ಶಿವಮೊಗ್ಗ ತಾಲೂಕಿನ ಲಕ್ಕಿನಕೊಪ್ಪದಲ್ಲಿ ಜೋಕಾಲಿ ಆಡುತ್ತಿದ್ದಾಗ ಕುಣಿಗೆ ಕುತ್ತಿಗೆಗೆ ಬಿಗಿದು ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ. ಮೂರು ದಿನಗಳ ಹಿಂದೆ ಈ ದುರಂತ ಸಂಭವಿಸಿದು, ತಡವಾಗಿ ಬಹಿರಂಗಗೊಂಡಿದೆ.
ಒಂಬತ್ತು ವರ್ಷದ ಪ್ರಣಮ್ಯ ಮೃತಪಟ್ಟ ಬಾಲಕಿ. ಬೇಸಿಗೆ ರಜೆಯ ಕಾರಣ ವಿದ್ಯಾನಗರದಿಂದ ಲಕ್ಕಿನಕೊಪ್ಪದ ಚಿಕ್ಕಮ್ಮನ ಮನೆಗೆ ಬಂದಿದ್ದಳು, ಮನೆಯಲ್ಲಿ ಕಟ್ಟಿದ್ದ ಜೋಕಾಲಿಯಲ್ಲಿ ಆಡುತ್ತಿದ್ದಳು, ಬಾಗಿಲು ಹಾಕಿ ಜೋಕಾಲಿ ಆಡುತ್ತಿದ್ದಾಗ ಈ ಗಟನೆ ನಡೆದಿದೆ. ಜೋಕಾಲಿಯೇ ನೇಣಿನಂತೆ ಕತ್ತನ್ನು ಸುತ್ತಿಕೊಂಡು ಬಾಲಕಿ ಮೃತಪಟ್ಟಿದ್ದಾಳೆ. ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೇಸಿಗೆ ಎಂದು ಈಜಲು ಹೋಗಿ ನೀರಿನಲ್ಲಿ ಮುಳುಗಿ ಮಕಕ್ಕಳು ಮೃತಪಡುತ್ತಿರುವುದ ಒಂದೆಡೆಯಾದರೆ, ಜೋಕಾಲಿ ಕೊರಳಿಗೆ ಸುತ್ತಿಕೊಂಡು ಮಕ್ಕಳು ಸಾಯುವುದು ಇನ್ನೊಂದೆಡೆ. ಇಂಥ ಮಕ್ಕಳ ಸಾವುಗಳು ಇತ್ತೀಚೆಗೆ ಆಗಾಗ ವರದಿಯಾಗುತ್ತಲೇ ಇವೆ.
ಏಪ್ರಿಲ್ ೧೪ರಂದು ಚಿಕ್ಕಮಗಳೂರು ತಾಲೂಕಿನ ಹೆಬ್ಬಳ್ಳಿ ಗ್ರಾಮದ ಮನೆಯೊಂದರಲ್ಲಿ ಜೋಕಾಲಿ ಹಾಕಿದ್ದ ಸೀರೆ ಕೊರಳಿಗೆ ಸುತ್ತಿಕೊಂಡು ಹತ್ತು ವರ್ಷದ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಲೇಖನಾ ಮೃತಪಟ್ಟ ಬಾಲಕಿ. ಪೋಷಕರು ಮನೆಯಲ್ಲಿ ಇಲ್ಲದ ವೇಳೆ ಈ ದುರಂತ ನಡೆದಿದೆ. ತಾಲೂಕಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.
ಇದೇ ದಿನ ಕೋಲಾರ ಹೊರವಲಯದ ಅರಹಳ್ಳಿ ಕೆರೆಯಲ್ಲಿಮುಳುಗುತ್ತಿದ್ದ ಮಕ್ಕಳನ್ನು ರಕ್ಷಿಸಲು ಹೋಗಿ ಇಬ್ಬರು ಮಹಿಳೆಯರು ಪ್ರಾಣ ಕಳೆದುಕೊಂಡಿದ್ದಾರೆ. ಮೃತರನ್ನು ಕೋಲಾರ ನಗರದ ನಿಸಾರ್ ನಗರದ ಮೊಹಮದಿ (25) ಹಾಗೂ ಬೆಂಗಳೂರಿನ ಸಲ್ಮಾ (26) ಎಂದು ಗುರುತಿಸಲಾಗಿದೆ. ಕಳೆದ ವಾರ ಮೈಸೂರಿನಲ್ಲಿ ಕಾವೇರಿ ನದಿಯಲ್ಲಿ ಮುಳುಗಿ ಇಬ್ಬರು ಮಕ್ಕಳು ಸೇರಿ ಐವರು ನೀರು ಪಾಲಾಗಿದ್ದರು. ಹಾಸನದಲ್ಲೂ ಬಾಲಕ ನೀರಿಗೆ ಬಿದ್ದು ಮೃತಪಟ್ಟಿದ್ದಾನೆ.


