ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಗಾಂಧಿನಗರ ಗ್ರಾಮದಲ್ಲಿ ಮಾವನ ಜೊತೆ ಜೇನು ತೆಗೆಯಲು ಹೋಗಿದ್ದ ಏಳು ವರ್ಷದ ಬಾಲಕ ಶವವಾಗಿ ಪತ್ತೆಯಾಗಿದ್ದಾನೆ.
ಗ್ರಾಮದ ಶಶಿನಾಯ್ಕ್ ಎಂಬವರ ಪುತ್ರ ಆದಿತ್ಯ (7) ಅನುಮಾನಸ್ಪದವಾಗಿ ಮೃತಪಟ್ಟ ಬಾಲಕ. ಬುಧವಾರ ಬೆಳಗ್ಗೆ ಮಾವ ತಾವರೆನಾಯ್ಕ್ ಜೊತೆ ಬಾಲಕ ಜೇನು ಮುರಿದುಕೊಂಡು ಬರಲು ಹೋಗಿದ್ದ. ಸಂಜೆಯಾದರೂ ಇಬ್ಬರೂ ಮನೆಗೆ ಬಂದಿರಲಿಲ್ಲ. ಮನೆಯವರು ಜಗಳೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.
ಗುರುವಾರ ಬೆಳಗ್ಗೆ ಗ್ರಾಮದ ಪಕ್ಕದ ಹಳ್ಳದಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದೆ. ಮಾವ ತಾವರೆನಾಯ್ಕ್ ಬಾಲಕನನ್ನು ಕೊಲೆ ಮಾಡಿ ಬಿಸಾಕಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ತಾವರೆನಾಯ್ಕ್ ನಾಪತ್ತೆಯಾಗಿದ್ದಾನೆ. ತಾವರೆನಾಯ್ಕ್ಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಯಾವ ಕಾರಣಕ್ಕೆ ಸಾವನ್ನಪ್ಪಿದ್ದಾನೆ ಎಂಬುದು ಇನ್ನು ನಿಗೂಢವಾಗಿದೆ.
ತಾಯಿ ಮಡಿಲಲ್ಲಿದ್ದ ಮಗು ಮೇಲೆ ತೆಂಗಿನಕಾಯಿ ಬಿದ್ದು ಸಾವು
ಬ್ರಹ್ಮಾವರ ತಾಲೂಕು ಚಾಂತಾರು ಹೆರಂಜಾಲು ಗ್ರಾಮದಲ್ಲಿ ತಾಯಿ ಮಡಿಲಲ್ಲಿದ್ದ ಒಂದುವರೆ ವರ್ಷದ ಮಗು ಮೇಲೆ ತೆಂಗಿನಕಾಯಿ ಬಿದ್ದು ಮೃತಪಟ್ಟಿದೆ.
ಪ್ರಶಾಂತ್ ಮತ್ತು ಸುಚಿತ್ರಾ ದಂಪತಿ ಎರಡನೇ ಪುತ್ರ ದಕ್ಷ. ಈ ಮಗುವನ್ನು ಮಡಿಲಲ್ಲಿ ಮಲಗಿಸಿಕೊಂಡು ತಾಯಿ ತೆಂಗಿನಮರದ ಕೆಳಗೆ ಕುಳಿತಿದ್ದರು. ಅಚಾನಕ್ ಆಗಿ ತೆಂಗಿನಕಾಯಿ ಉದುರಿ ತಲೆ ಮೇಲೆ ಬಿದ್ದು ಮಗು ತೀವ್ರವಾಗಿ ಗಾಯಗೊಂಡಿತ್ತು.
ಮಗುವನ್ನು ಕೂಡಲೇ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಮಗು ಮೃತಪಟ್ಟಿತ್ತು. ಬ್ರಹ್ಮಾವರ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.


