Thursday, September 03, 2026
Menu

29,679 ಕೋಟಿ ರೂ. ಹೂಡಿಕೆಯ ಯೋಜನೆಗಳಿಗೆ ಉನ್ನತ ಮಟ್ಟದ ಸಮಿತಿ ಅಸ್ತು

ರಾಜ್ಯದ ಕೈಗಾರಿಕಾ ಕ್ಷೇತ್ರದಲ್ಲಿ ಒಟ್ಟು 29,679 ಕೋಟಿ ರೂಪಾಯಿ ಬಂಡವಾಳ ಹೂಡಿಕೆಯ 9 ಹೊಸ ಮತ್ತು ಹೆಚ್ಚುವರಿ ಹೂಡಿಕೆಯ 8 ಯೋಜನಾ ಪ್ರಸ್ತಾವನೆಗಳಿಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಒಪ್ಪಿಗೆ ಸಮಿತಿಯು ಹಸಿರು ನಿಶಾನೆ ತೋರಿಸಿದೆ. ಈ ಯೋಜನೆಗಳಿಂದ ಒಟ್ಟಾರೆ 66,360 ಉದ್ಯೋಗಗಳು ಸೃಷ್ಟಿಯಾಗಲಿವೆ.

ಹೊಸ ಹೂಡಿಕೆ ಯೋಜನೆಗಳ ಅಡಿಯಲ್ಲಿ ವೈಬ್ರನ್ಸಿ ರೆನ್ಯೂಅಬಲ್ ಎನರ್ಜೀಸ್ 2,194.94 ಕೋಟಿ ರೂ. ಹೂಡಲಿದ್ದು, 30 ಸಾವಿರ ಜನರಿಗೆ ಉದ್ಯೋಗ ನೀಡಲಿದೆ. ಹಾಗೆಯೇ ಮಹೀಂದ್ರ ಏರೋಸ್ಟ್ರಕ್ಚರ್ಸ್ 2,300 ಕೋಟಿ (3,000 ಉದ್ಯೋಗ), ಏಕಸ್ ಕನ್ಸೂಮರ್ ಪ್ರಾಡಕ್ಟ್ಸ್ 1,104 ಕೋಟಿ ರೂ (4,813 ಉದ್ಯೋಗ), ಹೀರೋ ಫ್ಯೂಚರ್ ಎನರ್ಜೀಸ್ 9,760 ಕೋಟಿ ರೂ (3,200 ಉದ್ಯೋಗ), ಎಪ್ಸಿಲಾನ್ 1,500 ಕೋಟಿ ರೂ, ಟೊಯೋಟಾ ಕಿರ್ಲೋಸ್ಕರ್ ₹1,200 ಕೋಟಿ, ನಿರಾಣಿ ಶುಗರ್ಸ್ ₹4,062 ಕೋಟಿ, ಟ್ರೂಆಲ್ಟ್ ಬಯೋ ಎನರ್ಜಿ ₹2,988 ಕೋಟಿ ಮತ್ತು ಲೈಟ್ವಹೌಸ್ ಆಲ್ಟರ್ನೇಟಿವ್ ಅಸೆಟ್ಸ್ 600 ಕೋಟಿ ರೂಪಾಯಿ ಬಂಡವಾಳ ತೊಡಗಿಸಲಿವೆ.

ಮಿಕ್ಕಂತೆ ಎಂಎಸ್ಪಿಎಲ್ ಕಂಪನಿಯು 884.25 ಕೋಟಿ, ಎನ್ಶೂರ್ ರಿಲಯನ್ಸ್ ಪವರ್ ಸೊಲ್ಯೂಷನ್ಸ್ 250 ಕೋಟಿ, ಹೋಂಡಾ ಕಾರ್ಸ್ 437 ಕೋಟಿ, ಭೀಮಾ ಫೈನ್ ಕೆಮಿಕಲ್ಸ್ 605 ಕೋಟಿ, ಸನ್ಸೇರಾ 492.24 ಕೋಟಿ, ಟಿವಿಎಸ್ ಮೋಟಾರ್ಸ್ 1,050 ಕೋಟಿ ಮತ್ತು ಹ್ಯಾವೆಲ್ಸ್ ಇಂಡಿಯಾ 250 ಕೋಟಿ ರೂಪಾಯಿ ಹೆಚ್ಚುವರಿ ಬಂಡವಾಳ ಹೂಡಿಕೆ ಮಾಡಲಿವೆ.

ಕೈಗಾರಿಕೆಗಳಿಗೆ ಪರವಾನಿಗೆ ನೀಡುವ ಯೋಜನಾ ವರದಿಗಳನ್ನು ಸರಿಯಾಗಿ ಪರಿಶೀಲಿಸಬೇಕು. ಯೋಜನೆಗೆ ಪರವಾನಿಗೆ ಪೂರ್ವದಲ್ಲಿ ಆಡಿಟ್ ಕಡ್ಡಾಯವಾಗಿ ನಡೆಸಬೇಕು. ಇದಕ್ಕಾಗಿ ಹೊಸ ಆಡಿಟ್ ತಂಡವನ್ನು ರಚಿಸಬೇಕು ಎಂದು ಮುಖ್ಯಮಂತ್ರಿ ಅವರು ಹಣಕಾಸು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೈಗಾರಿಕಾ ನೀತಿಯಲ್ಲಿನ ಎಲ್ಲಾ ಅಂಶಗಳನ್ನು ಸಮರ್ಪಕವಾಗಿ ಅನುಸರಿಸಬೇಕು. ಕೈಗಾರಿಕೆಗಳ ಸ್ಥಾಪನೆ ಮತ್ತು ವಿಸ್ತರಣೆಗೆ ಉತ್ತೇಜನ ನೀಡಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಸೂಚನೆ ನೀಡಿದರು.

ಸಚಿವರಾದ ಎಂ.ಬಿ.ಪಾಟೀಲ್, ಕೆ.ಜೆ.ಜಾರ್ಜ್, ಪ್ರಿಯಾಂಕ್ ಖರ್ಗೆ, ಅಜಯ್ ಸಿಂಗ್, ಪಿ.ಎಂ. ನರೇಂದ್ರ ಸ್ವಾಮಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಮುಖ್ಯಮಂತ್ರಿ ಅವರ ಆರ್ಥಿಕ ಸಲಹೆಗಾರ ಎಲ್.ಕೆ.ಅತೀಕ್, ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Related Posts

Leave a Reply

Your email address will not be published. Required fields are marked *