ಮುಧೋಳ ತಾಲೂಕಿನ ಸೊರಗಾಂವ್ ಗ್ರಾಮದ ಬಳಿ ಬಸ್ಗೆ ಬೈಕ್ ಡಿಕ್ಕಿಯಾಗಿದ್ದು, ಬೈಕ್ಗೆ ಬೆಂಕಿ ತಗುಲಿ ಯುವಕ ಜೀವಂತವಾಗಿ ದಹನಗೊಂಡಿರುವ ಭೀಕರ ಘಟನೆ ನಡೆದಿದೆ. ಮುಧೋಳ ಪಟ್ಟಣದ ಜನತಾ ಪ್ಲಾಟ್ ನಿವಾಸಿ ನವೀನ್ ಹನುಮಂತ ಗೋರ್ಕ್ ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ.
ಬಾದಾಮಿಯಿಂದ ಇಚಲಕರಂಜಿ ಕಡೆಗೆ ತೆರಳುತ್ತಿದ್ದ ಬಸ್ಗೆ ಬೈಕ್ ಡಿಕ್ಕಿಯಾಗಿದೆ. ತಕ್ಷಣವೇ ಬೆಂಕಿ ಹೊತ್ತಿಕೊಂಡಿದ್ದು, ಬೈಕ್ ಸವಾರ ನವೀನ್ ಬೆಂಕಿಯಲ್ಲಿ ಸಿಲುಕಿ ಸ್ಥಳದಲ್ಲೇ ಸುಟ್ಟು ಕರಕಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು ಬಂದು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪಘಾತಕ್ಕೆ ನಿಖರ ಕಾರಣ ಏನು ಎಂಬುದರ ಕುರಿತು ತನಿಖೆ ಮುಂದುವರಿದಿದೆ.
20 ಲಕ್ಷ ರೂ. ದರೋಡೆ ಆರೋಪಿ ಇನ್ಸ್ಪೆಕ್ಟರ್ಗೆ ನ್ಯಾಯಂಗ ಬಂಧನ
20 ಲಕ್ಷ ರೂ. ದರೋಡೆ ಪ್ರಕರಣದಲ್ಲಿ ಬಂಧಿತರಾಗಿರುವ ಸಿಐಡಿ ಇನ್ಸ್ಪೆಕ್ಟರ್ ಮಹೇಶ್ ಕನಕಗಿರಿಗೆ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ. ದರೋಡೆಯಲ್ಲಿ ತನ್ನ ಪಾತ್ರವಿಲ್ಲ ಎಂದು ವಿಚಾರಣೆ ವೇಳೆ ತಿಳಿಸಿದ್ದಾರೆ.
ಸಿಐಡಿಯ ನರಹತ್ಯೆ ಮತ್ತು ಕಳ್ಳತನ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹೇಶ್ ಕನಕಗಿರಿ ರಿಯಲ್ ಎಸ್ಟೇಟ್ ಏಜೆಂಟರಾದ ಕುಪೇಂದ್ರ ರೆಡ್ಡಿ ಹಾಗೂ ವಸಂತ್ ಕುಮಾರ್ ಜೊತೆಗೆ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದರು.
ಕೇರಳದ ಮೂವರು ಉದ್ಯಮಿಗಳಿಂದ ಬೆಂಗಳೂರಿನ ಹೋಟೆಲ್ನಲ್ಲಿ 20 ಲಕ್ಷ ರೂ. ದರೋಡೆ ನಡೆಸಿದ ಪ್ರಕರಣದಲ್ಲಿ ಮೂವರೂ ಆರೋಪಿಗಳು. ನ್ಯಾಯಾಲಯ ಮಹೇಶ್ ಕನಕಗಿರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಕುಪೇಂದ್ರ ರೆಡ್ಡಿ ಪರಿಚಯವಿದ್ದ ಕಾರಣ ಅವರೊಂದಿಗೆ ತೆರಳಿದ್ದೆ. ದರೋಡೆ ಬಗ್ಗೆ ಮಾಹಿತಿ ಇರಲಿಲ್ಲ. ಪೊಲೀಸರು ತಿಳಿಸಿದ ಬಳಿಕವೇ ಗೊತ್ತಾಯಿತು ಎಂದು ಆರೋಪಿ ಕನಕಗಿರಿ ಹೇಳಿದ್ದಾರೆ ಎನ್ನಲಾಗಿದೆ.
ಪೊಲೀಸ್ ಗುರುತಿನ ಚೀಟಿ ಕಾರಿನ ಡ್ಯಾಶ್ಬೋರ್ಡ್ನಲ್ಲಿ ಇಟ್ಟಿದ್ದು,ಆರೋಪಿಗಳು ತೆಗೆದುಕೊಂಡು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಉಳಿದ ಇಬ್ಬರು ಆರೋಪಿಗಳು ದರೋಡೆ ಕುರಿತು ಇನ್ಸ್ಪೆಕ್ಟರ್ಗೆ ಸಂಪೂರ್ಣ ಮಾಹಿತಿ ಇತ್ತು, ಅವರ ಸೂಚನೆಯಂತೆ ಈ ಕೃತ್ಯ ಎಸಗಿದ್ದಾಗಿ ಹೇಳಿದ್ದಾರೆ.


