ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅಧ್ಯಕ್ಷತೆಯಲ್ಲಿ ಮೈಸೂರು ದಸರಾ ಆಚರಣೆ ಕುರಿತ ಪ್ರಗತಿ ಪರಿಶೀಲನಾ ಸಭೆ ನಡೆದಿದ್ದು, ಮೈಸೂರು ದಸರಾಗೆ ದಕ್ಷಿಣ ಭಾರತದ ಎಲ್ಲ ಸಿಎಂಗಳಿಗೆ ಆಹ್ವಾನ ನೀಡಲು ತೀರ್ಮಾನಿಸಲಾಗಿದೆ.
ರಾಜ್ಯಗಳ ಕಲಾತಂಡಗಳ ಪ್ರದರ್ಶನ ನೀಡಲು ಆಹ್ವಾನಕ್ಕೆ ನಿರ್ಧರಿಸಿದ್ದು, ಏರ್ ಷೋ ನಡೆಸುವ ಬಗ್ಗೆ ಕೇಂದ್ರ ರಕ್ಷಣಾ ಸಚಿವರ ಜೊತೆ ಸಿಎಂ ಚರ್ಚೆ ನಡೆಸುವುದಾಗಿ ತೀರ್ಮಾನ ಕೈಗೊಳ್ಳಲಾಗಿದೆ. ಏರ್ ಷೋ, ಭೂ ಸೇನೆ, ವಾಯುಸೇನೆ ಹಾಗೂ ನೌಕಾಪಡೆಗಳಿಂದ ಟ್ಯಾಬ್ಲೋದಲ್ಲಿ ಹಾಗೂ ಕವಾಯತಿನಲ್ಲಿ ಭಾಗವಹಿಸಲು ತಂಡಗಳನ್ನು ಕಳುಹಿಸುವಂತೆ ಮನವಿ ಮಾಡಲು ನಿರ್ಧರಿಸಲಾಯಿತು.
ದಸರಾದಲ್ಲಿ ಟಿಕೆಟ್ ಪಡೆದವರಿಗೆ ಸೂಕ್ತ ಆಸನ ವ್ಯವಸ್ಥೆಗೆ ಆದ್ಯತೆ ನೀಡಲು, ವಿವಿಧ ದೇಶಗಳ ರಾಯಭಾರಿಗಳು, ಅಧಿಕಾರಿಗಳನ್ನು ಆಹ್ವಾನಿಸಲು, ಚಿತ್ರಸಂತೆ, ಫ್ಲೀ ಮಾರ್ಕೆಟ್, ವಿಂಟೇಜ್ ಕಾರ್ ರ್ಯಾಲಿ, ರಂಗೋಲಿ ಸ್ಪರ್ಧೆ ಮತ್ತಿತರ ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಸಭೆಯಲ್ಲಿ ಸಂಬಂಧಿಸಿದವರಿಗೆ ಸೂಚನೆ ನೀಡಲಾಯಿತು. ಜಿಲ್ಲಾ ಉಸ್ತುವಾರಿ ಸಚಿವರ ಜೊತೆಗೆ, ಕಾರ್ಯಕ್ರಮಗಳ ಮೇಲ್ವಿಚಾರಣೆಗೆ ಪ್ರತಿ ದಿನ ಒಬ್ಬ ಸಚಿವರನ್ನು ನಿಯೋಜಿಸಲು ನಿರ್ದೇಶನ ನೀಡಲಾಗಿದೆ. .
ದಸರಾ ಜಂಬೂಸವಾರಿಯ ಸ್ತಬ್ಧಚಿತ್ರ ಪ್ರದರ್ಶನದಲ್ಲಿ ಭಾಗವಹಿಸಲು ಭಾರತೀಯ ಸೇನಾಪಡೆಗಳು, ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು, ಚಲನಚಿತ್ರ ವಾಣಿಜ್ಯ ಮಂಡಳಿ, ಇಸ್ರೋ, ಡಿ.ಆರ್. ಡಿ. ಒ ಸೇರಿದಂತೆ ಕೇಂದ್ರ ಸರ್ಕಾರದ ವಿವಿಧ ಸಂಸ್ಥೆಗಳಿಗೆ ಆಹ್ವಾನ ನೀಡಲು ತೀರ್ಮಾನಿಸಲಾಯಿತು. ರಾಜ್ಯದ ಎಲ್ಲ ಭಾಗಗಳನ್ನು ಪ್ರತಿನಿಧಿಸುವ ಕಲಾ ತಂಡಗಳಿಗೆ ಅವಕಾಶ ನೀಡಲು ಮತ್ತು ಮೈಸೂರಿನ ಅರಮನೆ ಮತ್ತಿತರ ಪ್ರಮುಖ ತಾಣಗಳ ಕುರಿತು ಕಿರುಚಿತ್ರ ನಿರ್ಮಿಸಿ ವ್ಯಾಪಕ ಪ್ರಚಾರ ನೀಡಲು ಸಿಎಂ ಸೂಚಿಸಿದರು.


