ಪ್ರೀತಿಸಿ ಮದುವೆಯಾಗಿದ್ದ ಯುವತಿ ಪೋಷಕರ ಒತ್ತಾಯಕ್ಕೆ ಮಣಿದು ತನ್ನನ್ನು ತೊರೆದುಹೋದಳೆಂದು ನೊಂದ ಯುವಕ ಹಾವೇರಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
24 ವರ್ಷದ ಮಂಜುನಾಥ್ ಅಗಡಿ ಆತ್ಮಹತ್ಯೆ ಮಾಡಿಕೊಂಡ ಯುವಕ, ಎರಡು ವರ್ಷಗಳಿಂದ ಹಾವೇರಿಯ ಯುವತಿಯನ್ನು ಪ್ರೀತಿಸುತ್ತಿದ್ದ ಮಂಜುನಾಥ, ಇತ್ತೀಚೆಗೆ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದ ಎನ್ನಲಾಗಿದೆ.
ಯುವತಿಯ ಪೋಷಕರಿಗೆ ಈ ಮದುವೆ ಇಷ್ಟವಿರಲಿಲ್ಲ. ಮಗಳು ಕಾಣೆಯಾಗಿದ್ದಾಳೆ ಎಂದು ಹಾವೇರಿ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಇಬ್ಬರನ್ನು ಪತ್ತೆ ಹಚ್ಚಿ ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದರು. ಆಗ ಯುವತಿ ಪೋಷಕರ ಒತ್ತಾಯಕ್ಕೆ ಮಣಿದು ಮಂಜುನಾಥನೊಂದಿಗೆ ಜೀವನ ನಡೆಸಲು ಸಾಧ್ಯವಿಲ್ಲ ಎಂದು ಹೇಳಿ ತೆರಳಿದ್ದಳು ಇದರಿಂದ ನೊಂದ ಮಂಜುನಾಥ ಖಿನ್ನತೆಗೆ ಒಳಗಾಗಿದ್ದ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆತ್ಮಹತ್ಯೆಗೂ ಮೊದಲು ಇನ್‌ಸ್ಟಾಗ್ರಾಂನಲ್ಲಿ ‘ಮುಂದಿನ ಜನ್ಮ ಅಂತ ಇದ್ದರೆ ನಾನು ನಿನ್ನವನಾಗಿ ಹುಟ್ಟುವೆ’ ಎಂದು ಸಂದೇಶ ಪೋಸ್ಟ್ ಮಾಡಿದ್ದ ಎನ್ನಲಾಗಿದೆ. ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


