ಸೈಬರ್ ವಂಚನೆ ಮೂಲಕ ದೋಚಿದ ಹಣವನ್ನು ಅಕ್ರಮವಾಗಿ ವರ್ಗಾಯಿಸಲು ಮ್ಯೂಲ್ ಬ್ಯಾಂಕ್ ಖಾತೆಗಳನ್ನು ಬಳಸುತ್ತಿರುವ ಜಾಲವನ್ನು ಬೆಂಗಳೂರು ಉತ್ತರ ವಿಭಾಗದ ಸೈಬರ್ ಕ್ರೈಂ ಪೊಲೀಸರು ಬಯಲಿಗೆಳೆದಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರ ಮೊಬೈಲ್ ಫೋನ್‌ಗಳಲ್ಲಿ 507 ಖಾತೆಗಳ ಮಾಹಿತಿ ಪತ್ತೆಯಾಗಿದೆ ಎಂದು ಹೇಳಲಾಗಿದೆ.
ಜಾರ್ಖಂಡ್‌ನ ಅಮಿತ್ ಮಿಶ್ರಾ, ಬೆಂಗಳೂರಿನ ತೌಸೀಫ್ ಅಹಮದ್, ಪಶುರಾಮ್ ಕಣ್ಣಾವರ್ ಬಂಧಿತ ಆರೋಪಿಗಳು. ಹರೀಶ್ ಕುಮಾರ್ ಎಂಬವರು ಶೇರ್ ಮಾರ್ಕೆಟ್ ಹೂಡಿಕೆ ಹೆಸರಿನಲ್ಲಿ 93.6 ಲಕ್ಷ ರೂಪಾಯಿ ಕಳೆದುಕೊಂಡ ನಂತರ ದಾಖಲಿಸಿದ ದೂರಿನನ್ವಯ ಪೊಲೀಸರು ತನಿಖೆ ನಡೆಸಿದಾಗ ಈ ದಂಧೆ ಬೆಳಕಿಗೆ ಬಂದಿದೆ.
ಆರೋಪಿಗಳು ಸಾರ್ವಜನಿಕರಿಗೆ ಕಮಿಷನ್ ಆಸೆ ತೋರಿಸಿ ಬ್ಯಾಂಕ್ ಖಾತೆಗಳು, ನೆಟ್ ಬ್ಯಾಂಕಿಂಗ್ ಐಡಿ ಹಾಗೂ ಸಿಮ್ ಕಾರ್ಡ್‌ಗಳನ್ನು ಪಡೆಯುತ್ತಿದ್ದರು. ಖಾತೆದಾರರನ್ನು ಹೋಟೆಲ್‌ಗಳಲ್ಲಿ ಇರಿಸಿ ಅವರ ಫೋನ್‌ಗಳಿಗೆ ‘ZNPAY’ ನಂತಹ ಎಸ್‌ಎಂಎಸ್ ಫಾರ್ವರ್ಡಿಂಗ್ ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡುತ್ತಿದ್ದರು. ಇದರಿಂದ ಬ್ಯಾಂಕ್‌ಗಳಿಂದ ಬರುವ ಒಟಿಪಿ ಮತ್ತು ಸಂದೇಶಗಳು ನೇರವಾಗಿ ಸೈಬರ್ ವಂಚಕರಿಗೆ ತಲುಪುತ್ತಿತ್ತು. ಇದನ್ನು ಬಳಸಿ ಅವರೇ ಖಾತೆಗಳನ್ನು ನಿರ್ವಹಿಸಿ ಅಕ್ರಮ ಹಣ ವರ್ಗಾವಣೆ ಮಾಡುತ್ತಿದ್ದರು.
ಬಂಧಿತರ ಬಳಿಯಿದ್ದ ಫೋನ್‌ಗಳ ಪರಿಶೀಲನೆ ನಡೆಸಿದಾಗ ಈ 507 ಖಾತೆಗಳು ದೆಹಲಿ, ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಸೈಬರ್ ಅಪರಾಧ ಪ್ರಕರಣಗಳಿಗೆ ಲಿಂಕ್ ಆಗಿರುವುದು ಪತ್ತೆಯಾಗಿದೆ.
ಟೆಲಿಗ್ರಾಂ ಮತ್ತು ವಾಟ್ಸಾಪ್ ಐಪಿ ವಿಳಾಸಗಳ ತಾಂತ್ರಿಕ ಪರಿಶೀಲನೆ ನಡೆಸಿದಾಗ ಜಾಲದ ಮೂಲ ಕಲ್ಕತ್ತಾ, ಹಾಂಗ್ ಕಾಂಗ್ ಮತ್ತು ಅಮೆರಿಕದ ಕ್ಯಾಲಿಫೋರ್ನಿಯಾಕ್ಕೆ ಸಂಪರ್ಕ ಹೊಂದರುವುದು ಬೆಳಕಿಗೆ ಬಂದಿದೆ. ಹಣವನ್ನು ಬೈನಾನ್ಸ್ ಕ್ರಿಪ್ಟೋ ವಾಲೆಟ್‌ಗಳ ಮೂಲಕವೂ ವರ್ಗಾಯಿಸಲಾಗುತ್ತಿತ್ತು. ಪೊಲೀಸರು ತನಿಖೆ ತೀವ್ರಗೊಳಿಸಿದ್ದು, ಉಳಿದ ಆರೋಪಿಗಳಿಗಾಗಿ ಕಾರ್ಯಾಚರಣೆ ಕೈಗೊಂಡಿದ್ದಾರೆ.


