Menu

ನೇಪಾಳ ಪ್ರವಾಹ: ಮಾನಸ ಸರೋವರ ಯಾತ್ರೆ ತೆರಳಿದ್ದ ನಾಲ್ವರು ಕನ್ನಡಿಗರು ನಾಪತ್ತೆ

ನೇಪಾಳ-ಟಿಬೆಟ್‌ ಗಡಿ ಪ್ರದೇಶಗಳಲ್ಲಿ ಭೀಕರ ಪ್ರವಾಹ, ಭೂಕುಸಿತವುಂಟಾಗಿ ಭಾರಿ ಪ್ರಮಾಣದ ಸಾವು ನೋವುಗಳಾಗಿವೆ, ಮಾನಸ ಸರೋವರ ಯಾತ್ರೆಗೆ ತೆರಳಿದ್ದ ನಾಲ್ವರು ಎನ್‌ಆರ್‌ಐ ಕನ್ನಡಿಗರು ನಾಪತ್ತೆಯಾಗಿದ್ದಾರೆ, ಇವರು ಬೆಂಗಳೂರಿನವರು ಎನ್ನಲಾಗಿದೆ.

ಅಮೆರಿಕದ ನಿವಾಸಿಗಳಾಗಿದ್ದ ಈ ನಾಲ್ವರು ಯಾತ್ರಿಕರು ಮಾನಸ ಸರೋವರ ಯಾತ್ರೆಗಾಗಿ ನೇಪಾಳಕ್ಕೆ ಆಗಮಿಸಿದ್ದರು. ಪ್ರವಾಹ ಸಂಭವಿಸಿದ ಪ್ರದೇಶದಲ್ಲಿದ್ದ ಚೀನಾ ರಾಯಭಾರ ಕಚೇರಿಗೆ ತೆರಳಿದ್ದ ಇವರು ನಂತರ ಸ್ನೇಹಿತರು ಮತ್ತು ಕುಟುಂಬದ ಸಂಪರ್ಕಕ್ಕೆ ಸಿಕ್ಕಿಲ್ಲ.

ಅವರ ಸ್ನೇಹಿತರು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದು, ಪತ್ತೆಗಾಗಿ ನೆರವು ಕೋರಿದ್ದಾರೆ. ಹೈದರಾಬಾದ್‌ನ 23 ಮಂದಿ ಹಾಗೂ ಕರ್ನಾಟಕದ ಇಬ್ಬರು ಸೇರಿದಂತೆ ಒಟ್ಟು 25 ಜನರ ತಂಡ ನೇಪಾಳ ಪ್ರವಾಸ ಕೈಗೊಂಡಿತ್ತು.

ಪ್ರವಾಹದಲ್ಲಿ ಸಿಲುಕಿದ್ದ ಕಲಬುರಗಿಯ ಚಿಚಂಚೋಳಿ ತಾಲೂಕಿನ ಮಲ್ಲಿನಾಥ್‌ ಕೊಲಕುಂದಿ ಹಾಗೂ ಸಂಗಮೇಶ್‌ ಕನಕಪುರ ಎಂಬವರನ್ನು ರಾಜ್ಯ ವಿಪತ್ತು ನಿರ್ವಹಣಾ ಪಡೆ ಸಂಪರ್ಕಿಸಿದ್ದು, ಅವರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ರಕ್ಷಿಸಲಾದ ಕನ್ನಡಿಗರನ್ನು ನೇಪಾಳದಿಂದ ನವದೆಹಲಿಗೆ ಕರೆತರಲು ರಾಜ್ಯ ಸರ್ಕಾರ ಅಗತ್ಯ ವ್ಯವಸ್ಥೆ ಕೈಗೊಳ್ಳುತ್ತಿದೆ.

ನೇಪಾಳದ ಭೀಕರ ಪ್ರವಾಹ ಹಾಗೂ ಭೂಕುಸಿತದಲ್ಲಿ ಸಿಲುಕಿರುವ ಕನ್ನಡಿಗರ ಸುರಕ್ಷತೆ ಹಾಗೂ ಮಾಹಿತಿ ಸಂಗ್ರಹಕ್ಕೆ ಕರ್ನಾಟಕ ಸರ್ಕಾರ ಮುಂದಾಗಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಸ್ತೆ ಸಂಪರ್ಕ ಮತ್ತು ಸಂಚಾರ ವ್ಯವಸ್ಥೆ ಕೊಚ್ಚಿ ಹೋಗಿದೆ. ಹಲವು ಭಾರತೀಯರು ನಾಪತ್ತೆಯಾಗಿದ್ದಾರೆ. ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ರಕ್ಷಣಾ ಕಾರ್ಯಕ್ಕೆ ಅಲ್ಲಿ ಸಿಲುಕಿರುವ ಕನ್ನಡಿಗರು ಹಾಗೂ ಅವರ ಕುಟುಂಬಸ್ಥರ ವಿವರಗಳನ್ನು ಕಲೆಹಾಕುತ್ತಿದೆ. ನೇಪಾಳ ಅಥವಾ ಟಿಬೆಟ್ ಭಾಗದಲ್ಲಿ ಸಂಬಂಧಿಕರು, ಸ್ನೇಹಿತರು ಅಥವಾ ಪರಿಚಿತರು ಸಿಲುಕಿಕೊಂಡಿದ್ದರೆ, ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಅಥವಾ ಪ್ರಾಧಿಕಾರಕ್ಕೆ ಒದಗಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ. ಗೂಗಲ್‌ ಫಾರಂನಲ್ಲಿ ವಿವರ ತುಂಬುವಂತೆ ಕೋರಲಾಗಿದೆ.

Related Posts

Leave a Reply

Your email address will not be published. Required fields are marked *