್ರಜ್ಞೆ ಮರಳಿತ್ತು. ಹೀಗಾಗಿ ಅವರು ಗುಣಮುಖರಾಗಿ ಮರಳುತ್ತಾರೆ ಎಂಬ ವಿಶ್ವಾಸವಿತ್ತು. ವಿದೇಶದಿಂದಲೂ ವೈದ್ಯರನ್ನು ಕರೆಸಿ ಚಿಕಿತ್ಸೆ ನೀಡಲಾಗಿತ್ತು. ಪ್ರತಿ ನಿತ್ಯ ನಾನು ಅವರ ಕುಟುಂಬ ಸದಸ್ಯರ ಜತೆ ಸಂಪರ್ಕದಲ್ಲಿದ್ದು, ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆಯುತ್ತಿದ್ದೆ” ಎಂದರು.

“ಪಾರ್ಥಿವ ಶರೀರವನ್ನು ಹಿರಿಯೂರಿಗೆ ತೆಗೆದುಕೊಂಡು ಹೋಗಲಾಗುತ್ತಿದ್ದು, ಸಂಜೆ ನಂತರ ಚಳ್ಳಕೆರೆಗೆ ತೆಗೆದುಕೊಂಡು ಹೋಗಲಾಗುವುದು. ನಾನು ಜಿಲ್ಲಾಧಿಕಾರಿಗಳ ಜೊತೆ ಚರ್ಚೆ ಮಾಡಿದ್ದು ನಾಳೆ ಸಂಜೆ 3 ಗಂಟೆ ನಂತರ ಜೈನ ಧರ್ಮದ ವಿಧಿ ವಿಧಾನಗಳ ಪ್ರಕಾರ ಅಂತಿಮ ಕಾರ್ಯ ನಡೆಸಲಾಗುವುದು. ಸರ್ಕಾರದ ಗೌರವದೊಂದಿಗೆ ಅವರಿಗೆ ಅಂತಿಮ ನಮನ ಸಲ್ಲಿಸಲಾಗುವುದು” ಎಂದು ತಿಳಿದರು.

“ಭಾರತ ಜೋಡೋ ಯಾತ್ರೆ ವೇಳೆ ಐದು ದಿನದ ಜವಾಬ್ದಾರಿಯನ್ನು ಅವರೇ ವಹಿಸಿದ್ದರು. ಅವರ ಅಗಲಿಕೆ ವಿಚಾರವನ್ನು ರಾಹುಲ್ ಗಾಂಧಿ ಅವರ ಗಮನಕ್ಕೆ ತರಲಾಗಿದೆ. ರಾಹುಲ್ ಗಾಂಧಿ ಅವರು ಸುಧಾಕರ್ ಅವರ ಕುಟುಂಬದ ಸದಸ್ಯರ ಜೊತೆಗೆ ಮಾತನಾಡಲಿದ್ದಾರೆ” ಎಂದರು.

“ಸುಧಾಕರ್ ಅವರ ಪಕ್ಷ ನಿಷ್ಠೆ, ತ್ಯಾಗ ಸ್ಮರಿಸುತ್ತೇವೆ. ಶಾಂತಿ ಕಾಪಾಡಬೇಕು ಎಂದು ನಮ್ಮ ಕಾರ್ಯಕರ್ತರು ಹಾಗೂ ಮುಖಂಡರಿಗೆ ಮನವಿ ಮಾಡುತ್ತೇವೆ. ಸಹಕಾರ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದರು. ಹಾಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದರು. ಅವರ ಅಗಲಿಕೆ ನಮ್ಮ ಪಕ್ಷಕ್ಕೆ ದೊಡ್ಡ ನಷ್ಟವಾಗಿದೆ. ಈ ಅಗಲಿಕೆ ನೋವು ಭರಿಸುವ ಶಕ್ತಿಯನ್ನು ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವೆ” ಎಂದು ಹೇಳಿದರು.

“ಭದ್ರಾ ಯೋಜನೆ ಪೂರ್ಣಗೊಳಿಸಿ ಅದಕ್ಕೆ ಚಾಲನೆ ನೀಡಬೇಕು ಎಂದು ಬಹಳ ಆಸೆ ಇಟ್ಟುಕೊಂಡಿದ್ದರು. ಈ ಯೋಜನೆಗಾಗಿ ಸಾಕಷ್ಟು ಹೋರಾಟ ಮಾಡಿದ್ದರು. ಅವರ ಅಧ್ಯಕ್ಷತೆಯಲ್ಲಿ ಈ ಯೋಜನೆ ಉದ್ಘಾಟನೆ ಮಾಡಬೇಕು ಎಂದು ಚಿಂತಿಸಿದ್ದೆವು. ಕ್ಷೇತ್ರ ಹಾಗೂ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಆಸಕ್ತಿ ಹೊಂದಿದ್ದರು. ಎಲ್ಲಾ ವರ್ಗದ ಜನರಿಗೆ ನ್ಯಾಯ ಒದಗಿಸಿಕೊಡುತ್ತಿದ್ದರು. ಪಕ್ಷದ ಸದಸ್ಯತ್ವ ಅಭಿಯಾನದಲ್ಲಿ ಅತಿ ಹೆಚ್ಚು ನೋಂದಣಿ ಮಾಡಿಸಿದ ಕೀರ್ತಿ ಸುಧಾಕರ್ ಅವರಿಗೆ ಸಲ್ಲುತ್ತದೆ. ರಾಹುಲ್ ಗಾಂಧಿ ಅವರ ಭಾರತ ಜೋಡೋ ಸಂದರ್ಭದಲ್ಲಿ ಮಳೆ ಬಂದು ಅವ್ಯವಸ್ಥೆಯಾದಾಗ ಕಾರ್ಯಕ್ರಮ ಯಶಸ್ಸಿಗೆ ಅವರು ಹಾಗೂ ಅವರ ಕಾರ್ಯಕರ್ತರು ಪಟ್ಟ ಕಷ್ಟ ನೆನೆಯುತ್ತೇವೆ” ಎಂದು ಹೇಳಿದರು.

Related Posts

Leave a Reply

Your email address will not be published. Required fields are marked *