Menu

ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ವಿಧಾನಸೌಧಕ್ಕೆ ಮುತ್ತಿಗೆ ಯತ್ನ

ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದೆ, ಮುತ್ತಿಗೆ ಹಾಕಲು ಮುಂದಾದ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ಸದನದಲ್ಲೂ ವಾಗ್ದಾಳಿ ನಸುತ್ತ ಬಂದಿರುವ ಬಿಜೆಪಿಯವರು ಫ್ರೀಡಂ ಪಾರ್ಕ್‌ನಲ್ಲಿ ಸಮಾವೇಶಗೊಂಡು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಪಕ್ಷ ನಾಯಕ ಆರ್‌. ಅಶೋಕ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ವಿಧಾನಸೌಧ ಚಲೊ ನಡೆಯಿತು. ಮುನ್ನೆಚ್ಚರಿಕೆಯಾಗಿ ವಿಧಾನಸೌಧ ಹಾಗೂ ವಿಕಾಸ ಸೌಧ ಸುತ್ತಮುತ್ತ ಬ್ಯಾರಿಕೇಡ್‌ ಅಳವಡಿಸಿ ಪ್ರವೇಶ ದ್ವಾರ ಮುಚ್ಚಲಾಗಿತ್ತು. ಕೆಎಸ್‌ಆರ್‌ಪಿ ನಯೀಜಿಸಿ ಬಿಎಂಟಿಸಿ ಬಸ್‌ ವ್ಯವಸ್ಥೆಗೊಳಿಸಲಾಗಿತ್ತು.

ಬಿಜೆಪಿ ನಾಯಕರು ವಿಧಾನಸೌಧದೊಳಗೆ ನುಗ್ಗಲು ಯತ್ನಿಸಿದಾಗ ಪೊಲೀಸರು ತಡೆದರು. ರಸ್ತೆಯಲ್ಲೇ ಜಮಾಯಿಸಿದ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರ ಹಾಗೂ ಸಚಿವರ ವಿರುದ್ಧ ಧಿಕ್ಕಾರ ಕೂಗಿದರು. ಅಶೋಕ, ವಿಜಯೇಂದ್ರ, ರವಿ, ಎನ್. ರವಿಕುಮಾರ್ ಸೇರಿದಂತೆ ಪ್ರಮುಖರನ್ನು ಪೊಲೀಸರು ವಶಕ್ಕೆ ಪಡೆದರು.

ವಾಲ್ಮೀಕಿ ಸಮುದಾಯಕ್ಕೆ ಸೇರಬೇಕಿದ್ದ 187 ಕೋಟಿ ರೂಪಾಯಿ ಬೇರೆಡೆ ಹಂಚಲಾಗಿದೆ. ನಾಗೇಂದ್ರ ನುಂಗಿದ್ದು ದಲಿತರ ಹಣ. ಈ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಉಳಿದವರ ಹೆಸರು ಬಹಿರಂಗವಾಗುತ್ತದೆ ಎಂಬ ಭಯದಿಂದ ಸಚಿವರನ್ನು ರಕ್ಷಿಸಲಾಗುತ್ತಿದೆ. ನಾಗೇಂದ್ರ ಅವರನ್ನು ಸಂಪುಟದಿಂದ ವಜಾಗೊಳಿಸದಿದ್ದರೆ ಬೀದಿ ಬೀದಿಯಲ್ಲಿ ಹೋರಾಟ ನಡೆಸುತ್ತೇವೆ ಎಂದು ಮೇಲ್ಮನೆ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು. ಡಾ. ಸಿಎನ್ ಅಶ್ವಥ್ ನಾರಾಯಣ್ ಮಾತನಾಡಿ, ದಲಿತರ ಹಣ ನುಂಗಿ ನೀರು ಕುಡಿದವರಿಗೆ ಪಾಠ ಕಲಿಸುತ್ತೇವೆ. ಸಚಿವರ ರಾಜೀನಾಮೆ ಪಡೆಯುವವರೆಗೆ ನಮ್ಮ ಹೋರಾಟ ನಿಲ್ಲದು. ಸರ್ಕಾರದ ಗೂಂಡಾಗಿರಿ ನಡೆಯುವುದಿಲ್ಲ ಎಂದರು.

ಮಾಜಿ ಸಚಿವ ರಾಜೂಗೌಡ ಮಾತನಾಡಿ, ದಲಿತರ ಹಣ ಲೂಟಿ ಮಾಡುವುದೇ ಕಾಂಗ್ರೆಸ್ ಕೆಲಸವಾಗಿದೆ. ಹೈಕಮಾಂಡ್‌ನಿಂದಲೇ ಲೂಟಿಯಆದೇಶ ಸಿಕ್ಕಿರುವಂತೆ ಸಂವಿಧಾನದ ಪ್ರತಿ ಹಿಡಿದು ಲೂಟಿ ಮಾಡುತ್ತಿದ್ದಾರೆ. ನೈತಿಕತೆ ಇದ್ದರೆ ನಾಗೇಂದ್ರ ಅವರಿಂದ ರಾಜೀನಾಮೆ ಪಡೆಯಿರಿ ಎಂದು ಒತ್ತಾಯಿಸಿದರು.

Related Posts

Leave a Reply

Your email address will not be published. Required fields are marked *