ಎಂಟು ವರ್ಷಗಳಿಂದ ಜೊತೆಯಲ್ಲೇ ವಾಸವಿದ್ದು ಅಂಧ ಮಹಿಳೆಯ ಮನೆಯಲ್ಲಿ ಚಿನ್ನಾಭರಣ ಹಾಗೂ ನಗದು ದೋಚಿದ್ದ ದಂಪತಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಎಂಬಿಎ ಪದವೀಧರೆ ಶರ್ಮಿಳಾ ಶೇಷಾದ್ರಿ ಮತ್ತು ಪತಿ ಡಿಪ್ಲೊಮಾ ಪದವೀಧರ ಗಣೇಶ್ ಕುಮಾರ್ ಬಂಧಿತರು.
ಅಂಧ ಸಂತ್ರಸ್ತೆ ಕಳೆದ ಎಂಟು ವರ್ಷಗಳಿಂದ ಬಿಇಎಂಎಲ್ ಲೇಔಟ್ನ ಮನೆಯಲ್ಲಿ ಈ ದಂಪತಿಯ ಜೊತೆ ವಾಸವಿದ್ದರು. ಜೂನ್ 2024 ಸಂತ್ರಸ್ತೆನ್ನ ಚಿನ್ನಾಭರಣಗಳನ್ನು ಒಂದು ಬ್ಯಾಂಕ್ ಲಾಕರ್ನಿಂದ ಮತ್ತೊಂದು ಲಾಕರ್ಗೆ ವರ್ಗಾಯಿಸುವ ಸಮಯದಲ್ಲಿ ಮನೆಗೆ ತಂದಿದ್ದರು. ಚಿನ್ನಾಭರಣಗಳ ಜೊತೆಗೆ 49.50 ಲಕ್ಷ ರೂಪಾಯಿ ನಗದನ್ನು ಕಪಾಟಿನಲ್ಲಿ ಸುರಕ್ಷಿತವಾಗಿ ಇಟ್ಟಿದ್ದರು.
ಕೆಲವು ದಿನಗಳ ನಂತರ ಒಡವೆಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಮುಂದಾದಾಗ ಕಪಾಟಿನ ಕೀ ಇರಲಿಲ್ಲ. ಕೀ ತಯಾರಿಸುವವರನ್ನು ಕರೆಸಲು ದಂಪತಿಗೆ ಕೇಳಿಕೊಂಡಿದ್ದಾರೆ. ದಂಪತಿ ಇದಕ್ಕೆ ಪ್ರತಿಕ್ರಿಯಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ. ಅನುಮಾನಗೊಂಡ ಸಂತ್ರಸ್ತೆ ಸ್ವತಃ ಕೀ ತಯಾರಕನನ್ನು ಕರೆಸಿ ಕಪಾಟು ತೆರೆದಾಗ ನಗದು ಮತ್ತು ಚಿನ್ನಾಭರಣ ಇರಲಿಲ್ಲ.
ಈ ಬಗ್ಗೆ ಸಂತ್ರಸ್ತೆಯು ದಂಪತಿಯನ್ನು ಪ್ರಶ್ನಿಸಿದಾಗ, ನಾವು ಆರ್ಥಿಕ ಸಂಕಷ್ಟದಲ್ಲಿದ್ದೆವು, ನಿನ್ನ ಹಣವನ್ನು ನಮ್ಮ ಬಿಸಿನೆಸ್ಗೆ ಬಳಸಿಕೊಂಡಿದ್ದೇವೆ. ನಿನಗೆ ನಗದು ಅಥವಾ ಚಿನ್ನ ಯಾವುದನ್ನೂ ವಾಪಸ್ ಕೊಡುವುದಿಲ್ಲ ಎಂದು ಉತ್ತರಿಸಿದ್ದಾರೆ. ನೊಂದ ಅಂಧ ಮಹಿಳೆ ಪೊಲೀರಿಗೆ ದೂರು ನೀಡಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.


