ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯಾಗಿರುವ ತೆಹಲ್ಕಾ ನಿಯತಕಾಲಿಕೆಯ ಮಾಜಿ ಸಂಪಾದಕ ತರುಣ್ ತೇಜ್ಪಾಲ್ ಎರಡು ವಾರಗಳೊಳಗೆ ಶರಣಾಗಬೇಕು ಎಂದು ಸುಪ್ರೀಂಕೋರ್ಟ್ ಖಡಕ್ ಸೂಚನೆ ನೀಡಿದೆ.
ಸಹೋದ್ಯೋಗಿ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಶರಣಾಗತಿಯಿಂದ ವಿನಾಯಿತಿ ನೀಡುವಂತೆ ತೇಜ್ಪಾಲ್ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತೇಜ್ಪಾಲ್ಗೆ ಬಾಂಬೆ ಹೈಕೋರ್ಟ್ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಯಿಂದ ಸದ್ಯಕ್ಕೆ ಶರಣಾಗುವುದಕ್ಕೆ ವಿನಾಯಿತಿ ನೀಡುವಂತೆ ತೇಜ್ಪಾಲ್ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿರುವ ನ್ಯಾಯಾಲಯ, ಎರಡು ವಾರಗಳೊಳಗೆ ಶರಣಾಗುವಂತೆ ಖಡಕ್ ಸೂಚನೆ ನೀಡಿದೆ.
ತಮ್ಮ ವಿರುದ್ಧದ ಅಪರಾಧ ನಿರ್ಣಯ ಮತ್ತು ಶಿಕ್ಷೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿಯನ್ನು ಸೆಪ್ಟೆಂಬರ್ 22ರಂದು ವಿಚಾರಣೆಗೆ ನಿಗದಿಗೊಳಿಸಲಾಗಿದೆ. ಶರಣಾಗತಿ ಪ್ರಮಾಣಪತ್ರ ಸಲ್ಲಿಸಿದ ಬಳಿಕವೇ ಈ ವಿಚಾರಣೆ ನಡೆಯಲಿದೆ ಎಂದು ನ್ಯಾಯಾಲಯ ಹೇಳಿದೆ.
ಆಗಸ್ಟ್ 6ರಂದು ಬಾಂಬೆ ಹೈಕೋರ್ಟ್ ತರುಣ್ ತೇಜ್ಪಾಲ್ ಅವರನ್ನು ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಘೋಷಿಸಿ 10 ವರ್ಷ ಕಠಿಣ ಜೈಲು ವಿಧಿಸಿ ಆದೇಶ ಪ್ರಕಟಿಸಿತ್ತು. ಐದು ವರ್ಷಗಳ ಹಿಂದೆ ವಿಚಾರಣಾ ನ್ಯಾಯಾಲಯ ನೀಡಿದ್ದ ಖುಲಾಸೆ ತೀರ್ಪನ್ನು ಹೈಕೋರ್ಟ್ ತಿರಸ್ಕರಿಸಿತ್ತು.
2013 ರಲ್ಲಿ ಗೋವಾದಲ್ಲಿ ನಡೆದ ಕಾರ್ಯಕ್ರಮ ಸಂದರ್ಭ, ಹೋಟೆಲ್ ಲಿಫ್ಟ್ನಲ್ಲಿ ಮಹಿಳಾ ಸಹೋದ್ಯೋಗಿ ಮೇಲೆ ಅತ್ಯಾಚಾರ ಎಸಗಿದ ಆರೋಪ ತರುಣ್ ತೇಜ್ಪಾಲ್ ಮೇಲಿದೆ. 2021 ರಲ್ಲಿ ಗೋವಾದ ಮಾಪುಸಾ ಸೆಷನ್ಸ್ ನ್ಯಾಯಾಲಯ ಖುಲಾಸೆಗೊಳಿಸಿತ್ತು. ತೀರ್ಪನ್ನು ಪ್ರಶ್ನಿಸಿ ಗೋವಾ ಸರ್ಕಾರ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿತ್ತು. 2026 ರಂದು ಬಾಂಬೆ ಹೈಕೋರ್ಟ್ ಕೆಳ ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸಿ ತೇಜ್ಪಾಲ್ ದೋಷಿ ಎಂದು ಘೋಷಿಸಿ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ.


