ನಮ್ಮ ಮಣ್ಣಿನ ಮಕ್ಕಳನ್ನು ಗುರುತಿಸಲು ನಾವು ವಿಫಲರಾಗಿದ್ದೇವೆ. ಧಾರವಾಡದ ಅಂತಸತ್ವ ಆತ್ಮೀಯತೆ, ಪ್ರೀತಿ, ವಿಶ್ವಾಸ. ಅಂತಕರಣ ಎಲ್ಲವನ್ನೂ ಮುಂದಿನ ಪೀಳಿಗೆಗೆ ಬಿಟ್ಟು ಹೋಗುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟರು.
ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ದಿ. ಶ್ರೀ ಚನ್ನವೀರೌಡ ಅಣ್ಣಾ ಶಿದ್ರಾಮಗೌಡ ಪಾಟೀಲ್ ಸಂಸ್ಕರಣೆ ದತ್ತಿ ಕಾರ್ಯಕ್ರಮದಲ್ಲಿ ಪ್ರೊ. ಮಲ್ಲಿಕಾರ್ಜುನ ಪಾಟೀಲ್ ಬರೆದಿರುವ ಸೈದಾಪುರ ಸಿ.ಎಸ್.ಪಾಟೀಲ ಜೀವನ ಮತ್ತು ಸಾಧನೆ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.
ನೂರಾರು ವರ್ಷಗಳಿಂದ ಜಗತ್ತಿಗೆ ಮಹಾಪುರುಷರನ್ನು ಕೊಟ್ಟ ಈ ಮಣ್ಣಿನ ಗುಣ, ಕೇವಲ ಧಾರವಾಡದಲ್ಲಿ ಹುಟ್ಟಿದವರಷ್ಟೇ ಅಲ್ಲ, ಮಹಾರಾಷ್ಟ್ರ, ಗೋವಾದಿಂದ ಬಂದು ಇಲ್ಲಿ ವಿದ್ಯಾರ್ಜನೆ ಪಡೆದು ಉನ್ನತ ಹುದ್ದೆ ಪಡೆದವರು ಅನೇಕರು ಇದ್ದಾರೆ. ನನಗೆ ಧಾರವಾಡದಲ್ಲಿ ಸ್ನೇಹಿತರು ಅತಿ ಹೆಚ್ಚಿದ್ದಾರೆ ಎಂದರು.
ಸಿ.ಎಸ್. ಪಾಟೀಲರು ಆ ಕಾಲದಲ್ಲಿ ಅದ್ಭುತ ಸಾಧನೆ ಮಾಡಿದರು. ಪಾಟೀಲರು 20 ನೇ ಶತಮಾನದಲ್ಲಿ ಶಿಕ್ಷಣದ ಮಹತ್ವ ತಿಳಿದು ವಿದ್ಯಾರ್ಜನೆ ಮಾಡುತ್ತೇನೆ ಎಂದು ಛಲದಿಂದ ಶಿಕ್ಷಣ ಪಡೆದಿದ್ದರು. ಅವತ್ತು ಇಂಜಿನಿಯರಿಂಗ್ ಮಾಡುತ್ತೇನೆ ಎಂದು ಮಾಡಿರುವುದು ಅವರ ದೂರದೃಷ್ಟಿಯ ಪ್ರತೀಕ ಎಂದರು.
ನಾವು ದೂರದ ಬಗ್ಗೆ ಮಾತನಾಡುತ್ತೇವೆ. ಆದರೆ ಈ ನೆಲದ ಮಣ್ಣಿನ ಮಕ್ಕಳ ಬಗ್ಗೆ ನಾವು ಮಾತನಾಡುವುದಿಲ್ಲ. ಚನ್ನವೀರಗೌಡರು ಮಾಡಿರುವ ಸಾಧನೆ ಕರ್ನಾಟಕದ ಅಗ್ರಮಾನ್ಯ ಸಾಧನೆಯಾಗಿದೆ. ವಿದ್ಯಾವರ್ಧಕ ಸಂಘ ಬದುಕಿನ ಎಲ್ಲ ವಿಷಯಗಳಿಗೆ ಮಾರ್ಗದರ್ಶನ ಮಾಡುವ ಸ್ಥಾನದಲ್ಲಿದೆ. ಕರ್ನಾಟಕ ಏಕೀಕರಣ ಪ್ರಾರಂಭವಾಗಿರುವುದು ಇಲ್ಲಿಯೇ, ಅದರಗುಂಚಿಯ ಶಂಕರಗೌಡರು ಉಪವಾಸ ಮಾಡಿ ಲಾಠಿ ಚಾರ್ಜ್ ಆಗದಿದ್ದರೆ ಕರ್ನಾಟಕ ಏಕೀಕರಣ ಆಗುತ್ತಿರಲಿಲ್ಲ ಎಂದು ಹೇಳಿದರು.
ಚನ್ನವೀರಗೌಡರ ಬಗ್ಗೆ ಬಂದಿರುವ ಈ ಪುಸ್ತಕ ಸಮಯೋಚಿತವಾಗಿದೆ. ಸಿ.ಎಸ್. ಪಾಟೀಲ್ ಅವರು ಇಂದಿನ ವ್ಯವಸ್ಥೆಗೆ ಅಪವಾದ. ಅವರು ಅಷ್ಟೊಂದು ಪ್ರಾಮಾಣಿಕ ವ್ಯಕ್ತಿ. ಅವರು ಪವರ್ ಪೊಲಿಟಿಕ್ಸ್ ಮಾಡಿದ್ದರೆ ಎಲ್ಲಿಯೋ ಹೋಗುತ್ತಿದ್ದರು. ಆದರೆ ಅವರು ಸೈದಾಪುರ ಗೌಡರಾಗಿಯೇ ಉಳಿದಿದ್ದಾರೆ. ಅವರು ಯಾವುದಕ್ಕೂ ಹೊಂದಾಣಿಕೆ ಮಾಡಿಕೊಳ್ಳದ ವ್ಯಕ್ತಿ. ಸಿ.ಎಸ್. ಪಾಟೀಲರು ಕೆಸರಿನಲ್ಲಿ ಅರಳಿದ ಕಮಲ ಇದ್ದ ಹಾಗೆ ಎಂದು ಹೇಳಿದರು.