ನಾಡಿನ ನೆಲ, ಜಲ, ಭಾಷೆಗಳ ವಿಚಾರಗಳು ಯಾವುದೇ ಪಕ್ಷ, ಧರ್ಮ ಜಾತಿಗೆ ಸೇರಿಲ್ಲ. ಇದರಲ್ಲಿ ನಾವೆಲ್ಲರೂ ಒಗ್ಗಟ್ಟಾಗಿರಬೇಕು. ಗ್ರಾಮೀಣ ರೈತರನ್ನು ಸಶಕ್ತರನ್ನಾಗಿಸುವುದು ನಮ್ಮ ಕರ್ತವ್ಯ. ಕರ್ನಾಟಕವು ಮೇಕೆದಾಟು ಯೋಜನೆಯನ್ನು ಕೈಗೊಳ್ಳಲು ಪೂರಕ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡಿದೆ. ಯೋಜನೆಗೆ 5,400 ಹೆಕ್ಟೇರ್ ಜಮೀನು ಅಗತ್ಯವಿದ್ದು, ಇದಕ್ಕೆ ಪರ್ಯಾಯವಾಗಿ ಜಮೀನು ನೀಡಲು ಈಗಾಗಲೇ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಯೋಜನೆಯನ್ನು ಜಾರಿಗೊಳಿಸಲು ಸರ್ವಪಕ್ಷಗಳ ನಾಯಕರೂ ಸಹಕರಿಸುವುದಾಗಿ ತಿಳಿಸಿದ್ದಾರೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.
ಮೈಸೂರಿನ ಸುತ್ತೂರು ಶಾಖಾ ಮಠದಲ್ಲಿ ನಡೆದ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮಿಗಳ 111 ನೇ ಜಯಂತಿ ಮಹೋತ್ಸವ ಉದ್ಘಾಟಿಸಿ ಮಾತನಾಡಿದರು. ಚೆನ್ನೈನಲ್ಲಿ ಕೇಂದ್ರ ಗೃಹ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಮೇಕೆದಾಟು ಯೋಜನೆ ಕರ್ನಾಟಕಕ್ಕೆ ಮಾತ್ರವಲ್ಲ, ತಮಿಳುನಾಡಿಗೂ ಅನುಕೂಲವಾಗಲಿದೆ ಎಂಬುದನ್ನು ಮನವರಿಕೆ ಮಾಡಿದ್ದೇನೆ. ಈ ಬಗ್ಗೆ ತಮಿಳುನಾಡು ಮುಖ್ಯಮಂತ್ರಿ ಚರ್ಚೆಗೆ ಮುಂದಾಗಿದ್ದಾರೆ. ತುಂಗಭದ್ರಾ ವಿಚಾರದಲ್ಲಿ ತೆಲಂಗಾಣ, ಆಂಧ್ರ ಜೊತೆ ಸೇರಿ ಚರ್ಚಿಸಲಾಗಿದೆ. ಆಲಮಟ್ಟಿ, ಕೆಆರ್ ಎಸ್ ನಲ್ಲಿ ಹೂಳು ಎತ್ತಲು ಕೇಂದ್ರ ಸರ್ಕಾರ ಹೊಸ ನೀತಿ ರೂಪಿಸುವುದಾಗಿ ತಿಳಿಸಿದೆ. ಮೊದಲ ಬಾರಿಗೆ ಮೂರು ರಾಜ್ಯದ ಮುಖ್ಯಮಂತ್ರಿಗಳು ಸೇರಿ ಅಂತರಾಜ್ಯ ನೀರಾವರಿ ವಿಚಾರದಲ್ಲಿ ಒಮ್ಮತಕ್ಕೆ ಬಂದಿರುವುದು, ಐತಿಹಾಸಿಕ ಬೆಳವಣಿಗೆ ಎಂದರು.
ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾದ ನಂತರ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದಿದ್ದೆ. ‘ನಮ್ಮ ನೀರು ನಮ್ಮ ಹಕ್ಕು’ ಹೋರಾಟಕ್ಕೆ ಸುತ್ತೂರು ಶ್ರೀಗಳು ಬೆಂಬಲ ಸೂಚಿಸಿದ್ದರು. ಈ ಹೋರಾಟ ಯಶಸ್ವಿಯಾಯಿತು. ಸುಪ್ರೀಂ ಕೋರ್ಟ್ ಕೂಡ, ಕರ್ನಾಟಕದಲ್ಲಿ ಮೇಕೆದಾಟು ಯೋಜನೆ ಕೈಗೊಳ್ಳಲು ಯಾವುದೇ ರಾಜ್ಯದ ಅನುಮತಿ ಬೇಕಿಲ್ಲ. ಈ ಯೋಜನೆಯನ್ನು ಕೈಗೊಳ್ಳಬಹುದು ಎಂದು ಹೇಳಿತು. ಇದೇ ಉತ್ತರವನ್ನು ಕೇಂದ್ರ ಸರ್ಕಾರವೂ ಸದನದಲ್ಲಿ ತಿಳಿಸಿದೆ ಎಂದು ವಿವರಿಸಿದರು.
ಸರ್ಕಾರಿ ರಸ್ತೆಗಳ ಇಕ್ಕೆಲಗಳಲ್ಲಿ ಇರುವ ರೈತರ ಹಾಗೂ ಸರ್ಕಾರಿ ಜಮೀನಿನಲ್ಲಿ ಅರಣ್ಯ ಇಲಾಖೆಯಿಂದ ತೇಗದ ಸಸಿಗಳನ್ನು ನೆಟ್ಟು ರೈತರೇ ಪೋಷಿಸುವ ‘ತೇಗದ ಸಿರಿ’ ಯೋಜನೆ ಜಾರಿಗೆ ತರಲಾಗುವುದು. ಈ ಯೋಜನೆಯಡಿ ವರ್ಷಕ್ಕೆ 1 ಕೋಟಿ ತೇಗದ ಸಸಿ ನೆಡಲಾಗುವುದು ಎಂದು ಹೇಳಿದರು.
ರ್ಕಾರಿ ರಸ್ತೆಗಳ ಅಕ್ಕಪಕ್ಕದ ಪ್ರತಿಯೊಬ್ಬರ ಜಮೀನಿನಲ್ಲೂ ತೇಗದ ಸಸಿಗಳನ್ನು ನೆಡಬೇಕು. ಅಲ್ಲದೇ, ಜಮೀನಿನ ಮಾಲೀಕರು ಆ ತೇಗದ ಸಸಿಯ ನಿರ್ವಹಣೆ ಹೊರಬೇಕು. ಅದರಿಂದ ಬರುವ ಲಾಭವನ್ನು ಶೇ. 70 ರಷ್ಟು ರೈತರು ಅಥವಾ ಭೂ ಮಾಲೀಕರಿಗೆ ಮತ್ತು ಸರ್ಕಾರಕ್ಕೆ ಶೇ 30ರಷ್ಟು ಹಂಚಲಾಗುವ ವಿಶಿಷ್ಟ ಯೋಜನೆಯನ್ನು ರೂಪಿಸಲಾಗುತ್ತಿದೆ ಎಂದರು.
ಕಿರಿಯ ವಯಸ್ಸಿನಲ್ಲಿಯೇ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನು ಮಾಡಿ ತ್ರಿವಿಧ ದಾಸೋಹಗಳಲ್ಲಿ ಸಾರ್ಥಕತೆಯನ್ನು ಕಂಡವರು ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು. ಇವರ ಜಯಂತೋತ್ಸವದಲ್ಲಿ ಭಾಗವಹಿಸುತ್ತಿರುವುದು ನನ್ನ ಸೌಭಾಗ್ಯ. ಸಾಂಸ್ಕೃತಿಕ, ಸಾಮಾಜಿಕ ಸೇವೆಯಲ್ಲಿ ನಿರತರಾದ ಮಹನೀಯರನ್ನು ನೆನೆವುದು ನಮ್ಮೆಲ್ಲರ ಕರ್ತವ್ಯ ಎಂದು ಸ್ಮರಿಸಿದರು.
ಜಾತಿವರ್ಗಗಳ ಬೇಧವಿಲ್ಲದೇ ಮಠಗಳಿಂದ ಜನರು ಅನುಕೂಲ ಕಾಣುತ್ತಿದ್ದಾರೆ. ದಕ್ಷಿಣ ಭಾರತದಲ್ಲಿನ ಶಿಕ್ಷಣ ಕ್ರಾಂತಿಗೆ ಮಠ ಮಾನ್ಯಗಳು ಮಹತ್ತರ ಕೊಡುಗೆ ನೀಡಿದೆ. ಕರ್ನಾಟಕ ಶೈಕ್ಷಣಿಕ ಕೇಂದ್ರ. ಇಲ್ಲಿನ ಜ್ಞಾನಸಂಪತ್ತು, ಮಾನವ ಸಂಪನ್ಮೂಲಗಳು ಉತ್ತಮವಾಗಿವೆ ಎಂದು ಅನೇಕ ಮಹನೀಯರು ತಿಳಿಸಿದ್ದಾರೆ. ರಾಜ್ಯದಲ್ಲಿ 46,302 ಸರ್ಕಾರಿ ಪ್ರಾಥಮಿಕ ಶಾಲೆ, 24,000 ಸಾವಿರ ಖಾಸಗಿ ಶಾಲೆಗಳಿವೆ. ಅದರಲ್ಲಿ 36 ಲಕ್ಷ ವಿದ್ಯಾರ್ಥಿಗಳು ಸರ್ಕಾರಿ ಶಾಲೆಯಲ್ಲಿ ಹಾಗೂ 57 ಲಕ್ಷ ವಿದ್ಯಾರ್ಥಿಗಳು ಖಾಸಗಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಹಾಗೂ ಮಠಮಾನ್ಯಗಳು, ಸರ್ಕಾರದ ಶಿಕ್ಷಣ ಕ್ರಾಂತಿಗೆ ಕೈಜೋಡಿಸದಿದ್ದರೆ, ಕರ್ನಾಟಕವನ್ನು ಅಭಿವೃದ್ಧಿಶೀಲ ರಾಜ್ಯವಾಗಿಸಲು ಸಾಧ್ಯವಾಗುತ್ತಿರಲಿಲ್ಲ. ಸರ್ಕಾರವೊಂದರಿಂದಲೇ ಸಾಧ್ಯವಾಗದ ಕೆಲಸದಲ್ಲಿ ಮಠಮಾನ್ಯಗಳೂ ಕೈಜೋಡಿಸಿವೆ ಎಂದರು.
ಸುತ್ತೂರಿನ ಶಿವರಾತ್ರಿ ದೇಶಿಕೇಂದ್ರ ಶ್ರೀಗಳು ನನ್ನ ಕಷ್ಟಸುಖಗಳಲ್ಲಿ ನನಗೆ ಮಾರ್ಗದರ್ಶನ ಮಾಡಿದ್ದಾರೆ. ಮಾನವ ಧರ್ಮವೇ ಹಿರಿದು, ಮಾನವೀಯತೆಯೇ ಪರಮ ಧರ್ಮ ಎಂಬ ಶ್ರೀಗಳ ಮಾರ್ಗದರ್ಶನವನ್ನು ಪಾಲಿಸುತ್ತಾ ಬಂದಿದ್ದೇನೆ. ಜಾತಿಧರ್ಮಗಳ ಭೇದಗಳನ್ನ ಎಣಿಸದೇ ಸಮಾಜದ ಐಕ್ಯತೆಗೆ ಒತ್ತು ನೀಡಬೇಕು. ಧರ್ಮ ಎಂದರೆ ಮನುಷ್ಯತ್ವ, ದಾಸೋಹವೆಂದರೆ ಮನುಷ್ಯತ್ವದ ಬೆಳವಣಿಗೆ ಎಂದು ಹೇಳಿದರು.
ಶ್ರೀಮಠಗಳು ಸಮಾಜದ ಋಣವನ್ನು ತೀರಿಸುತ್ತಿವೆ. ಮನುಷ್ಯನ ತನ್ನ ನಾಲ್ಕು ಋಣವನ್ನು ತೀರಿಸುವಂತೆ , ಶ್ರೀಗಳು ಈ ಋಣಗಳನ್ನು ಧರ್ಮಕಾರ್ಯಗಳ ಮೂಲಕ ತೀರಿಸುತ್ತಿದ್ದಾರೆ. ಧರ್ಮೋಪಕಾರಗಳು ನಮ್ಮ ಬದುಕಾಗಬೇಕು. ದೇವರು ಅವಕಾಶಗಳನ್ನು ಕೊಡುತ್ತಾನೆ. ಅಂತೆಯೇ ನನಗೆ ದೊರಕಿರುವ ಜನರಿಗೆ ಸೇವೆ ಮಾಡುವ ಅವಕಾಶವನ್ನು ಬಳಸಿಕೊಳ್ಳುವ ಆಶಯವಿದೆ ಎಂದು ತಿಳಿಸಿದರು.
ಬಂಗಾರಪ್ಪ ಅವರ ಕಾಲದಲ್ಲಿ ಜಾರಿಯಾಗಿದ್ದ ರೈತರ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡುವ ಯೋಜನೆಗೆ, ಪ್ರಸ್ತುತ 20 ಸಾವಿರ ಕೋಟಿ ನೀಡಲಾಗುತ್ತಿದೆ. ಪಂಚ ಗ್ಯಾರಂಟಿಗಳಿಗೆ 52 ಸಾವಿರ ಕೋಟಿಗಳಾಗುತ್ತಿದೆ. ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಶಕ್ತಿ, ಯುವನಿಧಿಗಳ ಮೂಲಕ ಜನರಿಗೆ ನೆಮ್ಮದಿಯ ಬದುಕು ನೀಡಲಾಗುತ್ತಿದೆ. ಆದರೆ ಈ ಯೋಜನೆಗೆ ಪ್ರತಿಪಕ್ಷಗಳು ವಿರೋಧಿಸಿದರೂ, ನಂತರ ಇತರೆ ರಾಜ್ಯಗಳೂ ಗ್ಯಾರಂಟಿಗಳನ್ನು ಅನುಕರಿಸಿದವು. ಮಹಾರಾಷ್ಟ್ರದಲ್ಲಿಯೂ ಗ್ಯಾರಂಟಿಗಳನ್ನು ಘೋಷಿಸಿದ್ದರೂ, ಅವರಿಗೆ ನಮ್ಮಂತೆ ನುಡಿಯಲು ಸಾಧ್ಯವಾಗಲಿಲ್ಲ. ಕೊಟ್ಟ ಮಾತನ್ನು ಈಡೇರಿಸುವವನೇ ನಿಜವಾದ ನಾಯಕ. ನಮ್ಮ ಸರ್ಕಾರ ನುಡಿದಂತೆ ನಡೆದಿದ್ದೇವೆ ಎಂದರು.

