Menu

ವೈದ್ಯರ ಮೇಲಿನ ಸಿಟ್ಟಿಗೆ ಎಂಎಲ್‌ಸಿ ಹೆಸರಲ್ಲಿ ವಿಷ ಸ್ವೀಟ್‌ ಬಾಕ್ಸ್‌ ಕಳಿಸಿದ್ದ ಮಾನಸಿಕ ರೋಗಿ

ಶಿವಮೊಗ್ಗ ನಗರದ ಮೂವರು ಗಣ್ಯ ವ್ಯಕ್ತಿಗಳಿಗೆ ವಿಧಾನಪರಿಷತ್​ ಸದಸ್ಯ ಡಾ. ಧನಂಜಯ ಸರ್ಜಿ ಹೆಸರಿನಲ್ಲಿ ವಿಷಪೂರಿತ ಸ್ವೀಟ್ ಬಾಕ್ಸ್​ಗಳನ್ನು ಕೊರಿಯರ್‌ ಮಾಡಿದ್ದ ಆರೋಪಿಯನ್ನು ಕೋಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಾನಸಿಕ ರೋಗಿ ಸೌಹಾರ್ದ ಪಟೇಲ್ ಬಂಧಿತ ಆರೋಪಿ. ಭದ್ರಾವತಿ ನಿವಾಸಿಯಾಗಿರುವ ಆರೋಪಿ ಸರ್ಜಿ ಹೆಸರಿನಲ್ಲಿ ಶಿವಮೊಗ್ಗ ನಗರ ನಿವಾಸಿಗಳಾದ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ನಾಗರಾಜ್, ವೈದ್ಯರಾದ ಅರವಿಂದ್ ಮತ್ತು ಕೆ ಎಸ್ ಪವಿತ್ರಾ ಅವರಿಗೆ ವಿಷಪೂರಿತ ಸ್ವೀಟ್​ ಬಾಕ್ಸ್​ ಕಳುಹಿಸಿದ್ದನು.

ಸೌಹಾರ್ದ ಪಟೇಲ್ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಕಾನೂನು ಮಹಾವಿದ್ಯಾಲಯದಲ್ಲಿ ಪದವಿ ಪಡೆದಿದ್ದಾನೆ. ಸೌಹಾರ್ದ ಪಟೇಲ್ ಎಲ್​ಎಲ್​ಬಿ ಓದುವಾಗ ಯುವತಿಯನ್ನು ಪ್ರೀತಿಸುತ್ತಿದ್ದನು. ಈ ವಿಚಾರ ತಿಳಿದ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ನಾಗರಾಜ್ ಯುವತಿಯನ್ನು ಸೌಹಾರ್ದ ಪಟೇಲ್​ನಿಂದ ದೂರ ಮಾಡಿದ್ದರು. ಇದರಿಂದ ಸೌಹಾರ್ದ​​ ಪಟೇಲ್​ ಡಿಪ್ರೆಶನ್​ಗೆ ಹೋಗಿದ್ದನು. ಮಾನಸಿಕ ರೋಗ ತಜ್ಞರಾದ ಅರವಿಂದ್ ಮತ್ತು ಕೆಎಸ್ ಪವಿತ್ರಾ ಬಳಿ ಚಿಕಿತ್ಸೆ ಪಡೆಯುತ್ತಿದ್ದನು. ಮಾತ್ರೆಗಳನ್ನು ಕೊಟ್ಟು ತನ್ನನ್ನು ರೋಗಿಯನ್ನಾಗಿಸಿದ್ದಾರೆಂದು ವೈದ್ಯರ ಮೇಲೆ ಸೌಹಾರ್ದ ಪಟೇಲ್ ಸಿಟ್ಟಾಗಿದ್ದನು. ಇದೇ ಸಿಟ್ಟಿನಲ್ಲಿ ಮಾತ್ರೆಗಳನ್ನು ಸ್ವೀಟ್​ನಲ್ಲಿ ಸೇರಿಸಿ ಎಂಎಲ್​ಸಿ ಧನಂಜಯ ಸರ್ಜಿ ಹೆಸರಿನಲ್ಲಿ ಕೊರಿಯರ್‌ ಮೂಲಕ​ ಕಳುಹಿಸಿದ್ದನು.

ವಿಚಾರ ತಿಳಿಯುತ್ತಿದ್ದಂತೆ ಎಂಎಲ್​ಸಿ ಧನಂಜಯ ಸರ್ಜಿ ಅವರು ಸ್ವೀಟ್​​ ಅನ್ನು ಲ್ಯಾಬ್​ಗೆ ರವಾನಿಸಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಯವರಿಗೆ ದೂರು ನೀಡಿದ್ದರು.

Related Posts

Leave a Reply

Your email address will not be published. Required fields are marked *