Menu

ಅಂತಾರಾಷ್ಟ್ರೀಯ ಖ್ಯಾತಿಯ ಚಿತ್ರಕಲಾವಿದ ಕೆ.ಟಿ. ಶಿವಪ್ರಸಾದ್ ನಿಧನ

ಅಂತಾರಾಷ್ಟ್ರೀಯ ಖ್ಯಾತಿಯ ಹಿರಿಯ ಚಿತ್ರಕಲಾವಿದ ಕೆ.ಟಿ. ಶಿವಪ್ರಸಾದ್ (79) ನಿಧನರಾಗಿದ್ದಾರೆ. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಹಾಸನ ಜಿಲ್ಲೆಯ ಕಾರ್ಲೆ ಎಂಬ ಊರಿನವರಾದ ಶಿವಪ್ರಸಾದ್, ಉದ್ಯಮಿ ಎಲ್. ಟಿ. ಕಾರ್ಲೆ ಅವರ ಮಗ, ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಆಪ್ತ ಸ್ನೇಹಿತ. ಕಲಾಕೃತಿಗಳನ್ನು ಬದಲಾವಣೆಯ ದನಿಗಳಾಗಿ ಬಳಸಿದ ಕೆಲವೇ ಕಲಾವಿದರಲ್ಲಿ ಅವರು ಪ್ರಮುಖರು.

1947ರಲ್ಲಿ ಜನಿಸಿದ ಶಿವಪ್ರಸಾದ್, ಎಂಜಿನಿಯರಿಂಗ್ ವ್ಯಾಸಂಗ ಓದನ್ನು ಮೊಟಕುಗೊಳಿಸಿ ಮುಂಬೈನ ‘ಸರ್ ಜೆ.ಜೆ. ಸ್ಕೂಲ್ ಆಫ್ ಆರ್ಟ್’ಗೆ ಸೇರಿ1973ರಲ್ಲಿ ಚಿತ್ರಕಲೆಯಲ್ಲಿ ಡಿಪ್ಲೊಮಾ ಪಡೆದರರು. ಅವರು ವಾಸ್ತುಶಿಲ್ಪ ಸಲಹೆಗಾರ ಹಾಗೂ ಉತ್ತಮ ಛಾಯಾಗ್ರಾಹಕರೂ ಆಗಿದ್ದರು. ಮುಂಬೈನ ಜಹಾಂಗೀರ್ ಆರ್ಟ್ ಗ್ಯಾಲರಿ, ದೆಹಲಿ, ಚೆನ್ನೈ, ಬೆಂಗಳೂರು, ಹಾಂಗ್‌ಕಾಂಗ್‌ನ ಗ್ಯಾಲರಿಗಳಲ್ಲೂ ಅವರ ಕಳಾಕೃತಿಗಳು ಪ್ರದರ್ಶನಗೊಂಡಿವೆ.  ರೈತರ, ದಲಿತರ ಧ್ವನಿಯಾಗಿ, ಎಲ್ಲಾ ಹಿಂದುಳಿದವರ ಪರವಾದ ಚಳವಳಿಗಳಲ್ಲಿ ಶಿವಪ್ರಸಾದ್‌ ಭಾಗಿಯಾಗುತ್ತಿದ್ದರು. 2001ರಲ್ಲಿ ಕರ್ನಾಟಕ ಸರ್ಕಾರ ‘ರಾಜ್ಯೋತ್ಸವ ಪ್ರಶಸ್ತಿ’ ನೀಡಿ ಗೌರವಿಸಿತ್ತು.

ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಸಾರ್ವಜನಿಕರಿಗೆ ಬೆಳಗ್ಗೆ 9.30ರಿಂದ ಅಂತಿಮ ದರ್ಶನಕ್ಕೆ ಅವಕಾಶ ನೀಡುತ್ತಿದ್ದು, ಮಧ್ಯಾಹ್ನ ಎರಡು ಗಂಟೆಗೆ ಬಿಟ್ಟಗೌಡನಹಳ್ಳಿ ಶಾಂತಿಧಾಮದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬ ತಿಳಿಸಿದೆ.

Related Posts

Leave a Reply

Your email address will not be published. Required fields are marked *