ನೇಪಾಳದಲ್ಲಿ ಬುಧವಾರ ಭೀಕರ ಪ್ರವಾಹ ಮತ್ತು ಭೂಕುಸಿತದಲ್ಲಿ ಜಗ್ಗಿ ವಾಸುದೇವ್ ನಡೆಸುತ್ತಿರುವ ಇಶಾ ಫೌಂಡೇಷನ್‌ನ ೭೭ ಯಾತ್ರಿಗಳು ನಾಪತ್ತೆಯಾಗಿದ್ದಾರೆ. ಟಿಬೆಟ್ ಮಾನಸ ಕೈಲಾಸ ಸರೋವರ ಯಾತ್ರೆ ಮುಗಿಸಿ ವಾಪಸಾಗುತ್ತಿದ್ದ ಯಾತ್ರಿಗಳ ತಂಡವು ವಲಸೆ ಕಚೇರಿಯಲ್ಲಿದ್ದಾಗ ಈ ದುರಂತ ಸಂಭವಿಸಿರುವುದಾಗಿ ಜಗ್ಗಿ ವಾಸುದೇವ್ ಮಸಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಟಿಬೆಟ್‌ನ ಗೈರಿಯಾಂಗ್ ಬಂದರು ಪ್ರದೇಶದಲ್ಲಿ ಬೃಹತ್ ಅಲೆ ಉಕ್ಕಿ ಬಂದು, ರಾಸುವಾ ಕಡೆಗೆ ಸಾಗುವ ಮೊದಲು ವಲಸೆ ಕಚೇರಿಯ ಮೇಲೆ ಅಪ್ಪಳಿಸಿ ಕುಸಿಯುವ ದೃಶ್ಯಗಳು ವೈರಲ್ ಆಗಿದ್ದು, ಈ ಅಲೆ ಭೋಟೆ ಕೋಸಿ ನದಿಯ ಉದ್ದಕ್ಕೂ ವ್ಯಾಪಕ ಹಾನಿ ಮಾಡಿದೆ.
ಈ ವೀಡಿಯೊವನ್ನು ಹಂಚಿಕೊಂಡಿರುವ ಜಗ್ಗಿ ವಾಸುದೇವ್ ಅವರು, ಕೈಲಾಸದಿಂದ ಹಿಂತಿರುಗುತ್ತಿದ್ದ ತಮ್ಮ ತಂಡವು ಟಿಬೆಟ್‌ನ ಗೈರಿಯಾಂಗ್‌ನಲ್ಲಿ ಎದುರಿಸಿದ ದುರಂತದ ಬಗ್ಗೆ ಮಾಹಿತಿ ನೀಡಿದ್ದಾರೆ. ಚೀನಾದ ಟಿಬೆಟ್‌ನಲ್ಲಿರುವ ಗೈರಿಯಾಂಗ್‌ನಲ್ಲಿ ಹಠಾತ್ ಪ್ರವಾಹ ಸಂಭವಿಸಿದೆ ಮತ್ತು ನಮ್ಮ ಕೈಲಾಸ ಯಾತ್ರಾ ತಂಡಗಳಲ್ಲಿ ಒಂದು ಈ ಪ್ರವಾಹಕ್ಕೆ ಸಿಲುಕಿದೆ. ವಲಸೆ ಕಚೇರಿಯಲ್ಲಿದ್ದಾಗ ಪ್ರವಾಹ ಉಂಟಾಗಿದ್ದು, ಕಟ್ಟಡ ಮತ್ತು ಪಟ್ಟಣದ ಬಹುಭಾಗವು ಪ್ರವಾಹದ ನೀರಿನಲ್ಲಿ ಮುಳುಗಿರುವಂತೆ ತೋರುತ್ತಿದೆ ಎಂದು ಹೇಳಿದ್ದಾರೆ.
ಯಾತ್ರೆಯ ಭಾಗವಾಗಿದ್ದ 21 ಗುಂಪುಗಳಲ್ಲಿ 495 ಮಂದಿ ಈಗಾಗಲೇ ಸುರಕ್ಷಿತವಾಗಿ ಹಿಂದಿರುಗಿದ್ದಾರೆ. 743 ಮಂದಿ ಸದ್ಯ ಟಿಬೆಟ್‌ನಲ್ಲಿದ್ದರೆ, 148 ಮಂದಿ ನೇಪಾಳದಲ್ಲಿದ್ದಾರೆ. ಮೂವರು ಸ್ವಯಂಸೇವಕರು ನೇಪಾಳದ ತಿಮುರೆಯಲ್ಲಿದ್ದಾರೆ.
ನೇಪಾಳ ಪ್ರವಾಸೋದ್ಯಮ ಮಂಡಳಿ ಕಣ್ಮರೆಯಾಗಿದ್ದಾರೆ ಎಂದು ವರದಿ ಮಾಡಿರುವ ಕೈಲಾಸ ಯಾತ್ರಾರ್ಥಿಗಳಾದ 105 ಭಾರತೀಯರಲ್ಲಿ ವಲಸೆ ಕಚೇರಿಯಲ್ಲಿದ್ದ 77 ಮಂದಿ ಸೇರಿದ್ದಾರೆ ಎಂದು ಭಾವಿಸಲಾಗಿದೆ. ಪ್ರವಾಹ ಪೀಡಿತ ಪ್ರದೇಶದಲ್ಲಿ ಕನಿಷ್ಠ 384 ಪ್ರವಾಸಿಗರು ಸಂಪರ್ಕ ಕಳೆದುಕೊಂಡಿದ್ದಾರೆ. ಇವರಲ್ಲಿ 291 ವಿದೇಶಿಯರು ಮತ್ತು 93 ನೇಪಾಳಿ ಪ್ರಜೆಗಳು ಸೇರಿದ್ದಾರೆ ಎಂದು ಹೇಳಿಕೆ ತಿಳಿಸಿದೆ.


