Friday, September 11, 2026
Menu

ಜೈಲುವಾಸಿ ಪವಿತ್ರಾಗೌಡಗೆ ಮನೆಯೂಟ: ರದ್ದು ಕೋರಿ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಅರ್ಜಿ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ಪವಿತ್ರಾ ಗೌಡ, ನಾಗರಾಜ್‌ ಮತ್ತು ಲಕ್ಷ್ಮಣ್‌ಗೆ ವಾರಕ್ಕೊಮ್ಮೆ ಮನೆಯಿಂದ ಊಟ ತರಿಸಿಕೊಳ್ಳಲು ಅನುಮತಿ ನೀಡುವಂತೆ ನಗರದ ಸೆಷನ್ಸ್‌ ನ್ಯಾಯಾಲಯ ಹೊರಡಿಸಿರುವ ಆದೇಶವನ್ನು ರದ್ದುಗೊಳಿಸಲು ಕೋರಿ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ಪ್ರಕರಣದ ತನಿಖೆ ನಡೆಸಿರುವ ನಗರದ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸ್‌ ಇನ್ಸ್‌ಪೆಕ್ಟರ್‌ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಮೂವರು ಆರೋಪಿಗಳು ಸಲ್ಲಿಸಿದ ಮನವಿ ಆಧರಿಸಿ ನಗರದ 57ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ ಮೂವರು ಆರೋಪಿಗಳಿಗೆ ವಾರಕ್ಕೊಮ್ಮೆ ಮನೆಯಿಂದ ಊಟ ತರಿಸಿಕೊಳ್ಳಲು ಅನುಮತಿ ನೀಡುವಂತೆ ಜೈಲು ಅಧಿಕಾರಿಗಳಿಗೆ 2026ರ ಜ.12ರಂದು ನಿರ್ದೇಶಿಸಿತ್ತು.

ಆರೋಪಿಗಳ ಮೌಖಿಕ ಹೇಳಿಕೆ/ಮನವಿ ಆಧರಿಸಿ ಜೈಲು ಅಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆ ಸ್ವೀಕರಿಸದೆ ಮನೆಯಿಂದ ಊಟ ತರಿಸಿಕೊಳ್ಳಲು ಅಧೀನ ನ್ಯಾಯಾಲಯವು ಆದೇಶ ಹೊರಡಿಸಿರುವುದು ಏಕಪಕ್ಷೀಯವಾಗಿದೆ. ಈ ಮೂವರು ಆರೋಪಿಗಳಿಗೆ ಮನೆಯಿಂದ ಊಟ ತಿರಿಸಿಕೊಳ್ಳಲು ಅನುಮತಿಸಿದರೆ, ಜೈಲಿನ ಇತರ ಕೈದಿಗಳು ಅದೇ ಮನವಿ ಮಾಡಲಿದ್ದಾರೆ. ಹಾಗಾಗಿ ಈ ಆದೇಶ ರದ್ದುಪಡಿಸಬೇಕು. ಅರ್ಜಿ ಇತ್ಯರ್ಥದವರೆಗೆ ಅಧೀನ ನ್ಯಾಯಾಲಯ ಆದೇಶಕ್ಕೆ ತಡೆಯಾಜ್ಞೆ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ಜೈಲು ಆಹಾರ ಗುಣಮಟ್ಟದ ಬಗ್ಗೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ನಾಲ್ಕು ಸ್ಟಾರ್‌ನ ಸರ್ಟಿಫಿಕೇಟ್‌ ನೀಡಿದೆ. ವೈದ್ಯಾಧಿಕಾರಿಗಳ ಶಿಫಾರಸು ಇಲ್ಲದೆ ಯಾವುದೇ ಕೈದಿಗೂ ಮನೆಯಿಂದ ಊಟ ತರಿಸಿಕೊಳ್ಳಲು ರಿಯಾಯ್ತಿ ನೀಡಲು ಅವಕಾಶವಿಲ್ಲ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ. ಗುಣಮಟ್ಟದ ಆಹಾರ ಪೂರೈಸುತ್ತಿಲ್ಲ ಎಂದು ಯಾವೊಬ್ಬ ಆರೋಪಿಯೂ ಜೈಲು ಅಧಿಕಾರಿಗಳಿಗೆ ದೂರು ನೀಡಿಲ್ಲ. ಗುಣಮಟ್ಟದ ಆಹಾರ ನೀಡುತ್ತಿಲ್ಲ ಎಂದಾದರೆ ಆರೋಪಿಗಳು ದೂರು ನೀಡಬಹುದು.

ಜೈಲಿನಲ್ಲಿರುವ ಪ್ರಕರಣದ ಆರೋಪಿಗಳಿಗೆ ವಿಶೇಷ ಸೌಲಭ್ಯ ಕಲ್ಪಿಸಬಾರದು ಎಂದು ಸುಪ್ರೀಂ ಕೋರ್ಟ್‌ ಆದೇಶಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಈ ಆರೋಪಿಗಳಿಗೆ ಮನೆಯಿಂದ ಊಟ ತರಿಸಿಕೊಳ್ಳಲು ಅನುಮತಿಸುವುದು ಸುಪ್ರೀಂ ಕೋರ್ಟ್‌ ಆದೇಶಕ್ಕೆ ವಿರುದ್ಧವಾಗಿದೆ. ಆದ್ದರಿಂದ ಅಧೀನ ನ್ಯಾಯಾಲಯ ಆದೇಶ ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

Related Posts

Leave a Reply

Your email address will not be published. Required fields are marked *