ಕಾವೇರಿ ನಿರ್ವಹಣಾ ಪ್ರಾಧಿಕಾರದ ಆದೇಶದಂತೆ ತಮಿಳುನಾಡಿಗೆ ನೀರು ಬಿಡಬೇಕೆಂದು ಕರ್ನಾಟಕಕ್ಕೆ ಸುಪ್ರೀಂಕೋರ್ಟ್ ಗುರುವಾರ ತಾಕೀತು ಮಾಡಿದ್ದು, ದೆಹಲಿಯಲ್ಲಿ ಪ್ರಾಧಿಕಾರದ ಅಧ್ಯಕ್ಷ ಎಸ್‌ಕೆ ಹವಲ್ದಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ CWMA ಹದಿನೈದು ದಿನ ನಿತ್ಯವೂ ನಾಲ್ಕು ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸಬೇಕೆಂಬ ಶಿಫಾರಸನ್ನು ಪಾಲಿಸುವಂತೆ ಕರ್ನಾಟಕಕ್ಕೆ ಸೂಚಿಸಿದೆ.
ಸಭೆಯಲ್ಲಿ ಕರ್ನಾಟಕ ನೀರಾವರಿ ನಿಗಮದ ಎಂಡಿ ಪ್ರಬಲ ವಾದ ಮಂಡಿಸಿದರು. ರಾಜ್ಯದ ನಾಲ್ಕು ಪ್ರಮುಖ ಜಲಾಶಯಗಳಿಗೆ ಒಳಹರಿವು ತೀವ್ರವಾಗಿ ಕುಸಿದಿದ್ದು, ನೀರಿನ ಲಭ್ಯತೆಯಲ್ಲಿ ಶೇ.52.61 ಕೊರತೆಯಾಗಿದೆ ಎಂದು ವಿವರಿಸಿದರು. ಕರ್ನಾಟಕದ ನಾಲ್ಕು ಜಲಾಶಯಗಳಿಗೆ ಈ ವರ್ಷ 113.632 ಟಿಎಂಸಿ ನೀರು ಮಾತ್ರ ಹರಿದುಬಂದಿದೆ. ನಾಲ್ಕು ಜಲಾಶಯಗಳಲ್ಲಿ 49.775 ಟಿಎಂಸಿ ನೀರು ಸಂಗ್ರಹವಿದೆ. ಕುಡಿಯುವ ನೀರು, ಪರಿಸರ ಹರಿವು ಮತ್ತು ಆವಿಯಾಗುವಿಕೆಗೆ ಅಗತ್ಯವಿರುವ ಪ್ರಮಾಣವನ್ನು ಹೊರತುಪಡಿಸಿದ ಬಳಿಕ ನೀರಾವರಿಗೆ ಉಳಿಯುವುದು ಕೇವಲ 4.775 ಟಿಎಂಸಿ ಮಾತ್ರ ಎಂದು ಸ್ಪಷ್ಟವಾಗಿ ಮಾಹಿತಿ ನೀಡಿದ್ದಾರೆ.
ರಾಜ್ಯದ ನೀರಾವರಿ ಅಗತ್ಯ 23.40 ಟಿಎಂಸಿ ಇದೆ, ಲಭ್ಯ ನೀರು ಮತ್ತು ಅಗತ್ಯದ ನಡುವೆ ದೊಡ್ಡ ಅಂತರವಿದೆ. ಜಲಾಶಯಗಳಿಗೆ ಒಳಹರಿವು 2,200 ಕ್ಯೂಸೆಕ್‌ಗೆ ಕುಸಿದಿರುವುದರಿಂದ ಕುಡಿಯುವ ನೀರು ಸೇರಿದಂತೆ ಆದ್ಯತೆಯ ಅಗತ್ಯಗಳನ್ನು ರಕ್ಷಿಸಬೇಕಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಜಲಾಶಯಗಳಿಂದ ಮತ್ತಷ್ಟು ನೀರು ಬಿಡುಗಡೆ ಮಾಡುವುದು ಸಾಧ್ಯವಿಲ್ಲ ಎಂದು ಕರ್ನಾಟಕ CWRCಗೆ ತಿಳಿಸಿದೆ.
ಈಗಾಗಲೇ CWRC ಮತ್ತು CWMA ಸೂಚಿಸಿದ್ದ ಒಟ್ಟು ಹರಿವಿನ ಪ್ರಮಾಣವನ್ನು ಕರ್ನಾಟಕ ಪೂರೈಸಿದೆ ಎಂದು ರಾಜ್ಯ ಪ್ರತಿಪಾದಿಸಿತು. ತಮಿಳುನಾಡಿನಲ್ಲಿ 184.96 ಟಿಎಂಸಿ ನೀರು ಲಭ್ಯವಿದೆ ಎಂದು ಕರ್ನಾಟಕ ಅಂದಾಜು ಮಂಡಿಸಿತು. ಕುರುವೈ–ಸಾಂಬಾ ಬೆಳೆಗಳಿಗೆ ತಮಿಳುನಾಡಿಗೆ 114.274 ಟಿಎಂಸಿ ಅಗತ್ಯವಿದ್ದು, ಲಭ್ಯ ನೀರು ಈ ಬೆಳೆಗಳನ್ನು ಮುಂದುವರಿಸಲು ಸಾಕಾಗುತ್ತದೆ ಎಂದು ಕರ್ನಾಟಕ ವಾದಿಸಿದೆ.
ಪ್ರತಿಯಾಗಿ ತಮಿಳುನಾಡು ತನ್ನ ಜಲಾಶಯದಲ್ಲಿ ಲಭ್ಯವಿರುವ ನೀರು ಈಶಾನ್ಯ ಮುಂಗಾರು ಬರುವವರೆಗೆ ಡೆಲ್ಟಾ ಪ್ರದೇಶದ ನೀರಾವರಿ ಮುಂದುವರಿಸಲು ಸಾಕಾಗುವುದಿಲ್ಲ ಎಂದು ವಾದಿಸಿತು. ತನ್ನ ಪಾಲು 57.190 ಟಿಎಂಸಿ ಆಗಬೇಕಿದ್ದರೂ, ಬಿಳಿಗುಂಡ್ಲುವಿನಲ್ಲಿ 42.209 ಟಿಎಂಸಿ ಮಾತ್ರ ಲಭಿಸಿದೆ. ಹೀಗಾಗಿ 14.981 ಟಿಎಂಸಿ ಬ್ಯಾಕ್‌ಲಾಗ್ ಇದೆ ಎಂದು ಹೇಳಿದೆ.
ಕರ್ನಾಟಕ ಮತ್ತು ತಮಿಳುನಾಡು ಮಂಡಿಸಿದ ವಾದ ಪರಿಗಣಿಸಿದ ಬಳಿಕ CWMA, ಕರ್ನಾಟಕದ ಜಲಾಶಯಗಳಿಂದ ನೀರು ಬಿಡುಗಡೆ ಮಾಡುವಂತೆ ಸೂಚಿಸಿದೆ. ಸೆ.24ರ ಬೆಳಗ್ಗೆ 8 ಗಂಟೆಯಿಂದ 15 ದಿನ ಬಿಳಿಗುಂಡ್ಲುವಿನಲ್ಲಿ 4,000 ಕ್ಯೂಸೆಕ್ ಹರಿವು ಖಚಿತಪಡಿಸಬೇಕು ಎಂದು ಸಮಿತಿ ನಿರ್ಧರಿಸಿದೆ.


