Menu

ಪ್ರಧಾನಿಗೆ ಟೆರರಿಸ್ಟ್‌ ಎಂದ ಮಲ್ಲಿಕಾರ್ಜುನ ಖರ್ಗೆ  ಕ್ಷಮೆ ಯಾಚಿಸಬೇಕು: ಆರ್‌ ಅಶೋಕ ಆಗ್ರಹ

ದೇಶದ ಪ್ರಧಾನಿಯನ್ನು ಟೆರರಿಸ್ಟ್‌ ಎಂದು ಕರೆದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡಲೇ ಕ್ಷಮೆ ಯಾಚಿಸಬೇಕು. ಇವರು ಕಾಂಗ್ರೆಸ್‌ನ ಅಧ್ಯಕ್ಷ ಸ್ಥಾನದಲ್ಲಿರಲು ಸೂಕ್ತರಲ್ಲ ಎಂದು ಪ್ರತಿಪಕ್ಷ ನಾಯಕ ಆರ್‌ಅಶೋಕ ಹೇಳಿದರು.

ಮಾಧ್ಯಮದವರೊಂದಿಗೆ  ಮಾತನಾಡಿದ ಅವರು, ನರೇಂದ್ರ ಮೋದಿ ಅತಿ ಹೆಚ್ಚು ದಿನಗಳ ಕಾಲ ಪ್ರಧಾನಿಯಾಗಿ ಕೆಲಸ ಮಾಡುತ್ತಿದ್ದಾರೆ. ಅವರ ದೇಶಪ್ರೇಮದ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಪ್ರಶ್ನೆ ಎತ್ತಿ ಟೆರರಿಸ್ಟ್‌ ಎಂಬ ಪದಬಳಕೆ ಮಾಡಿದ್ದಾರೆ. ಹಿಂದೆ ಅವರನ್ನು ಚಾಯ್‌ವಾಲಾ ಎಂದು ಟೀಕೆ ಮಾಡಿದ್ದಾಗ ಅದನ್ನೇ ಅಭಿಯಾನ ಮಾಡಲಾಯಿತು. ಇವರ ಟೀಕೆಗಳೇ ಬಿಜೆಪಿಗೆ ವರವಾಗಿದೆ. ಜೀವನದಲ್ಲಿ ಇನ್ನೆಂದೂ ಅಧಿಕಾರ ಸಿಗಲ್ಲ ಎಂಬ ಆತಂಕದಿಂದ ಕಾಂಗ್ರೆಸ್‌ ನಾಯಕರು ಈ ರೀತಿ ಮಾತಾಡುತ್ತಿದ್ದಾರೆ. ಎದ್ದು ಓಡಾಡಲು ಸಾಧ್ಯವಾಗದ ನಿವೃತ್ತ ಸ್ಥಿತಿಯಲ್ಲಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದರು.

ಯಾರು ದೇಶದ್ರೋಹಿ ಎಂಬುದು ಇಡೀ ದೇಶಕ್ಕೆ ಗೊತ್ತಿದೆ. ರಾಜ್ಯದಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟವಾದಾಗ ಅವರನ್ನು ಬ್ರದರ್‌ ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದರು. ಖರ್ಗೆಯವರ ಬಲಗೈ ಮುಖಂಡನ ಬೆಂಬಲಿಗರು ವಿಧಾನಸೌಧದಲ್ಲಿ ಪಾಕಿಸ್ತಾನಕ್ಕೆ ಜೈಕಾರ ಕೂಗಿದ್ದರು. ಅವರ ಬಗ್ಗೆಯಾಗಲೀ, ಕುಕ್ಕರ್‌ ಬಾಂಬ್‌ ಬಗ್ಗೆಯಾಗಲೀ, ಪಾಕಿಸ್ತಾನದ ಬಗ್ಗೆಯಾಗಲೀ ಖರ್ಗೆ ಪ್ರತಿಕ್ರಿಯೆ ನೀಡಿಲ್ಲ. ಸರ್ಜಿಕಲ್‌ ಸ್ಟ್ರೈಕ್‌ ಆದಾಗ ಇವರೆಲ್ಲರೂ ಯೋಧರ ಬಗ್ಗೆ ಟೀಕೆ ಮಾಡಿದ್ದರು. ಕೂಡಲೇ ಖರ್ಗೆಯವರು ದೇಶದ ಜನರ ಕ್ಷಮೆ ಯಾಚಿಸಬೇಕು. ಈ ಹೇಳಿಕೆ ವಿರುದ್ಧ ಗುರುವಾರ ವಿಧಾನಸೌಧದ ಮುಂಭಾಗ ಬೆಂಗಳೂರಿನ ಶಾಸಕರೊಂದಿಗೆ ಪ್ರತಿಭಟನೆ ಮಾಡಲಿದ್ದೇವೆ ಎಂದು ಹೇಳಿದರು.

ಕೇರಳ ಹಾಗೂ ತಮಿಳುನಾಡಲ್ಲಿ ಬಿಜೆಪಿಗೆ ಉತ್ತಮ ಬೆಂಬಲ ಸಿಗುತ್ತಿದೆ. ಕಾಂಗ್ರೆಸ್‌ಗೆ ಸೋಲುವ ಲಕ್ಷಣ ಕಾಣಿಸಿದೆ. ಅಸ್ಸಾಂ ಹಾಗೂ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆಲ್ಲಲಿದೆ. ಚುನಾವಣಾ ಪೂರ್ವ ಸಮೀಕ್ಷಾ ವರದಿಗಳಿಂದಾಗಿ ಕಾಂಗ್ರೆಸ್‌ ನಾಯಕರು ಭ್ರಮನಿರಸನಗೊಂಡಿದ್ದಾರೆ. ಸೋಲಿನ ವಿಷಯಾಂತರ ಮಾಡಲು ಪ್ರಧಾನಿ ಮೋದಿಯನ್ನು ನಿಂದಿಸುತ್ತಿದ್ದಾರೆ ಎಂದರು.

ಜಾರಿ ನಿರ್ದೇಶನಾಲಯದಿಂದ ಶಾಸಕ ಎನ್‌.ಎ.ಹ್ಯಾರಿಸ್‌ ಕುಟುಂಬದ ಆಸ್ತಿಗಳ ಮೇಲೆ ದಾಳಿ ನಡೆದಿದೆ. ಬಿಟ್‌ಕಾಯಿನ್‌ ಹಗರಣದ ತನಿಖೆ ಆರಂಭವಾಗಿ ಮೂರು ವರ್ಷವಾದರೂ ಚಾರ್ಜ್‌ಶೀಟ್‌ ಸಲ್ಲಿಸಿಲ್ಲ. ಗೃಹಸಚಿವ ಡಾ.ಜಿ.ಪರಮೇಶ್ವರ್‌ ಈ ಬಗ್ಗೆ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್‌ ಎಲ್ಲ ಕಡೆ ಲೂಟಿ ಮಾಡುತ್ತಿದೆ. ಬೆಂಗಳೂರಿನಲ್ಲಿ ಇ-ಖಾತಾ ಹೆಸರಲ್ಲಿ ಲಂಚ ಪಡೆಯಲಾಗುತ್ತಿದೆ. ಫೋನ್ ಪೇನಲ್ಲಿ ಲಂಚ ಪಡೆಯುತ್ತಿರುವುದನ್ನು ಸಾಬೀತುಪಡಿಸಿದ ಮೇಲೂ ಅಧಿಕಾರಿಗಳ ವಿರುದ್ಧ ಕ್ರಮ ವಹಿಸಿಲ್ಲ. ಸಿಎಂ ಹಾಗೂ ಡಿಸಿಎಂ ನಡುವೆ ಕ್ಷಿಪಣಿಗಳ ಯುದ್ಧ ನಡೆಯುತ್ತಿದ್ದು, ಇದರಿಂದ ಜಿಬಿಎ ಚುನಾವಣೆ ನಡೆಯುತ್ತಿಲ್ಲ.  ಸರ್ಕಾರವನ್ನು ಅಧಿಕಾರಿಗಳು ನಡೆಸುತ್ತಿದ್ದಾರೆ. ಚುನಾವಣೆಯ ಮರುದಿನವೇ ಎಲ್ಲ ದರಗಳ ಏರಿಕೆಯಾಗಲಿದೆ. ಈಗಾಗಲೇ ವಿದ್ಯುತ್‌ ದರ ಏರಿಕೆಯಾಗಿದೆ. ಮುಂದೆ ಮದ್ಯದ ಮೇಲೂ ದೊಡ್ಡ ತೆರಿಗೆ ಹಾಕುತ್ತಿದ್ದಾರೆ. ಬಳಿಕ ಪೆಟ್ರೋಲ್‌-ಡೀಸೆಲ್‌, ಮನೆ ತೆರಿಗೆ ಹೆಚ್ಚಲಿದೆ. ಬೆಂಗಳೂರಿನಲ್ಲಿ ಎಲ್ಲ ಕಡೆ ಕಸದ ರಾಶಿ ಬಿದ್ದಿದೆ. ಐದು ಪಾಲಿಕೆಗಳ ಆಯುಕ್ತರ ಮನೆ ಮುಂದೆ ಕಸದ ರಾಶಿ ಇದೆ. ಗ್ಯಾರಂಟಿಗಳಿಗೆ ಹಣ ಹೊಂದಿಸಲು ಹೋಗಿ ಯಾವುದಕ್ಕೂ ಹಣ ಇಲ್ಲವಾಗಿದೆ. ಮಾಜಿ ಸಚಿವ ರಾಜಣ್ಣ ಮಾಟ ಮಂತ್ರದ ಬಗ್ಗೆ ಹೇಳಿರುವುದರಲ್ಲಿ ಅರ್ಥವಿದೆ. ಈಗ ಸಿಎಂ ಸಿದ್ದರಾಮಯ್ಯ ಮಾಟ ಮಂತ್ರ ತೆಗೆದುಹಾಕಲು ತಯಾರಿ ಮಾಡಬೇಕಿದೆ ಎಂದರು.

ಕ್ರಿಕೆಟ್‌ ಬೆಟ್ಟಿಂಗ್‌ನಿಂದ ಅನೇಕ ಕುಟುಂಬಗಳು ಸಂಕಷ್ಟಕ್ಕೊಳಗಾಗಿದ್ದು, ಅನೇಕ ಸಾವು ನೋವು ಉಂಟಾಗಿದೆ. ಯಾವುದೇ ಸಚಿವರು ಈ ವಿಚಾರದಲ್ಲಿ ಜನರಿಗೆ ಮಾದರಿಯಾಗಿರಬೇಕು. ಸಚಿವ ಡಾ.ಜಿ.ಪರಮೇಶ್ವರ್‌ ಅವರೇ ಬೆಟ್ಟಿಂಗ್‌ ಕಟ್ಟಲು ಮುಂದಾದರೆ ರಾಜ್ಯದ ಜನರು ಇನ್ನಷ್ಟು ತಪ್ಪು ಮಾಡುತ್ತಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಇದರ ಬದಲು ಕ್ರೀಡಾಪಟುಗಳಿಗೆ ಬಹುಮಾನ ನೀಡಿದ್ದರೆ ಸಾಕಿತ್ತು ಎಂದು ಹೇಳಿದರು.

ಪಹಲ್ಗಾಮ್‌ನಲ್ಲಾದ ಭಯೋತ್ಪಾದಕ ದಾಳಿಯನ್ನು ಮರೆಯಲು ಸಾಧ್ಯವಿಲ್ಲ. ಭಾರತೀಯ ಯೋಧರು ಆಪರೇಶನ್‌ ಸಿಂದೂರ ಮೂಲಕ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಿದ್ದಾರೆ. ಪ್ರಪಂಚದ ಭೂಪಟದಿಂದ ಪಾಕಿಸ್ತಾನವನ್ನು ತೆಗೆದುಹಾಕುವಂತೆ ಮಾಡಬೇಕಿದೆ. ಆಗ ಮಾತ್ರ ಶಾಂತಿ ನೆಲೆಸಲು ಸಾಧ್ಯ ಎಂದು ತಿಳಿಸಿದರು.

Related Posts

Leave a Reply

Your email address will not be published. Required fields are marked *