ಪಶು ವೈದ್ಯಾಧಿಕಾರಿಗಳ ನೇಮಕದಲ್ಲಿ ನಡೆದಿರುವ ಅಕ್ರಮಕ್ಕೆ ಸಂಬಂಧಿಸಿದಂತೆ ಕೆಪಿಎಸ್ಸಿ ಕಚೇರಿ ಮೇಲೆ ಸಿಐಡಿ ಪೊಲೀಸರು ಮತ್ತೊಮ್ಮೆ ಮಂಗಳವಾರ ದಾಳಿ ನಡೆಸಿದ್ದಾರೆ.
ಎಸ್ಪಿ ರಾಘವೇಂದ್ರ ಹೆಗ್ಡೆ ನೇತೃತ್ವದಲ್ಲಿ ಸಿಐಡಿ ಅಧಿಕಾರಿಗಳ ತಂಡ ಕೆಪಿಎಸ್ಸಿ ಕಚೇರಿಗೆ ತೆರಳಿ ಹಲವು ದಾಖಲೆಗಳ ಪರಿಶೀಲನೆ ಮುಂದುವರಿಸಿದೆ.
ಪರೀಕ್ಷೆ ಬರೆದಿದ್ದ 329 ಅಭ್ಯರ್ಥಿಗಳಿಗೂ ಸಿಐಡಿ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಅಭ್ಯರ್ಥಿಗಳಿಂದ ವಶಪಡಿಸಿಕೊಂಡಿರುವ ಒಎಂಆರ್ ಕಾರ್ಬನ್ ಶೀಟ್‌ಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಈ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳಿಗೆ ಲಭ್ಯವಾಗಿರುವ ಮಾಹಿತಿ ಹಾಗೂ ಕೆಲವರ ತಪ್ಪೊಪ್ಪಿಗೆ ಹೇಳಿಕೆಗಳ ಆಧಾರದ ಮೇಲೆ ಸಿಐಡಿ ತನಿಖೆಯನ್ನು ತೀವ್ರಗೊಳಿಸಿದೆ ಎಂದು ಹೇಳಲಾಗುತ್ತಿದೆ.
ನೇಮಕದಲ್ಲಿ ಅಕ್ರಮ ಹಾಗೂ ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ರಾಜ್ಯದ 21ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದರು. ಪರೀಕ್ಷೆಯ ಉಸ್ತುವಾರಿ ವಹಿಸಿದ್ದ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಅವರ ನಿವಾಸದಲ್ಲೂ ಇಡಿ ಅಧಿಕಾರಿಗಳು ಶೋಧ ನಡೆಸಿದ್ದರು. ಅಧಿಕಾರಿಯ ಅನುಪಸ್ಥಿತಿಯಲ್ಲಿ ನಿವಾಸ ಪರಿಶೀಲನೆ ನಡೆಸಿದ್ದ ಇಡಿ ತಂಡ, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಮನೆ ಬಾಗಿಲಿಗೆ ನೋಟಿಸ್ ಅಂಟಿಸಿ ತೆರಳಿದೆ.
ಪಶುವೈದ್ಯಾಧಿಕಾರಿ ನೇಮಕಾತಿ ಪರೀಕ್ಷೆಯ ಅಕ್ರಮದ ತನಿಖೆ ಸಿಐಡಿ ಮತ್ತು ಇಡಿ ಎರಡೂ ಹಂತಗಳಲ್ಲಿ ಮುಂದುವರಿಸಿದೆ, ಅಭ್ಯರ್ಥಿಗಳ ವಿಚಾರಣೆ ಹಾಗೂ ದಾಖಲೆಗಳ ಪರಿಶೀಲನೆಯ ಮೂಲಕ ಪ್ರಕರಣದ ಮತ್ತಷ್ಟು ಮಾಹಿತಿ ಬಯಲಿಗೆಳೆಯಲು ಮುಂದಾಗಿವೆ.
ಕೆಪಿಎಸ್‌ಸಿ ಪರೀಕ್ಷಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳಿಗೆ ಆದ ಆನ್ಯಾಯ ಖಂಡಿಸಿ ಮುಖ್ಯಮಂತ್ರಿಯ ಅಧಿಕೃತ ಗೃಹ ಕಚೇರಿ ‘ಕೃಷ್ಣಾ’ಗೆ ಮುತ್ತಿಗೆ ಹಾಕಲು ಎಬಿವಿಪಿ ವಿದ್ಯಾರ್ಥಿಗಳು ಹಾಗೂ ಕಾರ್ಯಕರ್ತರು ಯತ್ನಿಸಿದ್ದಾರೆ.
ಎಬಿವಿಪಿ ಕಾರ್ಯಕರ್ತರು ‘ಕೃಷ್ಣಾ’ ಕಚೇರಿ ಮುಂಭಾಗಕ್ಕೆ ತೆರಳಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಪೊಲೀಸರು ಅವರನ್ನು ತಡೆದು, ಹಲವರನ್ನು ವಶಕ್ಕೆ ಪಡೆದಿದ್ದಾರೆ. ಕೆಪಿಎಸ್‌ಸಿ ಹಗರಣದ ಕುರಿತು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಎಬಿವಿಪಿ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.


