Friday, September 04, 2026
Menu

ಸಾಲ ಮನ್ನಾ ನೆರವು ಕೋರಿ ದೆಹಲಿಗೆ ಸರ್ವಪಕ್ಷ ನಿಯೋಗ: ಸಿಎಂ ಡಿಕೆ ಶಿವಕುಮಾರ್

“ಸಾಲ ಮನ್ನಾಕ್ಕೆ ನೆರವು ಕೋರಿ ದೆಹಲಿಗೆ ಸರ್ವಪಕ್ಷ ನಿಯೋಗ ಕರೆದೊಯ್ಯಲಾಗುವುದು” ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳಿಗೆ ಶಿವಕುಮಾರ್  ಪ್ರತಿಕ್ರಿಯೆ ನೀಡಿದರು. ಬರಗಾಲ ಎಂದು ಪ್ರಧಾನಮಂತ್ರಿಗಳೇ ಹೇಳಿದ್ದು, ಕೇಂದ್ರ ಸರ್ಕಾರ ಸಾಲಮನ್ನಾ ಮಾಡಿಸುವ ಜವಾಬ್ದಾರಿ ಹೊರಬೇಕು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಪಕ್ಷ ನಾಯಕ ಆರ್. ಅಶೋಕ್ ಹಾಗೂ ಇತರ ನಾಯಕರು  ದೆಹಲಿಗೆ ಬಂದು ಕೇಂದ್ರ ಸರ್ಕಾರದಿಂದ ಅನುದಾನ ಹಾಗೂ ರೈತರ ಸಾಲ ಮನ್ನಾಕ್ಕೆ ಒತ್ತಾಯಿಸಬೇಕು, ಬರಗಾಲಕ್ಕೆ ಕೇಂದ್ರ ಸರ್ಕಾರ ಪರಿಹಾರ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಬರಗಾಲ: ವಿಪಕ್ಷಗಳಿಂದ ರಾಜಕಾರಣ

ಬರ ಪರಿಸ್ಥಿತಿ ಕುರಿತಂತೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ. ವಿಪಕ್ಷಗಳಿಗೆ ರೈತರು ಹಾಗೂ ಬರ ಪರಿಸ್ಥಿತಿಯ ಬಗ್ಗೆ ಅಧ್ಯಯನ ಮಾಡಲು, ಚರ್ಚಿಸಲು ಕಿಂಚಿತ್ತೂ ಆಸಕ್ತಿ ಇಲ್ಲ. ಬರ ಪರಿಸ್ಥಿತಿ ಚರ್ಚೆ ಬಗ್ಗೆ ಜನತಾ ದಳ ಮತ್ತು ಬಿಜೆಪಿ ಶಾಸಕರೇ ನನ್ನ ಬಳಿ ಬಂದು ಬೇಸರ ತೋಡಿಕೊಂಡಿದ್ದಾರೆ.  ನೈಜ ಪರಿಸ್ಥಿತಿಯನ್ನು ಅಧ್ಯಯನ ಮಾಡುವ ಬದಲು ವಿಪಕ್ಷಗಳು ರಾಜಕಾರಣ ಮಾಡುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

3 ದಿನಗಳ ವಿಶೇಷ ಅಧಿವೇಶನ

ರೈತರ ಸಮಸ್ಯೆಗಳ ಕುರಿತು ಸುದೀರ್ಘ ಚರ್ಚೆ ನಡೆಸಲು ರಾಜ್ಯ ಸರ್ಕಾರವು ಮೂರು ದಿನಗಳ ವಿಶೇಷ ಅಧಿವೇಶನ ಕರೆದಿದೆ. ಈ ಅಧಿವೇಶನದಲ್ಲಿ ಸಂಪೂರ್ಣವಾಗಿ ರಾಜ್ಯದ ಬರ ಪರಿಸ್ಥಿತಿ, ರೈತರ ತೊಂದರೆಗಳು ಮತ್ತು ಪಶ್ಚಿಮ ಘಟ್ಟಗಳ ಕುರಿತಾದ ಕಸ್ತೂರಿರಂಗನ್ ವರದಿಗೆ ರಾಜ್ಯ ಸಲ್ಲಿಸಬೇಕಾದ ಆಕ್ಷೇಪಣೆಗಳ ಬಗ್ಗೆ ಮಾತ್ರ ಚರ್ಚಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ನೀತಿ ಆಯೋಗದ ಜತೆಗಿನ ಸಭೆಯಲ್ಲಿ ರಾಜ್ಯಕ್ಕೆ ಅನುದಾನ ಹಂಚಿಕೆ ಸರಿಯಾಗಿ ಆಗಬೇಕು ಎಂದು ಆಗ್ರಹಿಸಿದ್ದೀರಿ ಎಂದು ಕೇಳಿದಾಗ, ಹೊಸ ಬೆಂಗಳೂರು ನಿರ್ಮಾಣ ಮಾಡಬೇಕೆಂದು ನೀತಿ ಆಯೋಗದ ಉಪಾಧ್ಯಕ್ಷರ ಬಳಿ ಚರ್ಚಿಸಲಾಗಿದೆ. ಅದಕ್ಕೆ ಅಗತ್ಯವಿರುವ ನೆರವನ್ನು ಸರ್ಕಾರ ನೀಡಲಿದೆ. ಕರ್ನಾಟಕ , ಬೆಂಗಳೂರು ಬಹಳ ಮುಖ್ಯ ಎಂದೂ ಅವರು ಹೇಳಿದ್ದಾಗಿ ತಿಳಿಸಿದರು.

ಕರ್ನಾಟಕ ಸರ್ಕಾರಿ ಉದ್ಯಾನವನಗಳ (ಸಂರಕ್ಷಣೆ) ತಿದ್ದುಪಡಿ ವಿಧೇಯಕವನ್ನು ವಾಪಸ್ ಪಡೆದಿರುವ ಕುರಿತು ಸಿಎಂ ‘ಯು-ಟರ್ನ್’ ಮಾಡಿದ್ದಾರೆ ಎಂಬ ಆರೋಪಗಳ ಬಗ್ಗೆ ಕೇಳಿದಾಗ, ನಾನು ಯೂಟರ್ನ್ ಏಕೆ ಮಾಡಬೇಕು. ಜನರ ಭಾವನೆಗಳಿಗೆ ಬೆಲೆ ನೀಡಲಾಗಿದೆ. ಯಡಿಯೂರಪ್ಪ, ಬೊಮ್ಮಾಯಿ  ಕಾಲದಲ್ಲಿ ಏನಾಗಿದೆ ಎಂಬ ಪಟ್ಟಿ ಬಿಡುಗಡೆ ಮಾಡುತ್ತೇವೆ. ಲಾಲ್ ಬಾಗ್ ನಲ್ಲಿಯೇ ಟನಲ್ ಮಾಡಬೇಕೆಂಬ ಉದ್ದೇಶವಿಲ್ಲ. ಇದಕ್ಕೆ ಪರ್ಯಾಯ ಮಾರ್ಗವನ್ನು ಪರಿಶೀಲಿಸಲಾಗುವುದು. ಹಿಂದೆ ಸಿದ್ದರಾಮಯ್ಯನವರು ಸ್ಟೀಲ್ ಬ್ರಿಡ್ಜ್ ಮಾಡಲು ಹೊರಟಾಗಲು ಬಿಜೆಪಿ ವಿರೋಧಿಸಿತ್ತು.  ಅವರ ಕಾಲದಲ್ಲಿ ಒಂದು ಯಾವುದಾದರೂ ಈ ರೀತಿಯ ಗುರುತರ ಯೋಜನೆ ಪಾರಂಭಿಸಿದ್ದರೆ ತಿಳಿಸಲಿ. ಬೆಂಗಳೂರಿನ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಟನಲ್ ರಸ್ತೆ, ಡಬಲ್ ಡೆಕ್ಕರ್ ಮಾರ್ಗಗಳು, ಯೋಜನೆಗಳು ಅತ್ಯಗತ್ಯ. ಟನಲ್ ರಸ್ತೆ ಬೇಡ ಎನ್ನುವವರು ಅದಕ್ಕೆ ಪರ್ಯಾಯ ಏನು ಎಂಬುದನ್ನು ಹೇಳಬೇಕಲ್ಲವೇ ಎಂದು ಸವಾಲು ಹಾಕಿದರು.

ನಾನು ಸಿಎಂ ಸ್ಥಾನದಲ್ಲಿ ಕೂತು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಕೇಂದ್ರ ಸಚಿವ ಕುಮಾರಸ್ವಾಮಿ, ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಬಳಸುವ ಪದಗಳನ್ನು ಬಳಸಲಾಗುವುದಿಲ್ಲ. ನಾಲಿಗೆಯ ಮೇಲೆ ಹತೋಟಿ ಇರಲಿ ಎಂದು ನಮ್ರತೆಯಿಂದ ಹೇಳುತ್ತಿದ್ದೇನೆ. ನಿಮ್ಮ ತಂದೆ ಕೂಡ ಇದೇ ಸ್ಥಾನ ಅಲಂಕರಿಸಿದ್ದರು ಎನ್ನುವ ಪರಿವೆ ಇರಲಿ.  ಬೇಡಿಕೆಗಳನ್ನು ಕೇಳಲಿ, ಅದರಲ್ಲಿ ತಪ್ಪಿಲ್ಲ. ಈ ಬಗ್ಗೆ ಸದನದಲ್ಲಿ ವಿಸ್ತೃತ ಚರ್ಚೆಗೆ ಅವಕಾಶ ಮಾಡಿಕೊಡಲು ಮಾತ್ರ ವಿಧೇಯಕ ಹಿಂಪಡೆಯಲಾಗಿದೆ ಎಂದರು.

ಚರ್ಚೆ ಮಾಡಬೇಕೆನ್ನುವ ಕಾರಣದಿಂದ ವಿಧೇಯಕವನ್ನು ಹಿಂಪಡೆಯಲಾಗಿದೆ. 16.5 ಕಿ.ಮೀ ಟನಲ್ ರಸ್ತೆ ಯೋಜನೆಗಾಗಿ ಲಾಲ್‌ಬಾಗ್ ಜಾಗವನ್ನು ಕಬಳಿಸುವ ಯಾವುದೇ ಉದ್ದೇಶ ಸರ್ಕಾರಕ್ಕಿಲ್ಲ. ನಾವು ಉದ್ಯಾನಗಳನ್ನು ಮಾರಾಟ ಮಾಡುತ್ತಿಲ್ಲ. ಮೆಟ್ರೋಗೆ ಜಾಗ ಕೊಡಲು ಭೂಮಿಯನ್ನು ವರ್ಗಾಯಿಸಬೇಕು ಎಂದು ಸ್ಪಷ್ಟಪಡಿಸಿದರು.

ನಾವು ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತೇವೆ, ಅದರಿಂದ ಅವರ ವೈಫಲಯಗಳು ಬಯಲಾಗುತ್ತವೆ ಎಂದು ತಿಳಿದೇ ಅಧಿವೇಶನವನ್ನು ನಡೆಸಲು ವಿರೋಧ ಪಕ್ಷದವರು ಬಿಡಲಿಲ್ಲ ಎಂದು ತಿಳಿಸಿದರು. ಜೆಪಿ ಪಾರ್ಕ್ ಸೇರಿದಂತೆ ಎಲ್ಲಾ ಸ್ಥಳಗಳ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ. ಅನಾವಶ್ಯಕವಾಗಿ ನನ್ನನ್ನು ಕೆಣಕುವುದು ಬೇಡ ಎಂದು ತಿರುಗೇಟು ನೀಡಿದರು.  ಸಲಹೆ ಸ್ವೀಕಾರ ಮಾಡಿದರೆ ಯೂ ಟರ್ನ್ ಮಾಡಿದ್ದೇನೆ ಎಂದಾಗುತ್ತದೆಯೇ ಎಂದು ಪ್ರಶ್ನಿಸಿದರು.

ಸಚಿವ ನಾಗೇಂದ್ರ ಅವರು ಸ್ವಯಂ ಪ್ರೇರಿತರಾಗಿ ರಾಜೀನಾಮೆ ನೀಡಿದರು. ಆದರೂ ಪಾದಯಾತ್ರೆ ಮಾಡುತ್ತಿದ್ದಾರೆ. ನನ್ನ ಯಾತ್ರೆಯನ್ನೂ ನೀವು ನೋಡಿ ಎಂದರು.

ಸರ್ಕಾರದ ಮತ್ತೊಂದು ವಿಕೆಟ್ ಪತನವಾಗಲಿದೆ ಎಂದು ವಿರೋಧ ಪಕ್ಷದವರು ಹೇಳುತ್ತಿದ್ದಾರೆ ಎಂದು ಕೇಳಿದಾಗ, ನನ್ನನ್ನೇ ಪತನ ಮಾಡುವುದಾಗಿ ಕೆಲವರು ಹೇಳಿದ್ದಾರೆ. ತಪ್ಪು ಮಾಡಿದ್ದರೆ ಎಲ್ಲರೂ ಶಿಕ್ಷೆಗೆ ಒಳಗಾಗಬೇಕು, ಅದಕ್ಕೆ ನಾನೂ ಹೊರತಾಗಿಲ್ಲ ಎಂದು ಸಿಎಂ ಉತ್ತರಿಸಿದರು.

ಪ್ರಾಸಿಕ್ಯೂಷನ್ ಅನುಮತಿ: ಪರಿಶೀಲನೆ ಬಾಕಿ ಇದೆ

ನಾನು ಪ್ರಾಸಿಕ್ಯೂಷನ್ ಅನುಮತಿ, ಬಗ್ಗೆ ಯೋಚನೆ ಮಾಡಿಲ್ಲ. ಬಿ. ನಾಗೇಂದ್ರ, ಜಿ. ಜನಾರ್ದನ ರೆಡ್ಡಿ ಹಾಗೂ ಎಂ.ಪಿ. ರೇಣುಕಾಚಾರ್ಯ ಸೇರಿದಂತೆ ಹಲವು ನಾಯಕರ ಪ್ರಾಸಿಕ್ಯೂಷನ್‌ಗೆ ಸಂಬಂಧಿಸಿದಂತೆ ರಾಜ್ಯಪಾಲರಿಂದ ಕಡತಗಳು ಬಂದಿವೆ.  ಇನ್ನೂ ಕಾನೂನಾತ್ಮಕವಾಗಿ ಪರಿಶೀಲಿಸಿಲ್ಲ.  ಈ ಬಗ್ಗೆ ಯಾವುದೇ ಆತುರದ ನಿರ್ಧಾರ ಕೈಗೊಳ್ಳಲಾಗುವುದಿಲ್ಲ ಎಂದು ಹೇಳಿದರು.

ವಿಪಕ್ಷಗಳು ದೆಹಲಿ, ಮಹಾರಾಷ್ಟ್ರಗಳಲ್ಲಿ ಟನಲ್ ನಿಲ್ಲಿಸಲಿ. ಜಾರ್ಜ್ ಅವರ ಕಾಲದಲ್ಲಿ ಸ್ಟೀಲ್ ಸೇತುವೆಯನ್ನು ನಿಲ್ಲಿಸಿದರು. ವಾಹನಗಳನ್ನು ನಿಲ್ಲಿಸಿ ಎಂದು ಹೇಳಲಾಗುತ್ತದೆಯೇ? ಮೆಟ್ರೋಗೆ ಏನು ಬೇಕೋ ಅದನ್ನು ಮಾಡುತ್ತಿದ್ದೇವೆ. 40 ಕಿ.ಮೀ ಡಬಲ್ ಡೆಕ್ಕರ್ ಯೋಜನೆಗೆ ಅನುಮತಿ ಕೇಳಿದರೆ, 13 ಕಿ.ಮೀ ಮಾತ್ರ ಮಾಡಿ ಎಂದಿದ್ದಾರೆ. ಡಬಲ್ ಡೆಕ್ಕರ್ ನಿಂದ ಮೇಲ್ಸೇತುವೆಯಲ್ಲಿ ಕಾರು ಹಾಗೂ ಇತರೆ ವಾಹನ ಸಾಗುತ್ತದೆ. ಅದರ ಮೇಲೆ ಮೆಟ್ರೋ ಹೋಗುತ್ತಿತ್ತು. ಆದರೂ ಆದರೂ ಅನುಮತಿ ನೀಡಲು ಹಿಂದೇಟು ಹಾಕುತ್ತಾರೆ. ಇದು ಬಿಜೆಪಿಯ ನಿಲುವು. ಚೆನ್ನೈನಲ್ಲಿ 20 ಕಿ.ಮೀ ಡಬ್ಬಲ್ ಡೆಕ್ಕರ್ ಇದೆ ಎಂದು ಮುಖ್ಯಮಂತ್ರಿ ವಿವರಿಸಿದರು.

ಕಸ್ತೂರಿ ರಂಗನ್ ವರದಿ

ಕಸ್ತೂರಿ ರಂಗನ್ ವರದಿಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರಸ್ಕರಿಸಿದರು. ಕೆಲವು ಜಿಲ್ಲೆ ಗ್ರಾಮಗಳಿಗೆ ಇದರಿಂದ ಪರಿಣಾಮ ಬೀರಲಿದೆ ಎಂದು ವಿಚಾರ ಮಾಡಬೇಕಿದೆ. ಇದು ರಾಜ್ಯದ ಹಿತಾಸಕ್ತಿಯ ವಿಚಾರ. ಹೀಗಾಗಿ ಈ ಬಗ್ಗೆ ಚರ್ಚೆಗೆ ಅಧಿವೇಶನ ಕರೆಯಲಾಗಿದೆ ಎಂದರು.

Related Posts

Leave a Reply

Your email address will not be published. Required fields are marked *