ಮೊಬೈಲ್ ವಿಚಾರಕ್ಕೆ ಸೋದರರಿಬ್ಬರು ಜಗಳವಾಡಿ ತಮ್ಮ ಅಣ್ಣನನ್ನು ಕೊಂದಿರುವ ಘಟನೆ ಮಂಗಳೂರಿನ ಕೊಟ್ಟಾರ ಕ್ರಾಸ್ ಬಳಿ ನಡೆದಿದೆ. ನಲ್ವತ್ತು ವರ್ಷದ ಅಡಿವಪ್ಪ ಎಂಬವರನ್ನು ತಮ್ಮ ರಾಜು ಎಂಬಾತ ಕೊಲೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಸೋದರರು ಸೇರಿದಂತೆ ಬೆಳಗಾವಿ ಬೈಲಹೊಂಗಲದ ಕುಟುಂಬ ಕೊಟ್ಟಾರ ಕ್ರಾಸ್ ಬಳಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ತಾಯಿ ರಸ್ತೆ ಬದಿ ಅಂಗಡಿ ನಡೆಸುತ್ತಿದ್ದರೆ, ಸೋದರರು ದಿನಗೂಲಿಗಳಾಗಿ ದುಡಿಯುತ್ತಿದ್ದರು.
ಸೋದರರು ಮದ್ಯದ ಚಟ ಹೊಂದಿದ್ದು, ಭಾನುವಾರ ರಾತ್ರಿ ಮೊಬೈಲ್ ಫೋನ್ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದು ಕೊಲೆಯಲ್ಲಿ ಅಂತ್ಯ ಕಂಡಿದೆ. ಜಗಳದ ಸಮಯ ತಮ್ಮ ಅಣ್ಣ ಅಡಿವಪ್ಪನನ್ನು
ಚಾಕುವಿನಿಂದ ಇರಿದಿದ್ದಾಗಿ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಅಂಗಡಿ ಮುಚ್ಚಿದ ನಂತರ ಅವರ ತಾಯಿ ಮನೆಗೆ ಹಿಂತಿರುಗಿದಾಗ ಅಡಿವಪ್ಪ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ನೋಡಿ ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಷ್ಟರಲ್ಲಿ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ.
ಉರ್ವ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಾಜು ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.


